ADVERTISEMENT

ಮೈಸೂರು: ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಗೆ ಒತ್ತಾಯ

ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಕೆ.ಎಸ್.ಭಗವಾನ್ ಪ್ರತಿಭಟನೆಯಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 11:46 IST
Last Updated 19 ಜುಲೈ 2021, 11:46 IST
ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಮೈಸೂರು: ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು, ಸಾಹಿತಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿಗಳಾದ ಸಿ.ಪಿ.ಕೃಷ್ಣಕುಮಾರ್, ಕೆ.ಎಸ್‌.ಭಗವಾನ್ ಸೇರಿದಂತೆ ಸಾಹಿತಿಗಳೂ ಭಾಗಿಯಾದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ನೀಡಿದೆ. ಆದರೆ, ಕನ್ನಡದಲ್ಲಿ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಇನ್ನೂ ಮುಂದಾಗಿಲ್ಲ. ಇದು ಕೇಂದ್ರದ ಕನ್ನಡ ವಿರೋಧಿ ಧೋರಣೆ ಎಂದು ಅವರು ಕಿಡಿಕಾರಿದರು.‌‌

ADVERTISEMENT

ಒಟ್ಟು 11 ಬ್ಯಾಂಕುಗಳಲ್ಲಿ 3 ಸಾವಿರಕ್ಕೂ ಅಧಿಕ ಹುದ್ದೆಗಳು ಈಗ ಖಾಲಿ ಇವೆ. ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವೇ ಪರೀಕ್ಷೆ ನಡೆಸಲಾಗುತ್ತಿರುವುದು ಯಾವ ನ್ಯಾಯ ಎಂದು ಪ್ರತಿಭಟನಾನಿರತರು ಪ್ರಶ್ನಿಸಿದರು.

ಕರ್ನಾಟಕದಿಂದ ಆಯ್ಕೆಯಾದ 25 ಮಂದಿ ಬಿಜೆಪಿ ಸಂಸದರು ಈ ಪ್ರಶ್ನೆಯನ್ನು ಕೇಳದಿರುವುದು ನಿಜಕ್ಕೂ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕನಿಷ್ಠ ಪಕ್ಷ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ನ್ಯಾಯವಾಗಿ ದೊರೆಯಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ ಪ್ರತಿಭಟನಕಾರರು, ‘ಇನ್ನಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಕುರಿತು ದನಿ ಎತ್ತಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ಅಧ್ಯಕ್ಷ ಬಿ.ಎ.ಶಿವಶಂಕರ್,ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ್ ಗೌಡ, ಸಮಾಜಸೇವಕರಾದ ಡಾ.ರಘುರಾಂ ವಾಜಪೇಯಿ, ಮಡ್ಡಿಕೆರೆ ಗೋಪಾಲ್, ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಸಿ.ಜೆ.ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.