ADVERTISEMENT

ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ: ಎಂ.ಕೃಷ್ಣಯ್ಯ

ಏಕಲವ್ಯ ಶಿಕ್ಷಣ ಮಾದರಿ ಗಿರಿಜನ ಮಕ್ಕಳ ಶಿಕ್ಷಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:57 IST
Last Updated 20 ಫೆಬ್ರುವರಿ 2026, 2:57 IST
ಎಂ.ಕೃಷ್ಣಯ್ಯ
ಎಂ.ಕೃಷ್ಣಯ್ಯ   

ಹುಣಸೂರು: ‘ಆದಿವಾಸಿ ಬುಡಕಟ್ಟು ಸಮುದಾಯ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆದಿವಾಸಿ ನಿಗಮ ಮಂಡಳಿ ರಚಿಸಬೇಕು ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ ಅಧ್ಯಕ್ಷ ಎಂ.ಕೃಷ್ಣಯ್ಯ ಆಗ್ರಹಿಸಿದರು.

‘ಸಿದ್ದರಾಮಯ್ಯ ಅವರು ದಾಖಲೆ ಆಯವ್ಯಯ ಮಂಡಿಸುತ್ತಿದ್ದು, ಆದಿವಾಸಿ ಗಿರಿಜನರ ಸಮಾಜಮುಖಿ ಯೋಜನೆಗಳಿಗಾಗಿ ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಪ್ರತ್ಯೇಕಿಸಿ ಆದಿವಾಸಿ ನಿಗಮ ಮಂಡಳಿ ರಚಿಸಿ ಗಿರಿಜನರಿಗೆ ಪ್ರತ್ಯೇಕ ಸವಲತ್ತು ಕಲ್ಪಿಸಬೇಕು. ಎಚ್.ಡಿ.ಕೋಟೆ ಕೆರೆ ಹಾಡಿಯಲ್ಲಿ ನೀಡಿದ ಭರವಸೆ ಪೂರೈಸಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಕೇಂದ್ರ ಸರ್ಕಾರ ಜೇನುಕುರುಬ ಮತ್ತು ಕೊರಗ ಸಮುದಾಯಕ್ಕೆ ₹4.50 ಲಕ್ಷ ವೆಚ್ಚದಲ್ಲಿ ವಸತಿ ಯೋಜನೆ ಜಾರಿಗೊಳಿಸಿದ್ದು, ರಾಜ್ಯದಲ್ಲಿ ಅತಿ ಸೂಕ್ಷ್ಮಜಾತಿಗೆ ಸೇರಿದ 11 ಆದಿವಾಸಿ ಸಮುದಾಯಕ್ಕೆ ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರ ವಸತಿ ಯೋಜನೆ ಅನುಷ್ಠಾನಗೊಳಿಸಬೇಕು. ಡೋಂಗ್ರಿ ಗೆರಾಸಿಯ ಅಲೆಮಾರಿ ಸಮುದಾಯಕ್ಕೆ ವಸತಿ ಕಲ್ಪಿಸಿ ಪುನರ್ವಸತಿಗೊಳಿಸಬೇಕಾಗಿದೆ’ ಎಂದರು.

ADVERTISEMENT

‘ಆದಿವಾಸಿ ಗಿರಿಜನ ಸಮುದಾಯಕ್ಕೆ ಪ್ರತ್ಯೇಕ ವಿ.ವಿ. ಸ್ಥಾಪಿಸಿ ಗಿರಿಜನರ ಬದುಕು ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧ್ಯಯನ ಮತ್ತು ಗಿರಿಜನ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಕಲ್ಪಿಸಲು ಅವಕಾಶ ನೀಡಬೇಕಾಗಿದೆ. ಗಿರಿಜನರ ಮಕ್ಕಳು ಇತರೆ ಸಮುದಾಯದೊಂದಿಗೆ ಸ್ಪರ್ಧೆ ನೀಡಲಾಗದೆ ಶಿಕ್ಷಣದಿಂದಲೇ ಹೊರಗುಳಿಯುವ ಪರಿಸ್ಥಿತಿ ಎದುರಾಗಿದೆ. ಯುವಕರು ಕಾಯಂ ಕೂಲಿ ಕಾರ್ಮಿಕರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಆಗಸ್ಟ್‌ 31ರಂದು ಅಪರಾಧಿ ಬುಡಕಟ್ಟು ಸಮುದಾಯ ಎನ್ನುವುದನ್ನು ಪದಕ್ಕೆ ಮುಕ್ತಿ ಹಾಡಲಾಗಿದ್ದು, ಆ ದಿನವನ್ನು ವಿಶ್ವ ಆದಿವಾಸಿ ದಿನ ಎಂದು ಘೋಷಿಸಬೇಕು, ಬಿರ್ಸಾ ಮುಂಡಾ ಜಯಂತಿಯನ್ನು ರಾಜ್ಯದಲ್ಲಿ ಅರಣ್ಯದಂಚಿನ ಜಿಲ್ಲಾ ಕೇಂದ್ರಕ್ಕೆ ಸೀಮಿತಗೊಳಿಸಿದ್ದು, ಜಯಂತಿ ರಾಜ್ಯದಾದ್ಯಂತ ಆಚರಿಸುವಂತೆ ಆದೇಶಿಸಬೇಕು’ ಎಂದರು.

‘ಕೇಂದ್ರ ಸರ್ಕಾರ ಗಿರಿಜನ ಮಕ್ಕಳ ಶಿಕ್ಷಣಕ್ಕೆ ಜಾರಿಗೊಳಿಸಿದ ಏಕಲವ್ಯ ಕೇಂದ್ರೀಯ ಶಿಕ್ಷಣ ಮಾದರಿಯಲ್ಲೇ ರಾಜ್ಯ ಸರ್ಕಾರ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಆಶ್ರಮ ಶಾಲೆ ತೆರೆದು ಗಿರಿಜನ ಮಕ್ಕಳಿಗೆ ಶಿಕ್ಷಣ ನೀಡಬೇಕು. ಇದಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಜೇನುಕುರುಬ ಮಕ್ಕಳ ವ್ಯಾಸಂಗಕ್ಕೆ ನೀಡಿರುವ ಅವಕಾಶದಂತೆ ಇತರೆ ಬುಡಕಟ್ಟು ಸಮುದಾಯದ ಮಕ್ಕಳಿಗೂ ವಿಸ್ತರಿಸಬೇಕು’ ಎಂದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್‌ ಕಾರ್ಯದರ್ಶಿ ಜಿ.ಸ್ವಾಮಿ, ನಿರ್ದೇಶಕ ಶಿವಾಜಿ, ಲ್ಯಾಂಪ್‌ ಸೊಸೈಟಿ ಹುಣಸೂರು ಅಧ್ಯಕ್ಷ ಸುಬ್ರಹ್ಮಣ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.