ADVERTISEMENT

ಜಿಲ್ಲಾ ಸಶಸ್ತ್ರ ಮೀಸಲು ಪಡೆ ‘ಚಾಂಪಿಯನ್‌’

ಮೂರು ದಿನಗಳ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:07 IST
Last Updated 15 ನವೆಂಬರ್ 2025, 5:07 IST

ಮೈಸೂರು: ಮೂರು ದಿನಗಳ ಕಾಲ ಡಿಎಆರ್‌ ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ತಂಡವು (ಡಿಎಆರ್‌) ‘ಸಮಗ್ರ’ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಗುಂಪು ಹಾಗೂ ವೈಯಕ್ತಿಕ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಡಿಎಆರ್‌ ತಂಡ 64 ಅಂಕದೊಂದಿಗೆ ಅಗ್ರಸ್ಥಾನ ಪಡೆಯಿತು. ಪುರುಷರ ಸಮಗ್ರ ವಿಭಾಗದಲ್ಲಿ ಡಿಎಆರ್‌ನ ಜಿ.ಜಿ.ರಘುನಂದನ, ಮಹಿಳಾ ವಿಭಾಗದಲ್ಲಿ ಕಲವಂದೆ ಠಾಣೆಯ ದೀಪಾ ಪಾಲ್ಕೆ ‘ಸರ್ವೋತ್ತಮ ಪ್ರಶಸ್ತಿ’ ಪಡೆದರು.

ರಘುನಂದನ 100 ಮೀ., 400 ಮೀ., 800 ಮೀ. ಉದ್ದಜಿಗಿತ, ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದರೆ, ದೀಪಾ 100 ಮೀ., 200 ಮೀ., ಉದ್ದಜಿಗಿತದಲ್ಲಿ ಪ್ರಥಮ ಮತ್ತು ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ಗೆಲುವಿನ ನಗೆ ಬೀರಿದರು.

ADVERTISEMENT

ಫಲಿತಾಂಶ:

ಪುರುಷರ 4x100 ಮೀ. ರಿಲೇ ಸ್ಪರ್ಧೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪ್ರಥಮ, ಮೈಸೂರು ಗ್ರಾಮಾಂತರ ಉಪವಿಭಾಗ ದ್ವಿತೀಯ, ವಿಶೇಷ ವಿಭಾಗ ತೃತೀಯ, 4x400 ಮೀ. ರಿಲೇಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪ್ರಥಮ, ನಂಜನಗೂಡು ವಲಯ ದ್ವಿತೀಯ, ಮೈಸೂರು ಉಪ ವಿಭಾಗ ತೃತೀಯ ಸ್ಥಾನ ಪಡೆಯಿತು. 

ಗುಂಪು ವಿಭಾಗ: ಹಗ್ಗಜಗ್ಗಾಟದಲ್ಲಿ ಡಿಎಆರ್‌, ಹುಣಸೂರು ಉಪವಿಭಾಗ. ಕಬಡ್ಡಿಯಲ್ಲಿ ಮೈಸೂರು ಗ್ರಾಮಾಂತರ ಉಪವಿಭಾಗ, ಡಿಎಆರ್‌. ವಾಲಿಬಾಲ್‌ನಲ್ಲಿ ಹುಣಸೂರು ಗ್ರಾಮಾಂತರ ಉಪವಿಭಾಗ, ಡಿಎಆರ್ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆಯಿತು.

ವಿಜೇತರಿಗೆ ಪ್ರಶಸ್ತಿ ವಿತರಿಸಿದ ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ, ‘ಪೊಲೀಸ್‌ ಇಲಾಖೆಯಲ್ಲಿ ಫಿಟ್ನೆಸ್‌ಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಕ್ರೀಡೆಯು ಆರೋಗ್ಯ ವೃದ್ಧಿ ಹಾಗೂ ತಂಡವಾಗಿ ಕೆಲಸ ಮಾಡುವ ಗುಣವನ್ನು ಕಲಿಸುತ್ತದೆ. ಹೀಗಾಗಿ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ಸಾಹ ತೋರಬೇಕು’ ಎಂದರು.

‘ಫಿಟ್ನೆಸ್‌ಗಾಗಿ ನಿತ್ಯ ಸಮಯ ಮೀಸಲಿಡಬೇಕು. ಆ ಮೂಲಕ ಒತ್ತಡದಿಂದ ಹೊರಬಂದು ಆರೋಗ್ಯಯುತ ಜೀವನಶೈಲಿ ರೂಢಿಸಿಕೊಳ್ಳಬಹುದು. 41 ವರ್ಷ ವಯಸ್ಸಿನ ರಘುನಂದನ್‌ ಸರ್ವೋತ್ತಮ ಪ್ರಶಸ್ತಿ ಪಡೆದು ನಮಗೆ ಮಾದರಿಯಾಗಿದ್ದು, ನಿರಂತರ ಪರಿಶ್ರಮ ಹಾಗೂ ಪ್ರಯತ್ನ ಇದ್ದರೆ ನಾವೂ ಅವರಂತೆ ಉತ್ತಮ ಕ್ರೀಡಾಪಟು ಆಗಬಹುದು’ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿಷ್ಣುವರ್ಧನ್‌, ಎಎಸ್‌ಪಿಗಳಾದ ಮಲ್ಲಿಕ್‌ ಹಾಗೂ ನಾಗೇಶ್‌ ಭಾಗವಹಿಸಿದ್ದರು. ಎಸ್‌ಐ ಸುನೀಲ್‌ ಮಿರ್ಲೆ ಮತ್ತು ತಂಡದವರು ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.