
ಮೈಸೂರು: ಶುಭ ಸಮಾರಂಭಗಳಲ್ಲಿ ಸಾಂಬಾರಿನ ಘಮ ಹೆಚ್ಚಿರುವ ನುಗ್ಗೆಕಾಯಿ ದರವು ಗ್ರಾಹಕರ ಕೈಗೆ ಎಟುಕದಷ್ಟು ಮಟ್ಟಕ್ಕೆ ತಲುಪಿದೆ. ಉಳಿದ ತರಕಾರಿಗಳ ಧಾರಣೆಯಲ್ಲಿ ಏರಿಳಿತವಾಗಿದೆ.
ಮಾರುಕಟ್ಟೆಗೆ ನುಗ್ಗೆಯ ಆವಕವೇ ಅಪರೂಪವಾಗಿದೆ. ಹೀಗಾಗಿ ಪ್ರತಿ ಕೆ.ಜಿ.ಗೆ ₹400–500ರವರೆಗೂ ಬೆಲೆ ಏರಿಸಿಕೊಂಡಿದ್ದು, ಬೆಲೆ ಕೇಳಿಯೇ ಗ್ರಾಹಕರು ಹೌಹಾರುವಂತಾಗಿದೆ. ಶುಭ ಸಮಾರಂಭಗಳ ಕಾರಣಕ್ಕೆ ಬೇಡಿಕೆಯೂ ಇದೆ. ಆವಕ ಹೆಚ್ಚಿದಲ್ಲಿ ಮಾತ್ರ ಬೆಲೆ ಇಳಿಯಬಹುದು ಎನ್ನುತ್ತಾರೆ ವರ್ತಕರು.
ವಾರಗಳ ಹಿಂದೆ ಬೆಲೆ ಇಳಿಸಿಕೊಂಡಿದ್ದ ಬೀನ್ಸ್ ಅರ್ಥಾತ್ ಹುರುಳಿಕಾಯಿ ಧಾರಣೆ ಏರುಮುಖವಾಗಿದೆ. ಸಗಟು ಮಾರುಕಟ್ಟೆಯಲ್ಲಿ ₹40–50 ದರವಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ₹60ರವರೆಗೂ ವ್ಯಾಪಾರ ನಡೆದಿದೆ. ಕ್ಯಾರೆಟ್ ಸಹ ದುಬಾರಿ ಆಗಿದೆ. ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) ಬೆಲೆ ಕೊಂಚ ತಗ್ಗಿದೆ. ಬದನೆ, ಮೂಲಂಗಿ, ಎಲೆಕೋಸು, ಬೆಂಡೆ ಮೊದಲಾದವುಗಳ ದರಗಳು ಕೊಂಚ ಅಗ್ಗವಾಗಿಯೇ ಇವೆ.
ಟೊಮೆಟೊ ಧಾರಣೆ ವಿಚಾರದಲ್ಲಿ ಹಾವು–ಏಣಿ ಆಟ ನಡೆದಿದೆ. ವಾರದ ಹಿಂದಷ್ಟೇ ಸಗಟು ದರ ತೀವ್ರ ಏರಿಕೆಯತ್ತ ಮುಖ ಮಾಡಿದ್ದು, ಇನ್ನಷ್ಟು ದುಬಾರಿ ಆಗುವ ನಿರೀಕ್ಷೆ ಇತ್ತು. ಆದರೆ ಅಷ್ಟು ವ್ಯತ್ಯಾಸ ಆಗಿಲ್ಲ. ಗುಣಮಟ್ಟದ ಹುಳಿ ಟೊಮೆಟೊಗಷ್ಟೇ ಕೊಂಚ ಹೆಚ್ಚು ಬೆಲೆ ಇದ್ದು, ಸರಾಸರಿ ₹40–50ರ ದರದಲ್ಲಿ ವ್ಯಾಪಾರ ನಡೆದಿದೆ.
ಸೊಪ್ಪುಗಳು ಸದ್ಯ ಅಗ್ಗವಾಗಿಯೇ ಇವೆ. ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಸೊಪ್ಪಿನ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸಣ್ಣ ಕಟ್ಟು ₹10ಕ್ಕೆ 4ರಂತೆ ಮಾರಾಟವಾದರೆ, ಮೆಂತ್ಯ ₹20ಕ್ಕೆ 3, ಸಬ್ಬಸ್ಸಿಗೆ ₹5,ಕೀರೆ–ಕಿಲ್‌ಕೋರೆ, ದಂಟು ಹಾಗೂ ಪಾಲಕ್ ₹10ಕ್ಕೆ 3ರಂತೆ ಮಾರಾಟ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.