ADVERTISEMENT

ಮೈಸೂರು: ಎನ್.ರವಿಕುಮಾರ್ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 13:59 IST
Last Updated 2 ಜುಲೈ 2025, 13:59 IST
ಎನ್.ರವಿಕುಮಾರ್
ಎನ್.ರವಿಕುಮಾರ್   

ಮೈಸೂರು: ‘ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನಪರಿಷತ್‌ ಸದಸ್ಯ ಎನ್.ರವಿಕುಮಾರ್ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಇಲ್ಲಿನ ‘ಒಡನಾಡಿ’ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪರಶುರಾಮ್‌ ಎಂ.ಎಲ್. ಮತ್ತು ಕಾರ್ಯದರ್ಶಿ ಸ್ಟ್ಯಾನ್ಲಿ ಕೆ.ವಿ. ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

‘ಮುಖ್ಯ ಕಾರ್ಯದರ್ಶಿಯು ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಹಾಗೂ ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ’ ಎಂಬ ಹೇಳಿಕೆಯನ್ನು ರವಿಕುಮಾರ್ ನೀಡಿದ್ದಾರೆ. ‘ಅವರ ದ್ವಂದ್ವ ಮಾತುಗಳು ಆಶ್ಚರ್ಯ ಹಾಗೂ ಅಸಹನೀಯವಾಗಿವೆ’ ಎಂದು ಆರೋಪಿಸಿದ್ದಾರೆ.

‘ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರ ಹೇಳಿಕೆಯು ರಾಜ್ಯದಲ್ಲಿ ಉದ್ಯೋಗ ಮಾಡುತ್ತಿರುವ ಹೆಣ್ಣು ಮಕ್ಕಳ ಘನತೆಗೆ ಧಕ್ಕೆ ತರುವಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗುತ್ತದೆ. ಈ ವಿಚಾರದಲ್ಲಿ ಸತ್ಯಾಸತ್ಯತೆ ಪರಿಶೀಲಿಸಲು ಎಫ್ಐಆರ್‌ ದಾಖಲಿಸಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

‘ರವಿಕುಮಾರ್ ಹೇಳಿಕೆಯು ಮಹಿಳೆಯರ ಘನತೆ ಕುಗ್ಗಿಸುವಂಥದ್ದಲ್ಲದೇ ಆತಂಕವನ್ನೂ ಸೃಷ್ಟಿಸುವಂತಾಗಿದೆ. ಹೀಗಾಗಿ, ಸೂಕ್ತ ತನಿಖೆ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಲಿಂಕ್ ಲಗತ್ತಿಸಿರುವ ಅವರು, ಹೈಕೋರ್ಟ್‌ ರಿಜಿಸ್ಟ್ರಾರ್ ಅವರಿಗೂ ಪ್ರತಿಯನ್ನು ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.