ADVERTISEMENT

ಒಗ್ಗೂಡದಿದ್ದರೆ ಸರ್ವನಾಶ ಖಚಿತ: ಪ್ರೊ.ಗೋವಿಂದಯ್ಯ

ಶೋಷಿತ ಸಮುದಾಯಗಳಿಗೆ ಸಾಹಿತಿ ಪ್ರೊ.ಗೋವಿಂದಯ್ಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 13:41 IST
Last Updated 16 ಡಿಸೆಂಬರ್ 2019, 13:41 IST
ಮೈಸೂರಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಸೋಮವಾರ ನಡೆದ ಶೋಷಿತ ಸಮುದಾಯಗಳ ಜಾಗೃತಿ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದ ಮುಖಂಡರು
ಮೈಸೂರಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಸೋಮವಾರ ನಡೆದ ಶೋಷಿತ ಸಮುದಾಯಗಳ ಜಾಗೃತಿ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದ ಮುಖಂಡರು   

ಮೈಸೂರು: ‘ದಲಿತರು, ಶೋಷಿತರು, ಹಿಂದುಳಿದವರು ಸಾಮಾಜಿಕ ನ್ಯಾಯ ಪಡೆಯಲಿಕ್ಕಾಗಿ ಇಂದಿಗೂ ಒಗ್ಗೂಡಬೇಕಿದೆ. ಒಟ್ಟಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕಿದೆ’ ಎಂದು ಸಾಹಿತಿ ಪ್ರೊ.ಗೋವಿಂದಯ್ಯ ಹೇಳಿದರು.

ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಸೋಮವಾರ ನಡೆದ ಶೋಷಿತ ಸಮುದಾಯಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶೋಷಿತರು ತಮ್ಮ ಜಾತಿಯ ಜೈಲುಗಳಿಂದ ಹೊರಬಂದು ಒಟ್ಟಾಗದಿದ್ದರೆ, ಎಲ್ಲರ ಸರ್ವನಾಶ ಖಚಿತ’ ಎಂದು ಎಚ್ಚರಿಕೆಯ ನುಡಿಗಳನ್ನಾಡಿದರು.

‘ಜಾತಿ ವ್ಯವಸ್ಥೆಯೇ ಸಮಾಜದಲ್ಲಿ ಅಪಮಾನಕಾರಿಯಾದುದು. ಇಂತಹ ಕಾಲಘಟ್ಟದಲ್ಲೂ ಶೋಷಿತ ಸಮುದಾಯದ ಪ್ರಬಲ ಜಾತಿಯವರು ತಮಗಿಂತ ಕೆಳಗಿನ ಜಾತಿಯವರನ್ನು ಶೋಷಿಸುವುದು, ಅಸ್ಪೃಶ್ಯತೆ ಆಚರಿಸುವುದು ಅತ್ಯಂತ ಅಪಾಯಕಾರಿ ಹಾಗೂ ಆತ್ಮಹತ್ಯಾಕಾರಿ ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗರಿಗೆ ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಕಿಂಚಿತ್ ಗೌರವವಿದ್ದರೆ, ಶೋಷಿತರು–ದಮನಿತರ ಕಾಲಿಗೆ ಮೊದಲು ಸಾಷ್ಟಾಂಗ ನಮಸ್ಕಾರ ಹಾಕಬೇಕು. ಭಾರತ ಮಾತೆ, ಭಾರತೀಯತೆ, ಧರ್ಮ, ಸಂಸ್ಕೃತಿಯನ್ನು ಕಟ್ಟಿದವರು, ಉಳಿಸಿದವರು ಇವರೇ. ಹನ್ನೆರಡನೇ ಶತಮಾನದ ವಚನ ಚಳವಳಿಯನ್ನು ಕಟ್ಟಿದವರು ಇವರೇ. ಈ ಪರಂಪರೆಯನ್ನು ದಲಿತ ಚಳವಳಿ ಮುಂದುವರೆಸಬೇಕಾದ ಅವಶ್ಯಕತೆಯಿದೆ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ಮುಖಂಡ ಆರ್.ರಘು ಕೌಟಿಲ್ಯ ಮಾತನಾಡಿ, ‘ಶತ ಶತಮಾನಗಳ ಹಿಂದಿನಿಂದಲೂ ಸಾಮಾಜಿಕ ಸುಧಾರಣೆ ನಿರಂತರವಾಗಿ ನಡೆದಿದ್ದರೂ, ಇಂದಿನ ತಂತ್ರಜ್ಞಾನದ ಹೈಟೆಕ್ ಯುಗದಲ್ಲೂ ಜಾತಿ, ಸಾಮಾಜಿಕ ಅಸಮತೋಲವನ್ನು ಸಹಿಸಲು ಅಸಾಧ್ಯ ಎಂಬಂತಹ ವಾತಾವರಣ ಜೀವಂತವಾಗಿದೆ. ಇದು ಜೀರ್ಣಿಸಿಕೊಳ್ಳಲು ಅಸಾಧ್ಯವಾದುದು’ ಎಂದರು.

‘ಹೆಸರಿಗಷ್ಟೇ ಮೀಸಲಾತಿ. ಇದನ್ನು ಕಬಳಿಸುವವರೇ ಬೇರೆ. ಇಂದಿನ ಕಾಲಘಟ್ಟದಲ್ಲಿ ದುರ್ಬಲರು, ಅಸಹಾಯಕರು, ಶೋಷಿತರನ್ನು ನೆಲದೊಳಗೆ ಹೂತುಹಾಕಿ ಮೇಲ್ಭಾಗದಲ್ಲಿ ಚಪ್ಪಡಿ ಎಳೆಯುವ ಸಮಾಜವೇ ಸದೃಢಗೊಳ್ಳುತ್ತಿದೆ. ನೊಂದವರಿಗೆ, ಬಡವರಿಗೆ ನ್ಯಾಯಾಂಗ ವ್ಯವಸ್ಥೆಯೂ ಸುಲಭವಾಗಿ ಸಿಗದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಿಂಗರಾಜ ಮಲ್ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ದಲಿತರು, ಹಿಂದುಳಿದವರು, ನೊಂದವರು, ಶೋಷಿತರಿಗೆ ಹೋರಾಟವೇ ಪರ್ಯಾಯವಾಗಿದೆ. ಇನ್ಮುಂದಾದರೂ ದಲಿತ ಸಮೂಹ ರಾಜಕೀಯವಾಗಿ ಆಲೋಚಿಸಬೇಕಿದೆ. ತಳಹಂತದ ನೊಂದವರು, ಹಸಿದವರು, ಬೀದಿಗೆ ಬಿದ್ದವರ ಧ್ವನಿಯಾಗುವ ಅನಿವಾರ್ಯತೆ ದಲಿತ ಸಂಘರ್ಷ ಸಮಿತಿಗಿದೆ. ಸಾಲಿಗ್ರಾಮ ಘಟನೆ ಖಂಡನಾರ್ಹ’ ಎಂದು ಹೇಳಿದರು.

ಎಚ್‌.ಬಿ.ದಿವಾಕರ್, ರಾಮಸ್ವಾಮಿ, ವೆಂಕಟೇಶ್‌, ಕೆಂಪರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.