ADVERTISEMENT

ಸಲಗ ಕಾಡಿಗಟ್ಟಲು ಹರಸಾಹಸ

ಮೂರನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 12 ಮೇ 2019, 20:07 IST
Last Updated 12 ಮೇ 2019, 20:07 IST

ಹಂಪಾಪುರ: ಮಹೇಶ್ವರ ಬೆಟ್ಟದಲ್ಲಿ ಶುಕ್ರವಾರ ಕಾಣಿಸಿಕೊಂಡ ಒಂಟಿಸಲಗವನ್ನು ಕಾಡಿಗಟ್ಟುವ ಕಾರ್ಯಾಚರಣೆ ಮೂರನೇ ದಿನವಾದ ಭಾನುವಾರವೂ ನಡೆಯಿತು.

ಹಂಪಾಪುರ ಸೇರಿದಂತೆ ಬೆಟ್ಟದಬೀಡು, ಚುಂಚರಾಯನಹುಂಡಿ, ಕಲ್ಲಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆ ಕಾಣಿಸಿಕೊಂಡಿದೆ.

ಮಹೇಶ್ವರಬೆಟ್ಟದಲ್ಲಿ ಬೀಡುಬಿಟ್ಟಿರುವ ಅರಣ್ಯ ಸಿಬ್ಬಂದಿ ಸಂಜೆ 5 ಗಂಟೆಗೆ ಕಾರ್ಯಾಚರಣೆ ಆರಂಭಿಸಿದರು. ಇಲ್ಲಿ ಹೆಚ್ಚಿನ ಪ್ರಮಾಣದ ಕುರುಚಲು ಕಾಡು ಇರುವುದರಿಂದ ಕಾರ್ಯಾಚರಣೆಗೆ ಕೊಂಚ ಅಡ್ಡಿ ಉಂಟಾಯಿತು.

ADVERTISEMENT

‘ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಮಧ್ಯಾಹ್ನ ಅಥವಾ ಬೆಳಗಿನ ಸಮಯದಲ್ಲಿ ಕಾಡಿಗಟ್ಟಬೇಕು. ಆದರೆ ಇವರು ಸಂಜೆ ವೇಳೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಕತ್ತಲು ಅಡ್ಡಿಯಾಗುತ್ತಿದೆ. ಕತ್ತಲಾಗುತ್ತಿದ್ದಂತೆ ಕಾರ್ಯಾಚರಣೆ ಕೈಬಿಡುತ್ತಾರೆ’ ಎಂದು ಚುಂಚರಾಯನಹುಂಡಿ ಗ್ರಾಮಸ್ಥರು ಆರೋಪಿಸುತ್ತಾರೆ.

‘ಆನೆ ಇರುವ ಸುತ್ತಮುತ್ತಲಿನ ಪ‍್ರದೇಶದಲ್ಲಿ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ರೈತರನ್ನು ವಿನಂತಿ ಮಾಡಿಕೊಂಡರೂ ಜಮೀನು ಬಿಟ್ಟು ಹೋಗಿಲ್ಲ. ಬೆಳಿಗ್ಗೆ ವೇಳೆ ಕಾರ್ಯಾಚರಣೆ ನಡೆಸಿದರೆ ಅನಾಹುತವಾಗಬಹುದು ಎಂಬ ಉದ್ದೇಶದಿಂದ ಸಂಜೆ ಕೈಗೊಳ್ಳುತ್ತಿದ್ದೇವೆ’ ಎಂದು ಎಚ್.ಡಿ.ಕೋಟೆ ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಧು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಎ.ಸಿ.ಎಫ್ ಮರಮೇಶ್ವರ್, ನಂಜನಗೂಡು ಆರ್.ಎಫ್.ಒ ಲೋಕೇಶ್ ಮೂರ್ತಿ, ಸರಗೂರು ಆರ್.ಎಫ್.ಒ ಮೋಸಿಂ ಬಾಷಾ ಸೇರಿದಂತೆ 60ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.