ADVERTISEMENT

ದೇಸಿ ಬೀಜೋತ್ಪಾದನೆಯಿಂದ ಕೃಷಿ ಆದಾಯ ಹೆಚ್ಚಳ: ಮ್ರತಾ ಶರ್ಮ‌

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 16:23 IST
Last Updated 4 ಸೆಪ್ಟೆಂಬರ್ 2024, 16:23 IST
ಮೈಸೂರಿನ ಬಂಡೀಪಾಳ್ಯ ಎಪಿಎಂಸಿ ಯಾರ್ಡ್‌ನಲ್ಲಿರುವ ‘ದೇಸಿ ಸೀಡ್ಸ್‌ ಪ್ರಡ್ಯೂಸರ್ ಕಂಪನಿ’ಯ ವಾರ್ಷಿಕ ಸಭೆಯಲ್ಲಿ ಸದಸ್ಯರು ಪಾಲ್ಗೊಂಡಿದ್ದರು
ಮೈಸೂರಿನ ಬಂಡೀಪಾಳ್ಯ ಎಪಿಎಂಸಿ ಯಾರ್ಡ್‌ನಲ್ಲಿರುವ ‘ದೇಸಿ ಸೀಡ್ಸ್‌ ಪ್ರಡ್ಯೂಸರ್ ಕಂಪನಿ’ಯ ವಾರ್ಷಿಕ ಸಭೆಯಲ್ಲಿ ಸದಸ್ಯರು ಪಾಲ್ಗೊಂಡಿದ್ದರು   

ಮೈಸೂರು: ‘ರೈತರು ದೇಸಿ ಬೀಜೋತ್ಪಾದನೆ ಮಾಡುವ ಮೂಲಕ ಕೃಷಿ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ’ ಎಂದು ಸಂಪನ್ಮೂಲ ವ್ಯಕ್ತಿ ನಮ್ರತಾ ಶರ್ಮ‌ ಅಭಿಪ್ರಾಯಪಟ್ಟರು. 

ಇಲ್ಲಿನ ಬಂಡೀಪಾಳ್ಯ ಎಪಿಎಂಸಿ ಯಾರ್ಡ್‌ನಲ್ಲಿರುವ ‘ದೇಸಿ ಸೀಡ್ಸ್‌ ಪ್ರಡ್ಯೂಸರ್ ಕಂಪನಿ’ಯ 10ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುತ್ತಿರುವ ರೈತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಪೂರಕವಾದ ದೇಸಿ ಬೀಜಗಳಿಗೆ ಬಹಳಷ್ಟು ಬೇಡಿಕೆ ಇದೆ. ಗ್ರಾಹಕರು ವಿಷಮುಕ್ತವಾಗಿ ಬೆಳೆದ, ನಾಟಿ ಹಣ್ಣು, ತರಕಾರಿ ಮತ್ತು ಧಾನ್ಯಗಳ ಬಳಕೆಗೆ ಆಸಕ್ತಿ ತೋರುತ್ತಿದ್ದಾರೆ. ಗುಣಮಟ್ಟದ ಬಿತ್ತನೆ ಬೀಜಗಳ ಕೊರತೆ ಇರುವುದರಿಂದ, ರೈತ ಗುಂಪು ಮತ್ತು ಮಹಿಳಾ ಸಂಘಗಳು ಸಮುದಾಯ ಬೀಜ ಬ್ಯಾಂಕ್‌ಗಳನ್ನು ಆರಂಭಿಸಿ, ದೇಸಿ ಬೀಜೋತ್ಪಾದನೆಗೆ ಉತ್ತೇಜನ ಕೊಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ರೈತರಿಗೆ ಚೆಕ್ ವಿತರಿಸಿ ಮಾತನಾಡಿದ ಸಹಜ ಸಮೃದ್ಧ ಸಂಸ್ಥೆಯ ಅಧ್ಯಕ್ಷ ಎನ್.ಆರ್. ಶೆಟ್ಟಿ ಮಾತನಾಡಿ, ‘ಖಾಸಗಿ ಬೀಜ ಕಂಪನಿಗಳು ದುಬಾರಿ ಬೆಲೆಗೆ ಬೀಜಗಳನ್ನು ಮಾರುತ್ತಿವೆ. ಮಾರುಕಟ್ಟೆ ಕುಸಿತ ಅಥಾವ ಹವಾಮಾನ ವೈಪರೀತ್ಯದಿಂದ ಬೆಳೆ ನಾಶವಾದರೆ ರೈತರ ಗೋಳು ಕೇಳುವವರಿಲ್ಲ. ಸ್ಥಳೀಯ ವಾತಾವರಣ ಮತ್ತು ಮಣ್ಣಿಗೆ ಸೂಕ್ತವಾಗಬಲ್ಲ ದೇಸಿಯ ತಳಿಗಳ ಬೀಜಗಳನ್ನು ರೈತರು ಬಳಸಬೇಕು. ಈ ನಿಟ್ಟಿನಲ್ಲಿ‌ ಸಹಜ ಸೀಡ್ಸ್‌ ಗುಣಮಟ್ಟದ ದೇಸಿ ಬೀಜಗಳನ್ನು ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ‌ ಸಮಾನ ಮನಸ್ಕ ಬೀಜ ಸಂರಕ್ಷಕರು ಸೇರಿ ಆರಂಭಿಸಿದ ರೈತ ಕಂಪನಿ, ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಿದೆ. 2023-24ನೇ ಸಾಲಿನಲ್ಲಿ ₹ 1.20 ಕೋಟಿ ವಹಿವಾಟು ಮಾಡಿರುವ ಕಂಪನಿ ₹ 4.88 ಲಕ್ಷ ಲಾಭ ಗಳಿಸಿದೆ. ಲಾಭಾಂಶವನ್ನು ದೇಸಿ ಬೀಜ ಪೂರೈಸಿದ ಷೇರುದಾರ ರೈತರಿಗೆ ಹಂಚಲಾಯಿತು.

₹ 7.5 ಲಕ್ಷ ಮೌಲ್ಯದ ಸಾವಯವ ಬೀಜಗಳನ್ನು ಉತ್ಪಾದಿಸಿದ ಬೆಳಗಾವಿಯ ಶಂಕರ ಲಂಗಟಿ ಮತ್ತು ಅವರ ತಂಡ ₹ 37,599 ಬೋನಸ್ ಪಡೆಯಿತು. ಪಿರಿಯಾಪಟ್ಟಣದ ಸಹಜ ಸಾವಯವ ಕೃಷಿಕರ ಬಳಗವು ₹ 3.51 ಲಕ್ಷ ಮೌಲ್ಯದ ಬೀಜ ಪೂರೈಸಿ, ₹ 17,790 ಬೋನಸ್ ಗಳಿಸಿತು. ಕೊಳ್ಳೇಗಾಲದ ಅರೇಪಾಳ್ಯದ ಲೋಕೇಶ್‌ ₹ 2.84 ಲಕ್ಷ ಮೌಲ್ಯದ ಬೀಜ ಪೂರೈಸಿ ₹ 14,207 ಬೋನಸ್ ಪಡೆದರು. ಒಟ್ಟು 23 ರೈತರಿಗೆ ಬೋನಸ್ ವಿತರಿಸಲಾಯಿತು. 

ಸಹಜ ಆರ್ಗ್ಯಾನಿಕ್ಸ್‌ನ ಕಾರ್ಯನಿರ್ವಹಣಾಧಿಕಾರಿ ಸೋಮೇಶ್‌, ದೇಸಿ ಸೀಡ್ಸ್‌ ಪ್ರಡ್ಯೂಸರ್‌ ಕಂಪನಿಯ ನಿರ್ದೇಶಕರಾದ ನರಸಿಂಹ ರೆಡ್ಡಿ, ಬೋರೇಗೌಡ, ಶ್ರೀನಿವಾಸ್ ಮತ್ತು ಶ್ರೇಣಿಕ್ ರಾಜ್ ಮಾತನಾಡಿದರು. ಕಂಪನಿ ಮುನ್ನಡೆಸುತ್ತಿರುವ ಜಿ.ಕೃಷ್ಣ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸಹಜ ಸೀಡ್ಸ್‌ ಕಾರ್ಯನಿರ್ವಹಣಾಧಿಕಾರಿ ರವಿ ಮಾಗಲ್, ಸಿಬ್ಬಂದಿ ಮಂಜು ಕೆ.ಎಸ್., ಸೈಯದ್ ಜಮಾಲ್, ಶಿವರುದ್ರ, ಅರ್ಪಿತಾ ಮತ್ತು ಮನು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.