ADVERTISEMENT

ಹುಣಸೂರು: ಕನಸುಗಳ ಬುತ್ತಿಯಲ್ಲೇ ಕಮರುತ್ತಿವೆ ಪ್ರತಿಭೆಗಳು

ಕುಂಟುತ್ತಾ ನಿರ್ಮಾಣವಾಗುತ್ತಿರುವ ಒಳಾಂಗಣ ಕ್ರೀಡಾಂಗಣ

ಎಚ್.ಎಸ್.ಸಚ್ಚಿತ್
Published 21 ಜೂನ್ 2021, 3:09 IST
Last Updated 21 ಜೂನ್ 2021, 3:09 IST
ಹುಣಸೂರು ನಗರದ ತಾಲ್ಲೂಕು ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಸ್ಥಗಿತಗೊಂಡಿದೆ
ಹುಣಸೂರು ನಗರದ ತಾಲ್ಲೂಕು ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಸ್ಥಗಿತಗೊಂಡಿದೆ   

ಹುಣಸೂರು: ಭವಿಷ್ಯ ಭಾರತ ನಿರ್ಮಾಣಕ್ಕೆ ಆರೋಗ್ಯವಂತ ಯುವ ಸಮುದಾಯ ಅಗತ್ಯ ಎನ್ನುವ ಹೇಳಿಕೆ ಅಲ್ಲಲ್ಲಿ ಕೇಳಿ ಬರುತ್ತಿದೆ. ಆದರೆ, ಅದು ಕಾರ್ಯರೂಪಕ್ಕೆ ಬರುವುದು ಮಾತ್ರ ವಿರಳ. ಅದಕ್ಕೆ ಉದಾಹರಣೆಯಾಗಿ ತಾಲ್ಲೂಕಿನ ಕ್ರೀಡಾಂಗಣದ ಆವರಣದಲ್ಲಿರುವ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಕಾಣಿಸುತ್ತಿದೆ.

ದಿ.ವಿ.ಪಾಪಣ್ಣ ಅವರು ಶಾಸಕರಾಗಿದ್ದ ಅವಧಿಯಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ಸಿಕ್ಕಿತ್ತು. ಆದರೆ, ವರ್ಷಗಳು ಉರುಳಿದರೂ ಕ್ರೀಡಾಂಗಣ ನಿರ್ಮಾಣ ಮತ್ತು ನಿರ್ವಹಣೆ ಸಮರ್ಪಕವಾಗಿಲ್ಲ.

ತಾಲ್ಲೂಕು ಕ್ರೀಡಾಂಗ ಣಕ್ಕೆ ಹೊಂದಿಕೊಂಡಂತೆ ₹ 2 ಕೋಟಿ ಅನುದಾನದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಆರಂಭವಾಗಿ 5 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ, ಆಗಬೇಕಾದ ಕೆಲಸಗಳ ಪಟ್ಟಿ ಬೆಳೆಯುತ್ತಲೇ ಇದೆ.

ADVERTISEMENT

ಯುವಜನ ಮತ್ತು ಕ್ರೀಡಾ ಇಲಾಖೆಯು ಸ್ಥಳೀಯ ಜನಸಂಖ್ಯೆಗೆ ಅನುಗುಣವಾಗಿ ತಾಲ್ಲೂಕುಮಟ್ಟದಲ್ಲಿ ಕ್ರೀಡಾಂಗಣ ಸಂಕೀರ್ಣ ನಿರ್ಮಿಸುತ್ತಿದೆ. ಯುವ ಸಮುದಾಯಕ್ಕೆ ಆಟದ ಮೈದಾನ ನೀಡುವ ಹುಮ್ಮಸ್ಸು ಹೆಚ್ಚು ದಿನ ಉಳಿಯದೆ ಇರುವುದರಿಂದ ನಿರ್ವಹಣೆಗೆ ಅನುದಾನ ಹಾಗೂ ಸಿಬ್ಬಂದಿಯೂ ನೇಮಕವಾಗಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಮಂಜುನಾಥ್, ತಾಲ್ಲೂಕು ಕ್ರೀಡಾಂಗಣ ವ್ಯಾಪ್ತಿಯಲ್ಲಿ ₹ 2 ಕೋಟಿ ಅನುದಾನದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದೆ. ನಂತರ ಬಂದ ಶಾಸಕರು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಿಲ್ಲ. 2019ರಲ್ಲಿ ಮತ್ತೆ ಉಪಚುನಾವಣೆಯಲ್ಲಿ ಗೆದ್ದ ಬಳಿಕ ಕಾಮಗಾರಿ ಆರಂಭವಾಗಿದೆ. 2017–18ರಲ್ಲಿ ಮಂಜೂರಾದ ಅನುದಾನದಲ್ಲಿ ಎರಡು ಕಂತಿನಲ್ಲಿ ₹ 1 ಕೋಟಿ ಬಿಡುಗಡೆಯಾಗಿದೆ. ಮೂರನೇ ಕಂತಿನ ಅನುದಾನ 2021ರ ಏಪ್ರಿಲ್‌ನಲ್ಲಿ ₹ 20 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನ ಬಳಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಾವಣಿ ನಿರ್ಮಿಸಲು ಯೋಜನೆ ಸಿದ್ಧಗೊಳ್ಳುತ್ತಿದೆ ಎಂದರು.

ಒಳಾಂಗಣ ಕ್ರೀಡಾಂಗಣದಲ್ಲಿ ಸುಸಜ್ಜಿತ ಮರ ನೆಲಹಾಸಿನಿಂದ ಕೂಡಿದ ಬ್ಯಾಡ್ಮಿಂಟನ್ ಕೋರ್ಟ್, ಪಿಂಗ್ ಪಾಂಗ್ ಮತ್ತು ಜಿಮ್ ಇರಲಿದೆ.

ಒಳಾಂಗಣ ಕ್ರೀಡಾಂಗಣ ನಿರ್ಮಾಣದ ಉಸ್ತುವಾರಿ ಹೊತ್ತಿರುವ ಲ್ಯಾಂಡ್ ಆರ್ಮಿಯ ಸಹಾಯಕ ಎಂಜಿನಿಯರ್ ಜೀವನ್ ಮಾತನಾಡಿ, ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ಈಗ ಅನುದಾನ ಬಿಡುಗಡೆಯಾಗಿದ್ದು, ಚಾವಣಿ ಹೊದೆಸುವ ಕೆಲಸ ನಡೆಯಬೇಕಿದೆ. ಚಾವಣಿಯನ್ನು ವಿಭಿನ್ನವಾಗಿ ನಿರ್ಮಿಸುವ ಪ್ರಯತ್ನ ನಡೆದಿದ್ದು, ಶೂನ್ಯ ವ್ಯಾಕ್ಯೂಂ ನಿರ್ವಹಣೆಗೆ ಹೊಸ ತಂತ್ರಜ್ಞಾನ ಬಳಸಿ ಕಬ್ಬಿಣ ಬಳಸದೆ ಪ್ರೊಫ್ಲೆಕ್ಸ್ ಶೀಟ್ ಬಳಸಿ ಚಾವಣಿ ಹೊದಿಸಲು ತಜ್ಞರಿಂದ ನೀಲ ನಕ್ಷೆ ಸಿದ್ಧಗೊಳ್ಳುತ್ತಿದೆ. ಮುಂದಿನ ಎರಡು ತಿಂಗಳೊಳಗಾಗಿ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.