ADVERTISEMENT

ಧಮ್ಮಕ್ಕಿದೆ ಕರ್ನಾಟಕ ಕಟ್ಟುವ ಶಕ್ತಿ: ರಹಮತ್‌ ತರೀಕೆರೆ

68ನೇ ಧಮ್ಮದೀಕ್ಷಾ ದಿನಾಚರಣೆಯಲ್ಲಿ ರಹಮತ್‌ ತರೀಕೆರೆ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 6:46 IST
Last Updated 15 ಅಕ್ಟೋಬರ್ 2024, 6:46 IST
ಮೈಸೂರು ವಿಶ್ವವಿದ್ಯಾಲಯದ ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದಲ್ಲಿ ನಡೆದ ಧಮ್ಮದೀಕ್ಷಾ ದಿನಾಚರಣೆಯಲ್ಲಿ ಪ್ರೊ.ರಹಮತ್ ತರೀಕೆರೆ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಭಂತೇ ನೀಲು ಇಂಜಾಂಗ್, ಪ್ರೊ.ಜೆ.ಸೋಮಶೇಖರ್, ಪ್ರೊ.ನರೇಂದ್ರ ಕುಮಾರ್ ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ
ಮೈಸೂರು ವಿಶ್ವವಿದ್ಯಾಲಯದ ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದಲ್ಲಿ ನಡೆದ ಧಮ್ಮದೀಕ್ಷಾ ದಿನಾಚರಣೆಯಲ್ಲಿ ಪ್ರೊ.ರಹಮತ್ ತರೀಕೆರೆ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಭಂತೇ ನೀಲು ಇಂಜಾಂಗ್, ಪ್ರೊ.ಜೆ.ಸೋಮಶೇಖರ್, ಪ್ರೊ.ನರೇಂದ್ರ ಕುಮಾರ್ ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಅಂಬೇಡ್ಕರ್‌ ದೃಷ್ಟಿಯಲ್ಲಿ ನವಯಾನ ಬುದ್ಧ ಧಮ್ಮವು ವಿಮೋಚನೆಯ ಮಾರ್ಗ, ಇದೇ ಆಶಯವುಳ್ಳ ಸಹ ಪಂಥಗಳೊಂದಿಗೆ ಕೂಡಿ ಸಾಗುವ ಧಮ್ಮಕ್ಕೆ ಕರ್ನಾಟಕ ಕಟ್ಟುವ ಶಕ್ತಿ ಇದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಬಿ.ಆರ್‌.ಅಂಬೇಡ್ಕರ್‌ ಪೀಠದ ಸಂದರ್ಶಕ ಪ್ರಾಧ್ಯಾಪಕ ರಹಮತ್‌ ತರೀಕೆರೆ ಹೇಳಿದರು.

ಇಲ್ಲಿನ ಮಾನಸಗಂಗೋತ್ರಿಯ ಬಿ.ಆರ್‌.ಅಂಬೇಡ್ಕರ್‌ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಸೋಮವಾರ ನಡೆದ 68ನೇ ಧಮ್ಮದೀಕ್ಷಾ ದಿನಾಚರಣೆಯಲ್ಲಿ ‘ಕರ್ನಾಟಕದಲ್ಲಿ ನವಯಾನದ ಬೆಳವಣಿಗೆಗಳು’ ಕುರಿತು ಅವರು ಉಪನ್ಯಾಸ ನೀಡಿದರು.

‘ಭಿನ್ನ ಆಹಾರ, ಸಂಸ್ಕೃತಿಯ ಕಾರಣಕ್ಕಾಗಿ ಹಾದಿ ಬೀದಿಗಳಲ್ಲಿ ದಲಿತರು, ಮುಸ್ಲಿಮರ ಮೇಲೆ ಹಲ್ಲೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಧಮ್ಮ ಬಿಡುಗಡೆಯ ಹಾದಿ ಆಗುತ್ತದೆ. ಬೌದ್ಧಿಕ ಸಿದ್ಧತೆಯೊಂದಿಗೆ ಸಮಾಜ ಅರಿಯುವ ಶಕ್ತಿ ಬುದ್ಧ ಧಮ್ಮವನ್ನು ಅನುಸರಿಸುವರಿಗೆ, ಪಸರಿಸುವರಿಗೆ ಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಬಾಬಸಾಹೇಬರು ಬುದ್ಧ, ಕಬೀರ ಮತ್ತು ಜ್ಯೋತಿಬಾ ಫುಲೆ ಅವರನ್ನು ಗುರು ಎಂದು ಕರೆದಿದ್ದರು. ಮನುಷ್ಯನೇ ಧಮ್ಮದ ಕೇಂದ್ರವಾಗಿರುವುದಿಂದ ಆಯ್ದುಕೊಂಡೆ ಎಂದಿದ್ದರು. ಸಂವಿಧಾನದಲ್ಲಿನ ಸ್ವಾತಂತ್ರ್ಯ, ಭ್ರಾತೃತ್ವ, ಸಮಾನತೆಯನ್ನು ಆಧುನಿಕ ತ್ರಿಸರಣ ಎನ್ನಬಹುದು. ಪ್ರೆಂಚ್‌ ಕ್ರಾಂತಿಯಿಂದ ಈ ಪದಗಳು ಹುಟ್ಟಿದ್ದರೂ, ಇದರ ತತ್ವವನ್ನು ಅಂಬೇಡ್ಕರ್‌ ಅವರಿಗೆ ತಿಳಿಸಿದ್ದು ಧಮ್ಮ’ ಎಂದರು.

‘ಧಮ್ಮದಲ್ಲಿ ಪ್ರಜ್ಞೆ ಮತ್ತು ಸಮಾಧಿ ಸ್ಥಿತಿ ಪರಸ್ಪರ ಪೂರಕ. ನಿನಗೆ ಅರಿವಾದರೆ ಮಾತ್ರ ಒಪ್ಪು ಎನ್ನುವುದೇ ಸಂದೇಶ. ಇದೇ ತತ್ವವನ್ನು ಇಲ್ಲಿನ ಸೂಫಿ, ಶರಣರೂ ಹೇಳಿದ್ದಾರೆ. ದಕ್ಷಿಣ ಭಾರತದ ಶಾಕ್ಯ ಬೌದ್ಧ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಯೋಥಿ ದಾಸ್, ಲಕ್ಷ್ಮೀನರಸು ಅವರ ಚಿಂತನೆ ಮತ್ತು ಬರವಣಿಗೆಗಳು ಧಮ್ಮ ಸೇರುವಲ್ಲಿ ಅಂಬೇಡ್ಕರ್‌ ಮೇಲೆ ಪ್ರಭಾವ ಬೀರಿದ್ದವು’ ಎಂದು ಹೇಳಿದರು.

‘ಧರ್ಮ, ಧಮ್ಮ ಯಾವಾಗಲೂ ಅಮೂರ್ತವಾಗಿರುತ್ತದೆ. ಅದನ್ನು ಆಚರಣೆಗೆ ತಂದು ರೂಪ ನೀಡುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು. ಪುರುಷರು ಬೌದ್ಧ ಧಮ್ಮವನ್ನು ಅನುಸರಿಸುತ್ತಿದ್ದರೂ, ಮಹಿಳೆಯರು ಆಚರಣೆಯಲ್ಲಿ ತೊಡಗಿಲ್ಲ. ರಾಜ್ಯದಲ್ಲಿ ನವಯಾನದ ಬೆಳವಣಿಗೆಗೆ ಇದು ಪ್ರಮುಖ ತೊಡಕು. ಧಮ್ಮ ಸ್ವೀಕರಿಸಿದ ದಲಿತರು ಹಾಗೂ ಸ್ವೀಕರಿಸದವರ ನಡುವಿನ ಭಿನ್ನಾಭಿಪ್ರಾಯ. ನವಯಾನ, ಮಹಾಯಾನ ಮಾರ್ಗಿಗಳ ನಡುವಿನ ಭೇದವೂ ಅಡೆತಡೆಯಾಗಿವೆ. ಇದನ್ನೆಲ್ಲಾ ಮೀರಿ ಧಮ್ಮ ಜನಪದರಲ್ಲಿ ಬೆರೆಯಬೇಕು; ಬೇರು ಚಾಚಬೇಕು’ ಎಂದರು.

ಮಹಾಬೋಧಿ ಸೊಸೈಟಿಯ ಭಂತೇ ನೀಲು ಇಂಜಾಂಗ್‌, ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್‌,  ಪ್ರೊ.ಎಸ್.ನರೇಂದ್ರ ಕುಮಾರ್ ಪಾಲ್ಗೊಂಡರು.

‘ವಿವಿಧ ರೂಪದಲ್ಲಿ ಬುದ್ಧಿಸಂ’

‘ರಾಜ್ಯದಲ್ಲಿ ಬುದ್ಧ ಧಮ್ಮ ಅನುಸರಿಸುವವರು ವಿವಿಧ ರೂಪದಲ್ಲಿದ್ದಾರೆ. ಧೀಕ್ಷಾರಹಿತ ಬೌದ್ಧರು ಬಹಳಷ್ಟಿದ್ದಾರೆ. ಇಲ್ಲಿನ ಹಲವು ಪಂಥ ಪರಂಪರೆಗಳಲ್ಲೂ ಬುದ್ಧನ ತತ್ವ ಕಾಣಬಹುದು. ಪಂಚಶೀಲ ಗವಾಯಿಗಳು ಬೀದರ್‌ನಲ್ಲಿ ಹಾಡುಗಳ ಮೂಲಕ ಧಮ್ಮ ಪ್ರಸಾರ ಮಾಡಿದ್ದರು’ ಎಂದು ರಹಮತ್‌ ತರೀಕೆರೆ ಹೇಳಿದರು. ‘ಪೈಗಂಬರರ ಮಾನವೀಯತೆ ಗಮನಿಸಿದಾಗ ಮುಸಲ್ಮಾನರು ಹಿಂದಿದ್ದಾರೆ ಎನ್ನಿಸುತ್ತದೆ. ಹಾಗೆಯೇ ಬುದ್ಧನ ಧಮ್ಮವನ್ನು ಅರಿತು ಅನುಸರಿಸುವಲ್ಲಿ ಉಪಾಸಕರೂ ಹಿಂದಿದ್ದಾರೆ. ಎಲ್ಲೆಡೆ ಹರಡಿರುವ ಧಮ್ಮವನ್ನು ಅರಿತು ಒಗ್ಗೂಡಿ ಸಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.