ಮೈಸೂರು: ಇಲ್ಲಿನ ವಿಶ್ವವಿಖ್ಯಾತ ಚಾಮುಂಡಿಬೆಟ್ಟದಲ್ಲಿ ಸುರಿದ ಭಾರಿ ಮಳೆಯಿಂದಾಗಿ ‘ನಂದಿ’ ವಿಗ್ರಹದ ಸಂಪರ್ಕ ರಸ್ತೆಯಲ್ಲಿ ಆಗಿದ್ದ ಭೂಕುಸಿತದ ದುರಸ್ತಿ ಕಾರ್ಯ ಮೂರೂವರೆ ವರ್ಷ ಕಳೆದರೂ ಪೂರ್ಣಗೊಂಡಿಲ್ಲ.
ಜೂನ್‌ಗೆ ಮುಂಗಾರು ಮಳೆಗಾಲ ಆರಂಭವಾಗುತ್ತಿದ್ದು, ಆ ವೇಳೆಗೂ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ ಎಂಬಂತಹ ಸ್ಥಿತಿ ಇದೆ. ಕಾಮಗಾರಿಯು ಆಮೆವೇಗದಲ್ಲಿ ನಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ಅಲ್ಲದೇ, ಮೇಲುಸ್ತುವಾರಿಯ ಕೊರತೆಯೂ ಕಂಡುಬಂದಿದೆ. ಜನಪ್ರತಿನಿಧಿಗಳಾಗಲಿ, ಹಿರಿಯ ಅಧಿಕಾರಿಗಳಾಗಲಿ ಇದರತ್ತ ಗಮನ ನೀಡಿಲ್ಲ. ಗಂಭೀರವಾಗಿ ಪರಿಗಣಿಸಿಲ್ಲ. ಪರಿಣಾಮ, ಮಳೆಗಾಲದಲ್ಲಿ ಮತ್ತಷ್ಟು ಕುಸಿತ ಉಂಟಾಗುವ ಆತಂಕ ಪರಿಸರವಾದಿಗಳದಾಗಿದೆ. ಕಾಮಗಾರಿಗೆ ಮಳೆ ಅಡ್ಡಿಯಾಗುವ ಸಾಧ್ಯತೆಯೂ ಇದೆ.
ಕಾಮಗಾರಿ ಟೆಂಡರ್ ಪಡೆದಿರುವ ಗುತ್ತಿಗೆದಾರರು ತ್ವರಿತವಾಗಿ ಕೆಲಸ ಮಾಡಿದ್ದರೆ ಹಾಗೂ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ದುರಸ್ತಿ ಕಾರ್ಯ ಪೂರ್ಣಗೊಂಡು, ಆ ಭಾಗದಲ್ಲಿನ ನಂದಿ ಮಾರ್ಗವು ಸಂಚಾರಕ್ಕೆ ಮುಕ್ತಗೊಂಡು ಒಂದು ವರ್ಷವೇ ಕಳೆಯಬೇಕಾಗಿತ್ತು. ಆದರೆ, ಇನ್ನೂ ಹಲವು ತಿಂಗಳುಗಳೇ ಬೇಕಾಗಬಹುದು ಎಂಬ ಸ್ಥಿತಿ ಕಾಮಗಾರಿ ಸ್ಥಳದಲ್ಲಿ ಕಂಡುಬಂದಿತು. ನಡೆಯಬೇಕಾದ ಕೆಲಸ ಇನ್ನೂ ಸಾಕಷ್ಟಿರುವುದು ಅಲ್ಲಿನ ಕಾರ್ಮಿಕರ ಮಾತುಗಳಿಂದ ತಿಳಿದುಬಂದಿತು.
2021ರ ಅಕ್ಟೋಬರ್‌ನಲ್ಲಿ ಕುಸಿತ ಸಂಭವಿಸಿತ್ತು. ಬಳಿಕ ಆ ಮಾರ್ಗದಲ್ಲಿ ಸಾರ್ವಜನಿಕರು–ಅವರ ವಾಹನ ಸಂಚಾರ ಬಂದ್ ಆಗಿದೆ. ರಸ್ತೆಯ ಮರುನಿರ್ಮಾಣ ಕುಂಟುತ್ತಿದೆ. ಸೂಕ್ಷ್ಮ ಸಂರಚನೆಯನ್ನು ಹೊಂದಿರುವ ಈ ಬೆಟ್ಟದಲ್ಲಿ ಸುರಕ್ಷತೆಯ ದೃಷ್ಟಿಯಿಂದಾಗಿ, ಈ ದುರಸ್ತಿ ಕಾರ್ಯವು ತ್ವರಿತವಾಗಿ ಪೂರ್ಣಗೊಳ್ಳುವುದು ಮಹತ್ವದ್ದಾಗಿದೆ. ಈ ಕಾರಣದಿಂದಾಗಿಯೇ, ದುರಸ್ತಿ ಸಂಪೂರ್ಣವಾಗುವುದು ಯಾವಾಗ ಎಂಬುದು ಜನರ ಪ್ರಶ್ನೆಯಾಗಿದೆ.
‘ನಂದಿ’ ಸಂಪರ್ಕ ರಸ್ತೆಯಲ್ಲಿ ಭೂಕುಸಿತವಾದ ಕೆಲವೇ ದಿನಗಳಲ್ಲಿ, ಕುಸಿತದ ಸ್ಥಳದಿಂದ 50 ಮೀಟರ್‌ನಷ್ಟು ರಸ್ತೆ ಬಿರುಕು ಬಿಟ್ಟು ಮೂರು ಕಡೆ ಕುಸಿದಿತ್ತು. ಸದ್ಯ, ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಉಂಟಾಗಿದ್ದ ಸ್ಥಳದಲ್ಲಿ ದುರಸ್ತಿ ನಡೆಯುತ್ತಿದೆ. ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಕಾರ್ಯವು ಇನ್ನೂ ಪ್ರಗತಿಯಲ್ಲಿದೆ. ಅದಕ್ಕಿಂತ ಮುಂದೆ, ಕಲ್ಲುಗಳನ್ನು ಜೋಡಿಸಿ ಕಬ್ಬಿಣದ ಜಾಲರಿಯನ್ನು ಅಳವಡಿಸಿ ಮತ್ತೊಂದು ತಡೆಗೋಡೆ ಕಟ್ಟುವ ಕೆಲಸ ನಡೆಯುತ್ತಿದೆ.
ಪ್ರಾಯೋಗಿಕವಾಗಿ ಕೆಲವು ತೊಡಕುಗಳಿವೆ. ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು ಕಾಮಗಾರಿಯು 2–3 ತಿಂಗಳಲ್ಲಿ ಪೂರ್ಣಗೊಳ್ಳಲಿದೆಜಿ.ಕೆ. ರೇವಣ್ಣ ಎಇ ಲೋಕೋಪಯೋಗಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.