ADVERTISEMENT

ಒಳಚರಂಡಿ ಸ್ವಚ್ಛತಾ ಕೆಲಸ ಸ್ಥಗಿತ

ಉದ್ಯೋಗ ಕಾಯಂ ಮಾಡಿ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 4:05 IST
Last Updated 15 ಡಿಸೆಂಬರ್ 2020, 4:05 IST
ಉದ್ಯೋಗವನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಒಳಚರಂಡಿ ಕಾರ್ಮಿಕರು ಮೈಸೂರಿನ ಪಾಲಿಕೆ ಮುಂಭಾಗ ಸೋಮವಾರ ಮೈಸೂರು ಮಹಾನಗರ ಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದರು
ಉದ್ಯೋಗವನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಒಳಚರಂಡಿ ಕಾರ್ಮಿಕರು ಮೈಸೂರಿನ ಪಾಲಿಕೆ ಮುಂಭಾಗ ಸೋಮವಾರ ಮೈಸೂರು ಮಹಾನಗರ ಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದರು   

ಮೈಸೂರು: ಉದ್ಯೋಗವನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಒಳಚರಂಡಿ ಕಾರ್ಮಿಕರು ಇಲ್ಲಿನ ಪಾಲಿಕೆ ಮುಂಭಾಗ ಸೋಮವಾರ ಪ್ರತಿಭಟನೆ ಆರಂಭಿಸಿದರು.

ಮೈಸೂರು ಮಹಾನಗರ ಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರಕಾರ್ಮಿಕರ ಸಂಘದ ನೇತೃತ್ವದಲ್ಲಿ ಒಳಚರಂಡಿ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿರುವ ಅವರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

‘ಪೌರಕಾರ್ಮಿಕರಿಗೆ ಕಾಯಂ ಆಗುವಾಗ ನಮಗೂ ಕಾಯಂ ಆಗುತ್ತದೆ ಎಂದು ಅಂದುಕೊಂಡಿದ್ದೆವು. ಆದರೆ, ನಮಗೆ ಕಾಯಂ ಮಾಡದೇ ಅನ್ಯಾಯ ಮಾಡಲಾಗಿದೆ’ ಎಂದು ಸಂಘದ ಅಧ್ಯಕ್ಷ ಪಳನಿ ದೂರಿದರು.

ADVERTISEMENT

ಪೌರಕಾರ್ಮಿಕರು ಹಾಗೂ ಒಳಚರಂಡಿ ಕೆಲಸ ಮಾಡುವವರಿಗೂ ವೇತನದಲ್ಲಿ ವ್ಯತ್ಯಾಸ ಇದೆ. ಬೆಳಗಿನ ಉಪಾಹಾರದ ಭತ್ಯೆಯನ್ನೂ ನೀಡುತ್ತಿಲ್ಲ. ಒಳಚರಂಡಿ ಕೆಲಸ ಮಾಡುವ ನಮ್ಮನ್ನು ನಿರ್ಲಕ್ಷ್ಯದಿಂದ ನೋಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಳಚರಂಡಿ ವಿಭಾಗದಲ್ಲಿ 231 ಖಾಲಿ ಹುದ್ದೆಗಳು ಇವೆ. ಈಗ ಕೆಲಸ ಮಾಡುತ್ತಿರುವ ನಮ್ಮನ್ನು ಈ ಹುದ್ದೆಗೆ ನೇಮಕ ಮಾಡಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.

ಒಳಚರಂಡಿ ಕಾರ್ಮಿಕರ ಜೀವಿತಾವಧಿ ಕೇವಲ 50 ವರ್ಷಗಳು ಮಾತ್ರ. ಯಾರು ಬೇಕಾದರೂ ಬಂದು ಸಮೀಕ್ಷೆ ನಡೆಸಿ, ಬಹುತೇಕ ಎಲ್ಲರೂ ಕ್ಯಾನ್ಸರ್, ಚರ್ಮಸಂಬಂಧಿ ರೋಗಗಳು ಹಾಗೂ ಇತರ ಮಾರಕ ರೋಗಗಳಿಗೆ ತುತ್ತಾಗಿ ಮರಣ ಹೊಂದುತ್ತಿದ್ದಾರೆ. ಇಂತಹ ಕಡುಕಷ್ಟದಲ್ಲಿರುವ ನಮ್ಮನ್ನು ಕಾಯಂಗೊಳಿಸಿ ಎಂದು ಮನವಿ ಮಾಡಿದರು.

ಉನ್ನತ ಸಮಿತಿ ಅಧ್ಯಕ್ಷ ಮಾರ, ಕಾರ್ಯದರ್ಶಿ ಶ್ರೀನಿವಾಸ್, ಕಾರ್ಯಾಧ್ಯಕ್ಷ ಕುಮಾರಸ್ವಾಮಿ, ಉಸ್ತುವಾರಿ ಅಧ್ಯಕ್ಷ ಆರ್.ರಾಜು, ಪ್ರಧಾನ ಕಾರ್ಯದರ್ಶಿ ಎಸ್.ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.