ADVERTISEMENT

ಧರ್ಮಸ್ಥಳ ‍ಪ್ರಕರಣ: ಎನ್‌ಐಎಯಿಂದ ತನಿಖೆ ಅಗತ್ಯವಿಲ್ಲ; ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 9:22 IST
Last Updated 31 ಆಗಸ್ಟ್ 2025, 9:22 IST
   

ಮೈಸೂರು: ‘ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ದಳ)ಗೆ ವಹಿಸುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಎಸ್‌ಐಟಿ ಯಾವಾಗ ವರದಿ ಕೊಡುತ್ತದೆಯೋ ಗೊತ್ತಿಲ್ಲ. ನಾವೇನೂ ಹಸ್ತಕ್ಷೇಪ ಮಾಡುತ್ತಿಲ್ಲ. ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಧರ್ಮಸ್ಥಳದ ವಿರುದ್ಧ ದೂರಿದ್ದು, ಅದಕ್ಕೆ ಉತ್ತರ ಸಿಗಬೇಕಲ್ಲವೇ? ಜನರಿಗೆ ಸತ್ಯ ಗೊತ್ತಾಗಬೇಕಲ್ಲವೇ?’ ಎಂದು ಕೇಳಿದರು.

‘ಬಿಜೆಪಿಯವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ. ಧರ್ಮಸ್ಥಳಕ್ಕೆ ಧರ್ಮಯಾತ್ರೆ ಹೋದರೆ ಹೋಗಲಿ. ಎಸ್‌ಐಟಿ ರಚಿಸಿರುವುದನ್ನು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ಸತ್ಯ ಹೊರಬರಬೇಕೆಂಬ ಕಾರಣಕ್ಕಾಗಿಯೇ ಎಸ್‌ಐಟಿ ರಚಿಸಿದ್ದೇವೆ’ ಎಂದರು.

ADVERTISEMENT

‘ಸತ್ಯ ಹೊರಬಾರದಿದ್ದರೆ, ಧರ್ಮಸ್ಥಳದ ಬಗ್ಗೆ ತೂಗುಗತ್ತಿ ಯಾವಾಗಲೂ ಇದ್ದೇ ಇರುತ್ತದೆ. ಸಂದೇಹ ಹೋಗಲಾಡಿಸಲೆಂದೇ ಕ್ರಮ ಕೈಗೊಂಡಿದ್ದೇವೆ. ದೂರುದಾರ ನ್ಯಾಯಾಲಯದ ಎದುರು ಹೇಳಿಕೆ ನೀಡಿದ್ದ. ಎಸ್‌ಐಟಿ ರಚಿಸುವಂತೆ ಅನೇಕ ಸಂಘ–ಸಂಸ್ಥೆಗಳು ಕೂಡ ಒತ್ತಾಯಿಸಿದ್ದವು. ಸತ್ಯ ಹೊರಬರಲೆಂಬುದು ಸರ್ಕಾರದ ಉದ್ದೇಶ’ ಎಂದು ಹೇಳಿದರು.

‘ಎಸ್‌ಐಟಿಯಿಂದ ತನಿಖೆ ನಡೆಸುವುದನ್ನು ಬಿಜೆಪಿಯವರೂ ಸ್ವಾಗತಿಸಿದ್ದರು. ಈಗ, ರಾಜಕೀಯಕ್ಕಾಗಿ ಮಾತನಾಡುತ್ತಿದ್ದಾರೆ. ಧರ್ಮಸ್ಥಳದ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.