ADVERTISEMENT

ಅಭ್ಯರ್ಥಿಗಳ ತೆರೆಮರೆಯ ಕಸರತ್ತು ಆರಂಭ

ಬಹಿರಂಗ ಪ್ರಚಾರ ಅಂತ್ಯವಾದ ಬಳಿಕ ಮನೆಮನೆ ಭೇಟಿ, ಮನವೊಲಿಕೆ ಯತ್ನ

ಕೆ.ಎಸ್.ಗಿರೀಶ್
Published 30 ಆಗಸ್ಟ್ 2018, 11:07 IST
Last Updated 30 ಆಗಸ್ಟ್ 2018, 11:07 IST

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ಅಭ್ಯರ್ಥಿಗಳು ತೆರೆಮರೆಯ ಕಸರತ್ತಿಗೆ ಮುಂದಾಗಿದ್ದಾರೆ.‌

ಇಲ್ಲಿಯವರೆಗೂ ನಡೆಯುತ್ತಿದ್ದ ಧ್ವನಿವರ್ಧಕಗಳ ಅಬ್ಬರದ ಪ್ರಚಾರ ಕೊನೆಗೊಂಡಿದೆ. ಗುಂಪು ಪ್ರಚಾರ ಕಾಣದಾಗಿದೆ. ಪಕ್ಷದ ಧ್ವಜ, ಅಭ್ಯರ್ಥಿಗಳ ಭಾವಚಿತ್ರ, ಕ್ರಮಸಂಖ್ಯೆಗಳನ್ನು ಹೊತ್ತ ಪ್ರಚಾರದ ವಾಹನಗಳು ಮೂಲೆ ಸೇರಿವೆ. ಅಭ್ಯರ್ಥಿಗಳು ಮಾತ್ರ ಬೆರಳೆಣಿಕೆಯಷ್ಟು ಮಂದಿಯ ಜತೆ ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.

ಹೆಚ್ಚಾಗಿ ಹಿರಿಯನಾಗರಿಕರೇ ವಾಸಿಸುವ ಮನೆಗಳನ್ನು ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಒಂದೈದು ನಿಮಿಷ ಮನೆಯಲ್ಲಿ ಕುಳಿತು ಅವರ ಕಾಲಿಗೆ ದೀರ್ಘದಂಡ ನಮಸ್ಕಾರ ಹಾಕಿ, ಆಶೀರ್ವಾದ ಪಡೆದು ಮತಯಾಚನೆ ಮಾಡುತ್ತಿರುವುದು ಸಾಮಾನ್ಯವಾಗಿದೆ.

ADVERTISEMENT

ಬೆಂಬಲ ಇಲ್ಲದಿರುವ ಬೀದಿಗಳತ್ತ ಕೆಲವು ಅಭ್ಯರ್ಥಿಗಳು ಚಿತ್ತನೆಟ್ಟಿದ್ದಾರೆ. ಹೆಚ್ಚು ಮತದಾರರಿರುವ ಮನೆಗಳಲ್ಲಿ ಕೆಲ ಹೊತ್ತು ಕುಳಿತು ನೀರು, ಚಹಾ ಸೇವಿಸಿ ಮತ ನೀಡುವಂತೆ ಕೋರುತ್ತಿದ್ದಾರೆ. ಬೆಂಬಲಿಗರೂ ಹೆಚ್ಚು ಗುಂಪುಗೂಡದೇ ಒಬ್ಬರು, ಇಬ್ಬರು ಸೇರಿ ಮನೆಮನೆಗೆ ಭೇಟಿ ನೀಡಿ ಮತ ಹಾಕುವಂತೆ ನೆನಪಿಸುತ್ತಿದ್ದಾರೆ.

ಮಹಿಳೆಯರ ಮತಗಳನ್ನು ಸೆಳೆಯಲು ಪುರುಷ ಅಭ್ಯರ್ಥಿಗಳ ಪತ್ನಿಯರೇ ಮುಂದಾಗಿದ್ದಾರೆ. ಮನೆಮನೆಗೆ ತೆರಳಿ ಮತ ಕೋರುತ್ತಿದ್ದಾರೆ. ಅಭ್ಯರ್ಥಿಗಳ ಮಕ್ಕಳೂ ಪ್ರಚಾರದಲ್ಲಿ ನಿರತರಾಗಿದ್ದು, ಯುವ ಮನಸ್ಸುಗಳನ್ನು ಸೆಳೆಯುವ ತಂತ್ರಗಾರಿಕೆಗೆ ಮುಂದಾಗಿದ್ದಾರೆ.

ನಿಲ್ಲದ ಭರವಸೆಗಳ ಮಹಾಪೂರ:
ಅಬ್ಬರದ ಪ್ರಚಾರ ಇಲ್ಲದಿದ್ದರೂ ಸೌಮ್ಯ ಸ್ವರೂಪದ ಪ್ರಚಾರ ನಡೆಯುತ್ತಲೇ ಇದೆ. ರಸ್ತೆ ಸರಿ ಇಲ್ಲದ ಓಣಿಗಳಲ್ಲಿನ ಮನೆಗಳಿಗೆ ತೆರಳುವ ಅಭ್ಯರ್ಥಿಗಳು ಮತ ಹಾಕಿದರೆ ಓಣಿಯ ರಸ್ತೆಯನ್ನು ಸರಿಪಡಿಸುವ ಭರವಸೆ ನೀಡುತ್ತಿದ್ದಾರೆ. ತೆರೆದ ಮೋರಿಗಳಿರುವ ಕಡೆ ಇರುವ ಮನೆಗಳಿಗೆ ತೆರಳಿ ಗೆದ್ದ ಐದೇ ದಿನಗಳಲ್ಲಿ ಈ ಮೋರಿಯನ್ನು ಮುಚ್ಚಿಸುವುದಾಗಿ ತಿಳಿಸಿ ಮನವೊಲಿಕೆ ಕಸರತ್ತು ನಡೆಸುತ್ತಿದ್ದಾರೆ.‌

ಹಕ್ಕುಪತ್ರ ಸಿಗದಿರುವ ಮನೆಗಳಿಗೆ ತೆರಳುವ ಅಭ್ಯರ್ಥಿಗಳು ಈ ಬಾರಿ ಹಕ್ಕುಪತ್ರ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ಬಡವರು ಹೆಚ್ಚು ವಾಸಿಸುವ ಪ್ರದೇಶಗಳಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ಸರ್ಕಾರದ ವಿವಿಧ ಸವಲತ್ತುಗಳನ್ನು ಕೊಡಿಸುವ ವಾಗ್ದಾನ ಮಾಡುವ ಮೂಲಕ ಅವರ ಮನಗೆಲ್ಲುವ ಯತ್ನ ನಡೆಸಿರುವುದು ಕಂಡು ಬಂದಿದೆ.

ಹೊಸ ಅಭ್ಯರ್ಥಿಗಳು ಒಂದು ಅವಕಾಶಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬೆಳಿಗ್ಗೆ ವಾಯುವಿಹಾರದ ಸಮಯದಲ್ಲೂ ಪ್ರಚಾರ ಕೈಗೊಂಡಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತಯಾಚನೆ ಮಾಡುತ್ತಿದ್ದಾರೆ. ಉದ್ಯಾನಗಳಲ್ಲಿ ಸಂಗೀತ ಕಾರಂಜಿ ಅಳವಡಿಸುವುದು, ಮಕ್ಕಳ ಆಟಿಕೆಗಳನ್ನು ಇಡುವುದು, ವಿರಮಿಸಲು ಕಲ್ಲು ಬೆಂಚುಗಳನ್ನು ಹಾಕುವುದು ಸೇರಿದಂತೆ ಉದ್ಯಾನಗಳ ಅಭಿವೃದ್ಧಿ ಕುರಿತು ವಾಯುವಿಹಾರಿಗಳ ಜತೆ ಚರ್ಚಿಸಿ ಕೊನೆಯಲ್ಲಿ ಮತ ಕೇಳುವ ತಂತ್ರಗಾರಿಕೆ ನಡೆದಿದೆ.

ಸಂಜೆ ಬಳಿಕ ಚುರುಕಾಗುವ ಅಭ್ಯರ್ಥಿಗಳು!
ಬೆಳಿಗ್ಗೆಯಿಂದಲೇ ಆರಂಭವಾಗುವ ಮನೆಮನೆ ಪ್ರಚಾರ ಕಾರ್ಯಕ್ಕೆ ಮಧ್ಯಾಹ್ನದ ವೇಳೆಗೆ ವಿರಾಮ ಸಿಗುತ್ತಿದೆ. ಮಧ್ಯಾಹ್ನ ಊಟ ಮುಗಿಸಿ ಗೃಹಿಣಿಯರು ಮಲಗಿರುತ್ತಾರೆ ಎಂಬುದು ಒಂದು ಕಾರಣವಾದರೆ ಗಂಡ, ಹೆಂಡತಿ ಇಬ್ಬರೂ ದುಡಿಯುವ ಮನೆಗಳಲ್ಲಿ ಯಾರೂ ಸಿಗುವುದಿಲ್ಲ ಎನ್ನುವುದು ಮತ್ತೊಂದು ಕಾರಣ.

ಸಂಜೆ ಬಳಿಕೆ ಮತ್ತೆ ಪ್ರಚಾರಕಾರ್ಯ ಚುರುಕುಗೊಳ್ಳುತ್ತದೆ. ಈ ವೇಳೆ ಕೆಲಸಕ್ಕೆ ತೆರಳಿರುವ ಪುರುಷರು, ಮಹಿಳೆಯರು ಮನೆ ಸೇರಿರುತ್ತಾರೆ. ಅವರನ್ನು ಪರಸ್ಪರ ಭೇಟಿ ಮಾಡಿ ಮತಯಾಚನೆ ಮಾಡುವುದು ಕಂಡು ಬರುತ್ತಿದೆ.

ಯಾವ ಮನೆಯವರು ಸಿಕ್ಕಿಲ್ಲ?
ಇದುವರೆಗೂ ಯಾವ ಮನೆಯವರು ಸಿಕ್ಕಿಲ್ಲ ಎನ್ನುವ ದತ್ತಾಂಶ ಸಂಗ್ರಹ ಕಾರ್ಯ ಚುರುಕುಗೊಂಡಿದೆ. ಅಂತಹ ಮನೆಗಳನ್ನೇ ಗುರಿಯಾಗಿಸಿಕೊಳ್ಳುತ್ತಿರುವ ಅಭ್ಯರ್ಥಿಗಳು ಮತ್ತೆ ಮತ್ತೆ ಅಂಥ ಮನೆಗಳಿಗೆ ಭೇಟಿ ಕೊಡುತ್ತಿದ್ದಾರೆ. ಪಕ್ಕದ ವಾರ್ಡ್‌ನಿಂದ ಮನೆ ಬದಲಾಯಿಸಿ ಬಂದವರಿಗೆ ಪಕ್ಕದ ವಾರ್ಡ್‌ನ ಬೂತಿಗೆ ತೆರಳಿ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.