ADVERTISEMENT

ಮೈಸೂರಿನಲ್ಲಿ ಡ್ರಗ್ಸ್ ದಂಧೆ: CBI ತನಿಖೆಗೆ ಯದುವೀರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 5:09 IST
Last Updated 31 ಜುಲೈ 2025, 5:09 IST
ಯದುವೀರ್
ಯದುವೀರ್   

ಮೈಸೂರು: ‘ಸಾಂಸ್ಕೃತಿಕ ನಗರಿ, ಶಿಕ್ಷಣಕ್ಕೆ, ಸಂಸ್ಕೃತಿಗೆ ಹೆಸರವಾಗಿಯಾಗಿರುವ ಮೈಸೂರು, ಈಚೆಗೆ ಮಾದಕ ದ್ರವ್ಯ ವಸ್ತುಗಳ ತಯಾರಿಕಾ ಘಟಕ ಕಾರ್ಯನಿರ್ವಹಿಸುತ್ತಿದ್ದ ಕಾರಣದಿಂದಾಗಿ ಅಪಖ್ಯಾತಿಗೆ ಒಳಗಾಗಿದೆ. ಡ್ರಗ್ಸ್‌ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಸಚಿವಾಲಯ ಮುಂದಾಗಬೇಕು’ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ಮೈಸೂರಿನಲ್ಲಿ ₹390 ಕೋಟಿ ಮೌಲ್ಯದ ಎಂಡಿಎಂಎ ಡಗ್ಸ್‌ ಪತ್ತೆಯಾಗಿರುವುದು ಆತಂಕಕಾರಿ ವಿಷಯವಾಗಿದೆ’ ಎಂದು
ಹೇಳಿದ್ದಾರೆ.

‘ಸರ್ಕಾರಿ ಜಾಗದಲ್ಲಿಯೇ ಈ ಡ್ರಗ್ಸ್‌ ಕೇಂದ್ರವಿದ್ದು, ಕರ್ನಾಟಕ ಪೊಲೀಸರು ಯಾವುದೇ ರೀತಿಯಲ್ಲೂ ಕ್ರಮ ಕೈಗೊಂಡಿಲ್ಲ. ಅಚ್ಚರಿಯ ವಿಷಯ ಎಂದರೆ ಮಹಾರಾಷ್ಟ್ರ ಪೊಲೀಸರು ಮೈಸೂರಿಗೆ ಬಂದು ದಾಳಿ ನಡೆಸಿ ಈ ಡ್ರಗ್ಸ್‌ ಜಾಲವನ್ನು ಪತ್ತೆ ಹಚ್ಚಿದ್ದಾರೆ’ ಎಂದಿದ್ದಾರೆ.

ADVERTISEMENT

‘ಗೃಹ ಸಚಿವರು, ಈ ವಿಷಯದಲ್ಲಿ ನಮ್ಮ ವೈಫಲ್ಯವಿದೆ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ. ಇದು ಬೇಜವಾಬ್ದಾರಿಯ ಪರಮಾವಧಿ. ಇದರಿಂದ ನಮ್ಮ ಕಾನೂನು– ಸುವ್ಯವಸ್ಥೆ ಹದಗೆಟ್ಟಿದೆ. ಉದಯಗಿರಿಯಲ್ಲಿ ಪೊಲೀಸ್‌ ಠಾಣೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಆದರೆ, ರಾಜ್ಯ ಗೃಹ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ಆರೋಪಿಸಿದ್ದಾರೆ.

‘ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಅಂತರರಾಜ್ಯ ಮಟ್ಟದಲ್ಲಿ ತನಿಖೆ ನಡೆಸಬೇಕು. ರಾಷ್ಟ್ರೀಯ ಮಾದಕ ದ್ರವ್ಯ ಮಂಡಳಿ (ಎನ್‌ಸಿಬಿ) ಘಟಕವನ್ನು ಮೈಸೂರಿನಲ್ಲಿ ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.