ADVERTISEMENT

ಆಸ್ತಿಗಾಗಿ ಮೃತ ಮಹಿಳೆಯ ಹೆಬ್ಬೆರಳಿನ ಮುದ್ರೆಯನ್ನು ಹಾಕಿಸಿಕೊಂಡ ಸಂಬಂಧಿಕರು!

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 5:27 IST
Last Updated 29 ನವೆಂಬರ್ 2021, 5:27 IST
ಆಸ್ತಿಗಾಗಿ ಮೃತ ಮಹಿಳೆಯ ಹೆಬ್ಬೆರಳಿನ ಮುದ್ರೆಯನ್ನು ಹಾಕಿಸಿಕೊಂಡ ಸಂಬಂಧಿಕರು!
ಆಸ್ತಿಗಾಗಿ ಮೃತ ಮಹಿಳೆಯ ಹೆಬ್ಬೆರಳಿನ ಮುದ್ರೆಯನ್ನು ಹಾಕಿಸಿಕೊಂಡ ಸಂಬಂಧಿಕರು!   

ಮೈಸೂರು: ಇಲ್ಲಿನ ಶ್ರೀರಾಂಪುರ ನಿವಾಸಿ ಜಯಮ್ಮ ಎಂಬುವವರು ಮೃತಪಟ್ಟ ಬಳಿಕ ಅವರ ಹೆಬ್ಬೆರಳಿನ ಮುದ್ರೆಯನ್ನು ಸಂಬಂಧಿಕರು ಕೆಲ ಕಾಗದ ಪತ್ರಗಳಿಗೆ ಹಾಕಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜಯಮ್ಮ ಅವರ ಅಕ್ಕನ ಮಗ ಸುರೇಶ್ ಎಂಬಾತನ ವಿರುದ್ಧ ಇಲ್ಲಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಐ‍‍ಪಿಸಿ ಸೆಕ್ಷನ್ 420, 467, 511 ಅನ್ವಯ ಭಾನುವಾರ ಪ್ರಕರಣ ದಾಖಲಾಗಿದೆ.

‘ಜಯಮ್ಮ ಅವರಿಗೆ ಮಕ್ಕಳಿರಲಿಲ್ಲ. ಇವರ ಪತಿ ಬಹಳ ಹಿಂದೆಯೇ ಮೃತಪಟ್ಟಿದ್ದರು. ಇವರಿಗೆ ಮನೆ ಹಾಗೂ ಜಮೀನು ಸೇರಿದಂತೆ ಸ್ವಲ್ಪ ಆಸ್ತಿ ಇತ್ತು. ಸಂಬಂಧಿಕರು ನೋಡಿಕೊಳ್ಳದೇ ಇದ್ದುದ್ದರಿಂದ ಇವರು ಒಂಟಿಯಾಗಿ ಜೀವಿಸುತ್ತಿದ್ದು. ಅನಾರೋಗ್ಯದಿಂದ ನ.17ರಂದು ಜಯಮ್ಮ ಮೃತಪಟ್ಟ ಬಳಿಕ ಸುಮಾರು 7ರಿಂದ 8 ಕಾಗದ ಪತ್ರಗಳಿಗೆ ಹೆಬ್ಬೆರಳಿನ ಮುದ್ರೆಯನ್ನು ಸುರೇಶ್‌ ಹಾಕಿಕೊಳ್ಳುತ್ತಿದ್ದ. ಇದನ್ನು ವಿಡಿಯೊ ಮಾಡಿಕೊಂಡ ಸಂಬಂಧಿಕರೊಬ್ಬರು ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಮೃತ ಜಯಮ್ಮ ಅವರಿಗೆ ಪಿತ್ರಾರ್ಜಿತ ಆಸ್ತಿ ಇತ್ತು. ಆಸ್ತಿ ವಿವಾದವನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕೇ ವಿನಹಾ ಶವದ ಹೆಬ್ಬೆಟ್ಟು ಹಾಕಿಕೊಳ್ಳುವುದು ಕಾನೂನು ಪ್ರಕಾರ ತಪ್ಪು, ಮಾತ್ರವಲ್ಲ ತೀರಾ ಅಮಾನವೀಯ. ಘಟನೆ ನಡೆದು ಸಾಕಷ್ಟು ದಿನಗಳಾದರೂ ನನ್ನನ್ನು ಈ ಸನ್ನಿವೇಶ ಕಾಡುತ್ತಿತ್ತು’ ಎಂದು ಸಂಬಂಧಿಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.