ಮೈಸೂರು: ‘ಹೃದಯಾಘಾತ ಆಗಬಹುದು ಎಂಬ ಆತಂಕಕ್ಕೆ ಒಳಗಾಗಿ ಜನರು ಜಯದೇವ ಆಸ್ಪತ್ರೆಗೆ ಬರುವ ಅವಶ್ಯಕತೆಯಿಲ್ಲ’ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಹೇಳಿದರು.
ಇಲ್ಲಿನ ಜಯದೇವ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ 34 ಹಾಸಿಗೆಗಳ ನೂತನ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಮಾಧ್ಯಮಗಳಲ್ಲಿ ಹಾಸನದಲ್ಲಿ ಹೃದಯಾಘಾತದಿಂದ ಹೆಚ್ಚಿನ ಜನರು ಸಾಯುತ್ತಿದ್ದಾರೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಜನರು ಗಾಬರಿಯಿಂದ ಆಸ್ಪತ್ರೆಯತ್ತ ಬರುತ್ತಿದ್ದಾರೆ. ಇಲ್ಲಿನ ಆಸ್ಪತ್ರೆಗೆ ಪ್ರತಿದಿನ ಹೆಚ್ಚುವರಿಯಾಗಿ 400 ಜನ ಹೊರ ರೋಗಿಗಳಾಗಿ ಚಿಕಿತ್ಸೆಗೆ ಬರುತ್ತಿದ್ದು ವೈದ್ಯರ ಮೇಲಿನ ಒತ್ತಡ ಹೆಚ್ಚಾಗಿದೆ. ಬೆಂಗಳೂರು, ಕಲಬುರಗಿ ಆಸ್ಪತ್ರೆಗಳಿಗೂ ಜನರು ಬರುತ್ತಿದ್ದಾರೆ’ ಎಂದರು.
‘ವಾಸ್ತವವಾಗಿ ಸಾವಿನ ಸಂಖ್ಯೆ ಹೆಚ್ಚಾಗಿಲ್ಲ. ಮಾಧ್ಯಮಗಳಲ್ಲಿ ವರದಿ ಮಾಡುವ ಸಂಖ್ಯೆ ಹೆಚ್ಚಾಗಿದೆ. ಸತ್ತವರೆಲ್ಲಾ ಹೃದಯಾಘಾತದಿಂದ ಮರಣ ಹೊಂದಿದ್ದಾರೆ ಎನ್ನುವ ಹಾಗಿಲ್ಲ. ಬೇರೆ ಬೇರೆ ಕಾರಣಗಳು ಇರುತ್ತವೆ. ಸರ್ಕಾರ ಇದರ ಬಗ್ಗೆ ಅಧ್ಯಯನ ಮಾಡಲು ಹೇಳಿದೆ. ಹೆಚ್ಚಿನ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮದ್ಯಪಾನ, ಧೂಮಪಾನ ಹಾಗೂ ಮಾನಸಿಕ ಒತ್ತಡವಿದ್ದವರು ಸ್ಥಳೀಯ ವೈದ್ಯರ ಬಳಿ ತೋರಿಸಿಕೊಂಡು ಬಳಿಕ ಜಯದೇವ ಆಸ್ಪತ್ರೆಗೆ ಬರಬೇಕು. 30ರಿಂದ 40 ವರ್ಷ ದಾಟಿದವರು ವರ್ಷಕ್ಕೊಮ್ಮೆ ಹೃದಯ ತಪಾಸಣೆ ಮಾಡಿಕೊಂಡರೆ ಒಳ್ಳೆಯದು’ ಎಂದರು.
ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ್, ಆರ್.ಎಂ.ಒ. ಡಾ.ಪಶುಪತಿ, ಡಾ.ಸಂತೋಷ್, ಡಾ.ವೀಣಾ ನಂಜಪ್ಪ, ಡಾ.ಶಿವಸ್ವಾಮಿ ಸೋಸಲೆ, ಡಾ.ಜಯಪ್ರಕಾಶ್, ಡಾ.ವಿಶ್ವನಾಥ್, ಡಾ.ದೇವರಾಜ್, ಡಾ.ಕುಮಾರ್, ಡಾ.ಶ್ರೀನಿಧಿ ಹೆಗ್ಗಡೆ, ಡಾ.ಭಾರತಿ, ಡಾ.ಮಂಜುನಾಥ್, ಡಾ.ಜಯಶೀಲನ್, ಡಾ.ನಂಜಪ್ಪ, ಡಾ.ರಶ್ಮಿ, ಡಾ.ವಿನಾಯಕ್, ನರ್ಸಿಂಗ್ ಅಧೀಕ್ಷಕಿ ಯೋಗಲಕ್ಷ್ಮಿ, ಗುರುಮೂರ್ತಿ, ಪಿಆರ್‌ಒ ವಾಣಿ ಮೋಹನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.