ADVERTISEMENT

ಮೈಸೂರು | ಸಮಸ್ಯೆಗಳ ಆಗರ ಆರ್‌.ಟಿ.ನಗರ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 5:54 IST
Last Updated 15 ಆಗಸ್ಟ್ 2023, 5:54 IST
ಮೈಸೂರಿನ ರಿಂಗ್‌ ರಸ್ತೆಯಾಚೆಗಿನ ರವೀಂದ್ರನಾಥ ಟ್ಯಾಗೋರ್‌ ನಗರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿ ಸಾಗಿದೆ
ಮೈಸೂರಿನ ರಿಂಗ್‌ ರಸ್ತೆಯಾಚೆಗಿನ ರವೀಂದ್ರನಾಥ ಟ್ಯಾಗೋರ್‌ ನಗರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿ ಸಾಗಿದೆ   

ಮೋಹನ್ ಕುಮಾರ ಸಿ.

ಮೈಸೂರು: ರಿಂಗ್‌ ರಸ್ತೆಗೆ ಹೊಂದಿಕೊಂಡಂತಿರುವ ರವೀಂದ್ರನಾಥ ಟ್ಯಾಗೂರ್‌ ನಗರದ ನಿವಾಸಿಗಳು ಮೂಲಸೌಕರ್ಯ ಕೊರತೆಯಿಂದ ಕಂಗಾಲಾಗಿದ್ದಾರೆ. ಇಲ್ಲಿ ಎರಡು ಟ್ಯಾಂಕ್‌ಗಳಿದ್ದರೂ, ಮನೆ–ಮನೆಗೆ ನೀರಿನ ಪೂರೈಸಲು ಪೈಪ್‌ಲೈನ್ ವ್ಯವಸ್ಥೆಯಿಲ್ಲ. ಕಾಮಗಾರಿಯು ಕುಂಟುತ್ತಾ ಸಾಗಿದೆ. 

ರಸ್ತೆಗಳ ಡಾಂಬಾರು ಹಲವೆಡೆ ಕಿತ್ತು ಬಂದಿದೆ. ಇಲ್ಲಿನ ಉದ್ಯಾನಗಳು ಗಿಡಗಂಟಿಗಳ ಕಾನನವಾಗಿ ಬದಲಾಗಿದ್ದು, ಚಿರತೆ ಓಡಾಟ ಮಾಮೂಲಿಯಾಗಿದೆ.  ಹಾವು– ವಿಷಜಂತುಗಳ ಆವಾಸಸ್ಥಾನವಾಗಿದೆ. ಆಡಲು ಮೈದಾನ, ವಿಹರಿಸಲು ಉತ್ತಮ ಪಾರ್ಕ್‌ ಸೌಲಭ್ಯವಿಲ್ಲ. ವಾರಕ್ಕೊಮ್ಮೆ ಬರುವ ಕುಡಿಯಲು ನೀರಿನ ಟ್ಯಾಂಕರ್‌ ಅನ್ನೇ ನೀರಿಗಾಗಿ ನಿವಾಸಿಗಳು ಅವಲಂಬಿಸಬೇಕಿದೆ.

ADVERTISEMENT

ಬಸ್‌ ಸೌಲಭ್ಯವಿಲ್ಲ

ಬಸ್‌ ಸೌಲಭ್ಯಕ್ಕೆ ಲಿಂಗಾಂಬುಧಿ ಪಾಳ್ಯಕ್ಕೆ ಹೋಗಬೇಕಿದೆ. ಮೂರ್ನಾಲ್ಕು ವರ್ಷದ ಹಿಂದೆ ಒಂದೆರಡು ದಿನ ಮಾತ್ರ ಬಸ್ ಬಂದಿತ್ತು. ಸೋಮನಾಥ ನಗರ ಹಾಗೂ ಲಿಂಗಾಂಬುಧಿ ಪಾಳ್ಯಕ್ಕೆ ಬರುವ ಬಸ್‌ಗಳನ್ನೇ ಆರ್‌.ಟಿ.ನಗರಕ್ಕೆ ವಿಸ್ತರಿಸಬೇಕು ಎಂಬುದು ಇಲ್ಲಿನ ನಿವಾಸಿಗಳ ಬಹುದಿನದ ಬೇಡಿಕೆ‌.

ಬೀದಿದೀಪಗಳ ವ್ಯವಸ್ಥೆ ಇಲ್ಲ

‘ರಿಂಗ್‌ ರಸ್ತೆಯಾಚೆಗೆ ಇರುವ ಈ ಜನವಸತಿ ಪ್ರದೇಶದ ಬೀದಿಗಳಿಗೆ ದೀಪದ ವ್ಯವಸ್ಥೆಯನ್ನು ಮಾಡಿಲ್ಲ. ಕತ್ತಲಾದರೆ ಜನರು ಓಡಾಡಲೂ ಭಯವಾಗುತ್ತದೆ. ಅಲ್ಲದೆ, ಎರಡ್ಮೂರು ವರ್ಷದ ಹಿಂದೆ ಕಳ್ಳತನಗಳೂ ನಡೆದಿದ್ದವು. ಸಿ.ಸಿ ಟಿವಿ ಕ್ಯಾಮೆರಾವನ್ನು ಅಳವಡಿಸಿದ ಮೇಲೆ ಕಳ್ಳತನ ಪ್ರಕರಣ ನಡೆಯುತ್ತಿಲ್ಲ’ ಎನ್ನುತ್ತಾರೆ ನಂದಿನಿ ಹಾಲಿನ ಬೂತ್‌ ಮಾಲೀಕ ಆದಿತ್ಯ.

ನಾಲ್ಕು ವರ್ಷದಿಂದಲೂ ವಿದ್ಯುತ್‌ ಕುಡಿಯುವ ನೀರು ಕಸ ವಿಲೇವಾರಿ ಸೇರಿದಂತೆ ಸಮಸ್ಯೆಗಳನ್ನು ಎದುರಿಸಿದ್ದೇವೆ. ಬಗೆಹರಿದಿಲ್ಲ
ಎನ್‌.ರಾಜೇಶ್‌, ಅಧ್ಯಕ್ಷ, ಆರ್‌.ಟಿ.ನಗರ ಕ್ಷೇಮಾಭಿವೃದ್ಧಿ ಸಂಘ

‘ಬೀದಿದೀಪ, ಕುಡಿಯುವ ನೀರಿನ ಸೌಲಭ್ಯ ಒದಗಿಸಿದರೆ ಬಹುತೇಕ ಸಮಸ್ಯೆಗಳು ಬಗೆಹರಿದಂತೆ, ಹಲವು ವರ್ಷಗಳಿಂದ ಪ್ರಯತ್ನಿಸಿದ ನಂತರ ಇದೀಗ ಕಾಮಗಾರಿಗಳನ್ನು ಆರಂಭಿಸಿದ್ದಾರೆ. ಎರಡ್ಮೂರು ತಿಂಗಳಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಸಂಸದ ಪ್ರತಾಪಸಿಂಹ ಭರವಸೆ ನೀಡಿದ್ದಾರೆ. ನೋಡಬೇಕು’ ಎಂದು ಆರ್‌.ಟಿ.ನಗರ ನಿವಾಸಿ ಎಚ್‌.ಎಸ್‌.ಶ್ರೀಪಾದರಾವ್ ಹೇಳಿದರು. 

‘ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಷಗಳ ಕಾಲ ಅಲೆದು ಸಾಕಾಗಿದೆ. ಉದ್ಯಾನಗಳು ಅಭಿವೃದ್ಧಿಯಾಗಿಲ್ಲ. ನೀರಿನ ಸಂಪರ್ಕ ಸಿಕ್ಕ ಮೇಲೆ ಅದೂ ಸುಧಾರಣೆಯಾಗಲಿದೆ. ಟ್ಯಾಂಕ್‌ಗಳಿಗೆ ಹಲವು ವರ್ಷದಿಂದಲೂ ಕಬಿನಿ ನೀರು ಬರುತ್ತದೆ. ಮುಡಾ ಟ್ಯಾಂಕರ್ ಮೂಲಕ ವಾರಕ್ಕೊಮ್ಮೆ ಮನೆಗಳಿಗೆ ಉಚಿತವಾಗಿ ಪೂರೈಸುತ್ತಿತ್ತು. ಇದೀಗ ನಲ್ಲಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ’ ಎಂದು ಆರ್‌.ಟಿ.ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್‌.ರಾಜೇಶ್‌ ತಿಳಿಸಿದರು.

ಚಿರತೆ ಕಳ್ಳರ ಕಾಟವು ಇದೆ. ಬೀದಿದೀಪಗಳಿಲ್ಲದೇ ಕೆಲವು ರಸ್ತೆಗಳಲ್ಲಿ ಓಡಾಡುವುದೂ ಕಷ್ಟ. ಸಮಸ್ಯೆ ಬಗೆಹರಿಸಬೇಕು.
ಆದಿತ್ಯ, ಆರ್‌.ಟಿ.ನಗರ ನಿವಾಸಿ

‘ಮನೆಗಳಿಗೆ ವಿದ್ಯುತ್‌ ಸಂಪರ್ಕವಿರಲಿಲ್ಲ. ವಾಣಿಜ್ಯ ಬಳಕೆಯ ವಿದ್ಯುತ್‌ ಸಂಪರ್ಕವಿತ್ತು. ತಿಂಗಳಿಗೆ ₹ 3 ಸಾವಿರದಿಂದ ₹ 4 ಸಾವಿರ ಬಿಲ್‌ ಬರುತ್ತಿತ್ತು. ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಿರಲಿಲ್ಲ. ಆರ್‌.ಟಿ.ನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಾಸಕ ಜಿ.ಟಿ.ದೇವೇಗೌಡ, ಸಂಸದರು ಹಾಗೂ ಮುಡಾಗೆ ಮನವಿ ಸಲ್ಲಿಸಿದ್ದೆವು. ಇದೀಗ ಸಂಸದರು ಸ್ಪಂದಿಸಿದ್ದಾರೆ. ವಾರದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ಮುಂದುವರಿಯಲಿದೆ’ ಎಂದರು.

‘ಎ, ಬಿ, ಸಿ, ಡಿ, ಇ ಬ್ಲಾಕ್‌ಗಳಿದ್ದು, 40 ಮನೆಗಳಲ್ಲಿ ಜನರು ವಾಸವಿದ್ದಾರೆ. 40 ಮನೆಗಳು ನಿರ್ಮಾಣವಾಗುತ್ತಿವೆ. ಖಾಸಗಿ ಬಡಾವಣೆಗಳೂ ಸೇರಿ 150ಕ್ಕೂ ಮನೆಗಳು ಇವೆ. ಕಸ ವಿಲೇವಾರಿ ಸಮಸ್ಯೆಯೂ ಇದೆ. ಮುಡಾದವರು 3 ತಿಂಗಳಿಗೆ ಟೆಂಡರ್ ಕೊಡುತ್ತಾರೆ. ಅವಧಿ ಮುಗಿದ ನಂತರ ಮತ್ತೊಂದು ಟೆಂಡರ್‌ ಕರೆಯುವುದು ತಡವಾಗುತ್ತದೆ. ವಿಲೇವಾರಿ ಸಮಸ್ಯೆ ಮುಗಿದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಮಸ್ಯೆಗಳ ಕುರಿತು ಮುಡಾ ಆಯುಕ್ತ ಜಿ.ಟಿ.ದಿನೇಶ್‌ ಕುಮಾರ್ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.