ADVERTISEMENT

ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ: ಚುರುಕುಗೊಂಡ ಕೋವಿಡ್‌ ಸಂಪರ್ಕಿತರ ಪತ್ತೆ

ಸೋಂಕು ಹರಡುವಿಕೆ ತಡೆಗಟ್ಟಲು ಹರಸಾಹಸ

ಡಿ.ಬಿ, ನಾಗರಾಜ
Published 28 ಏಪ್ರಿಲ್ 2021, 6:21 IST
Last Updated 28 ಏಪ್ರಿಲ್ 2021, 6:21 IST
ಹೊಸ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್‌ ಪೀಡಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ ತಂಡ
ಹೊಸ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್‌ ಪೀಡಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ ತಂಡ   

ಮೈಸೂರು: ಕೋವಿಡ್‌–19 ಎರಡನೇ ಅಲೆಯ ತೀವ್ರತೆಯ ಅಬ್ಬರ ತಗ್ಗಿಸಲು ಜಿಲ್ಲಾಡಳಿತ ಪರಿಣಾಮಕಾರಿ ಕ್ರಮದ ಮೊರೆಯೊಕ್ಕಿದೆ.

ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ ನಾಲ್ಕಂಕಿ ದಾಟಿದೆ. ಮೈಸೂರಿನಲ್ಲೂ ದಿನವೊಂದರ ಪ್ರಕರಣ ಸಾವಿರದ ಗಡಿ ದಾಟಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ನವೇ; ಸೋಂಕು ಹರಡುವಿಕೆ ತಡೆಗಟ್ಟಲಿಕ್ಕಾಗಿ ಹಿಂದಿನ ವರ್ಷ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದ ಪತ್ತೆ, ಪರೀಕ್ಷೆ, ಚಿಕಿತ್ಸೆಯ ಮೂರಂಶದ ತಂತ್ರವನ್ನೇ ಈಗಲೂ ಅಳವಡಿಸಿಕೊಂಡಿದೆ.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ದಾಖಲಾಗುವುದು ಕ್ಷೀಣಿಸಿದಾಗಲೂ, ಈ ಮೂರಂಶದ ಸೂತ್ರ ಅನುಷ್ಠಾನದಲ್ಲಿತ್ತು. ಇದೀಗ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚುತ್ತಿದ್ದು, ಮೂರು ವಿಭಾಗದ ತಂಡಗಳನ್ನು ಜಿಲ್ಲಾಡಳಿತ ಬಲವರ್ಧನೆಗೊಳಿಸಿದೆ. ಜೊತೆಗೆ ನಿತ್ಯವೂ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ.

ADVERTISEMENT

ಶೇ 95ರಿಂದ ಶೇ 97ರಷ್ಟು ಪತ್ತೆ: ‘ಕೋವಿಡ್‌ ಪೀಡಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ನಿತ್ಯವೂ ಶೇ 95ರಿಂದ ಶೇ 97ರಷ್ಟು ಪತ್ತೆ ಹಚ್ಚುತ್ತಿದ್ದೇವೆ’ ಎನ್ನುತ್ತಾರೆ ಟ್ರೇಸಿಂಗ್‌ (ಸಂಪರ್ಕಿತರ ಪತ್ತೆ) ತಂಡದ ನೋಡೆಲ್‌ ಅಧಿಕಾರಿಯಾಗಿರುವ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಷರೀಫ್‌.

‘ಪೀಡಿತರೊಬ್ಬರ ಸಂಪರ್ಕ ದಲ್ಲಿದ್ದವರನ್ನು ಶೀಘ್ರವಾಗಿ ಪತ್ತೆ ಹಚ್ಚಿ, ವಿಳಾಸ ಸಹಿತ ಪರೀಕ್ಷಾ ತಂಡಕ್ಕೆ ಮಾಹಿತಿ ನೀಡುತ್ತೇವೆ. ಅವರು ಸಹ ತುರ್ತಾಗಿ ಶಂಕಿತರನ್ನು ಕೋವಿಡ್‌ ತಪಾಸಣೆಗೊಳಪಡಿಸಿ, ವರದಿ ಪಡೆದು ಕ್ವಾರಂಟೈನ್‌, ಐಸೊಲೇಷನ್‌ ಮಾಡುತ್ತಿದ್ದಾರೆ. ಪಾಸಿಟಿವ್‌ ಬಂದವರನ್ನು ಚಿಕಿತ್ಸೆಗೆ ದಾಖಲಿಸುತ್ತಿದ್ದಾರೆ. ಇದರಿಂದಲೇ ಪ್ರಕರಣದ ಸಂಖ್ಯೆ ತುಸು ಹೆಚ್ಚು ಎನಿಸಿದರೂ; ಬಾಧಿತರಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲು ಸಹಕಾರಿಯಾಗಿದೆ. ಸೋಂಕು ಮತ್ತಷ್ಟು ತೀವ್ರವಾಗಿ ಹರಡುವುದನ್ನು ನಿಯಂತ್ರಿಸುವ ಯತ್ನವೂ ನಡೆದಿದೆ’ ಎಂದು ಅವರು ಹೇಳಿದರು.

‘ಸೋಂಕಿತರ ಸಂಪರ್ಕಿತರ ಪತ್ತೆಯ ಕಾರ್ಯಾಚರಣೆ ಹೊಸ ಜಿಲ್ಲಾಧಿಕಾರಿ ಕಚೇರಿಯಿಂದ ನಡೆದಿದೆ. ಬಹುತೇಕ ಶಿಕ್ಷಕರೇ ಈ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಇದೀಗ ಬೆಳಿಗ್ಗೆಯಿಂದ ತಡರಾತ್ರಿಯವರೆಗೂ ಒಂದೇ ಪಾಳಿಯಲ್ಲಿ ಬಿಡುವಿಲ್ಲದ ಕೆಲಸ ನಡೆದಿದೆ. ನೂರಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಡಾಟಾ ಆಪರೇಟರ್‌ಗಳು ಸಹ ಅಂದಂದಿನ ಮಾಹಿತಿಯನ್ನು ಸಾಫ್ಟ್‌ವೇರ್‌ಗೆ ಅಪ್‌ಲೋಡ್‌ ಮಾಡುತ್ತಾರೆ’ ಎಂದು ಷರೀಫ್‌ ತಮ್ಮ ತಂಡದ ಕಾರ್ಯ ವೈಖರಿ ಬಗ್ಗೆ ಮಾಹಿತಿ
ನೀಡಿದರು.

ಪೊಲೀಸರ ನೆರವಿನಿಂದ ವಿಳಾಸ ಪತ್ತೆ
‘ಮೈಸೂರು ನಗರದಲ್ಲಿ ಕೋವಿಡ್‌ ತಪಾಸಣೆಗೊಳಗಾಗುವ 100 ಜನರಲ್ಲಿ ಅಂದಾಜು 25 ಜನರು ತಮ್ಮ ವಿಳಾಸವನ್ನೇ ನಮೂದಿಸಿರಲ್ಲ. ಕೆಲವರು ಬೇರೊಬ್ಬರ ಮೊಬೈಲ್‌ ನಂಬರ್‌ ಕೊಡುತ್ತಾರೆ. ಇದು ನಮ್ಮ ಕಾರ್ಯಾಚರಣೆಯ ವೇಗಕ್ಕೆ ಅಡ್ಡಿಯುಂಟು ಮಾಡುತ್ತಿದೆ’ ಎಂದು ಷರೀಫ್‌ ತಿಳಿಸಿದರು.

‘ಮೊಬೈಲ್‌ ನಂಬರ್‌ ವಿಳಾಸ ಪತ್ತೆ ಹಚ್ಚಲು ಸಂಬಂಧಿಸಿದ ಅಧಿಕಾರಿಗಳಿಂದ ಈಗಾಗಲೇ ಅನುಮತಿ ಪಡೆದಿದ್ದೇವೆ. ವ್ಯಕ್ತಿಯ ವಿಳಾಸ ಪತ್ತೆಗೆ ಪೊಲೀಸರ ನೆರವನ್ನು ಪಡೆಯುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಬಡ್ಡಿ ವಹಿವಾಟು ನಡೆಸುವ ಮಹಿಳೆಯೊಬ್ಬರ ಮೊಬೈಲ್‌ ವಿಳಾಸವೇ ಸರಿ ಇರಲಿಲ್ಲ. ಯಾವ ಟವರ್‌ ಲೊಕೇಶನ್‌ನಿಂದ ಅವರು ಮೊಬೈಲ್‌ ಬಳಸುತ್ತಾರೆ ಎಂಬುದನ್ನು ಪತ್ತೆ ಹಚ್ಚಿ, ಅಲ್ಲಿಗೆ ತೆರಳಿ ಸ್ಥಳೀಯರ ನೆರವಿನಿಂದ ಮಹಿಳೆಯನ್ನು ಪತ್ತೆ ಹಚ್ಚಿದೆವು. ಇಂತಹ ಹಲವು ವಿಚಿತ್ರ ಪ್ರಕರಣಗಳು ಆಗಾಗ್ಗೆ ಕಂಡು ಬರುತ್ತವೆ. ಕೆಲವರು ಅಧಿಕಾರಿಗಳ ಮೊಬೈಲ್‌ ನಂಬರ್‌ ನೀಡಿ, ವ್ಯವಸ್ಥೆಯ ಹಾದಿ ತಪ್ಪಿಸುವ ಕೆಲಸ ಸಹ ಮಾಡುತ್ತಾರೆ’ ಎಂದು ಷರೀಫ್ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.