ADVERTISEMENT

ಜುಲೈನಲ್ಲಿ 7ನೇ ಆರ್ಥಿಕ ಗಣತಿ

ಸಿಬ್ಬಂದಿ ನಿಯೋಜಿಸಿ, ತರಬೇತಿ ನೀಡಿ: ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 16:36 IST
Last Updated 21 ಜೂನ್ 2019, 16:36 IST
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಭಿರಾಮ್‌ ಜಿ.ಶಂಕರ್‌ 7ನೇ ಆರ್ಥಿಕ ಗಣತಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯನ್ನು ಶುಕ್ರವಾರ ನಡೆಸಿದರು
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಭಿರಾಮ್‌ ಜಿ.ಶಂಕರ್‌ 7ನೇ ಆರ್ಥಿಕ ಗಣತಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯನ್ನು ಶುಕ್ರವಾರ ನಡೆಸಿದರು   

ಮೈಸೂರು: ‘ಜಿಲ್ಲೆಯಲ್ಲಿ ಜುಲೈ ತಿಂಗಳಿನಿಂದ ನಡೆಯುವ 7ನೇ ಆರ್ಥಿಕ ಗಣತಿ ಕಾರ್ಯಕ್ಕೆ ಶೀಘ್ರದಲ್ಲೇ ಸಿಬ್ಬಂದಿ ನೇಮಿಸಿ, ತರಬೇತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

‘ಜಿಲ್ಲೆಯಲ್ಲಿ ಯಾವುದೇ ಕಟ್ಟಡ/ಉದ್ದಿಮೆ ಬಿಟ್ಟು ಹೋಗದಂತೆ, ನಿಖರವಾಗಿ ಗಣತಿ ಕಾರ್ಯವನ್ನು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಾರ್ಗಸೂಚಿ ಪ್ರಕಾರವೇ ಸಕಾಲದಲ್ಲಿ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅಭಿರಾಮ್‌ ಹೇಳಿದರು.

‘ನಗರ, ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಂತ ಉಪಯೋಗಕ್ಕಲ್ಲದ ಕೃಷಿ ಮತ್ತು ಕೃಷಿಯೇತರ ಸರಕುಗಳ ಉತ್ಪಾದನೆ, ವಿತರಣೆ, ಮಾರಾಟ, ಸೇವೆ ಮುಂತಾದ ಯಾವುದೇ ಆರ್ಥಿಕ ಚಟುವಟಿಕೆಗಳಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲಾ ಉದ್ದಿಮೆಗಳ ಗಣತಿ ಕಾರ್ಯವನ್ನು ಏಳನೇ ಆರ್ಥಿಕ ಗಣತಿಯಲ್ಲಿ ಕೈಗೊಳ್ಳಲಾಗುವುದು. ಈ ಗಣತಿಯು 3 ತಿಂಗಳು ನಡೆಯಲಿದೆ’ ಎಂದು ತಿಳಿಸಿದರು.

ADVERTISEMENT

‘ಉದ್ದಿಮೆಗಳನ್ನು ಗಣತಿ ಮಾಡುವಾಗ, ಕಟ್ಟಡಗಳಲ್ಲಿ ನಡೆಯುತ್ತಿರುವ ಉದ್ದಿಮೆಗಳನ್ನು ಆಯಾ ಸ್ಥಳದಲ್ಲಿಯೇ ಗಣತಿ ಮಾಡಲಾಗುವುದು. ರಸ್ತೆ ಬದಿಯಲ್ಲಿ, ಬೀದಿಗಳಲ್ಲಿ, ಬಯಲು ಪ್ರದೇಶದಲ್ಲಿ ಮುಂತಾದ ಯಾವುದೇ ಕಟ್ಟಡವಲ್ಲದ ಪ್ರದೇಶಗಳಲ್ಲಿ ನಡೆಯುತ್ತಿರುವ ಆಯಾ ಉದ್ದಿಮೆಯ ಮಾಲೀಕನ ಮನೆಯಲ್ಲಿಯೇ ಗಣತಿ ಮಾಡಲಾಗುವುದು. ಗಣತಿದಾರರು ಮನೆಗಳಿಗೆ, ಉದ್ದಿಮೆಗಳಿಗೆ ಭೇಟಿ ನೀಡಿದಾಗ, ಉದ್ದಿಮೆಯ ಮಾಲೀಕರು ಹಾಗೂ ಸಾರ್ವಜನಿಕರು ಅಗತ್ಯವಾದ ಎಲ್ಲಾ ವಿವರಗಳನ್ನು ಒದಗಿಸಬೇಕು’ ಎಂದು ಅಭಿರಾಮ್‌ ಸೂಚಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಸಹಾಯಕ ನಿರ್ದೇಶಕ ಪ್ರಕಾಶ.ಎಂ ಮಾತನಾಡಿ, ‘ಪ್ರತಿ 5 ವರ್ಷಗಳಿಗೊಮ್ಮೆ ಆರ್ಥಿಕ ಗಣತಿ ನಡೆಸಲಾಗುತ್ತಿದೆ. ಈ ಹಿಂದಿನ ಗಣತಿಗಳನ್ನು ಸರ್ಕಾರಿ ಹಾಗೂ ಅರೆ ಸರ್ಕಾರಿ ಸಿಬ್ಬಂದಿಯವರಿಂದ ನಡೆಸಲಾಗಿದ್ದು, 2014ರಲ್ಲಿ ನಡೆದ 6ನೇ ಆರ್ಥಿಕ ಗಣತಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 1,40,232 ಉದ್ದಿಮೆಗಳನ್ನು ಗುರುತಿಸಲಾಗಿದೆ’ ಎಂದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಮ್ಮ.ಎಂ, ಮೈಸೂರು ಉಪ ವಿಭಾಗಾಧಿಕಾರಿ ಶಿವೇಗೌಡ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.