ADVERTISEMENT

ಅರಮನೆ ಸೇರಿದ 2ನೇ ಹಂತದ ಗಜಪಡೆ

ಆನೆಗಳಿಗೆ ಕುದರೆಗಳ ಜತೆ ತಾಲೀಮು ಆರಂಭ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 20:22 IST
Last Updated 9 ಸೆಪ್ಟೆಂಬರ್ 2019, 20:22 IST
ಮೈಸೂರು ಅರಮನೆಗೆ ಸೋಮವಾರ ಬಂದ 2ನೇ ಹಂತದ ಗಜಪಡೆಗೆ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು
ಮೈಸೂರು ಅರಮನೆಗೆ ಸೋಮವಾರ ಬಂದ 2ನೇ ಹಂತದ ಗಜಪಡೆಗೆ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು   

ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲಿರುವ 2ನೇ ಹಾಗೂ ಕೊನೆಯ ಹಂತದ ಗಜಪಡೆ ಸೋಮವಾರ ಅರಮನೆಯನ್ನು ಪ್ರವೇಶಿಸಿವೆ.

‌ದುಬಾರೆ ಶಿಬಿರದಿಂದ ಕಾವೇರಿ (41), ವಿಕ್ರಮ (46), ಗೋಪಿ (37), ಕೆ.ಗುಡಿಯಿಂದ ದುರ್ಗಾ ಪರಮೇಶ್ವರಿ (52), ರಾಂಪುರದಿಂದ ಜಯಪ್ರಕಾಶ್ (57) ಹಾಗೂ ಲಕ್ಷ್ಮೀ (17) ಆನೆಗಳು ಬಂದಿಳಿದವು. ಭಾನುವಾರವಷ್ಟೇ ಮತ್ತಿಗೋಡುವಿನಿಂದ ಬಲರಾಮ (61) ಬಂದಿತ್ತು.

ಮೊದಲ ಹಂತದಲ್ಲಿ ಬಳ್ಳೆ ಆನೆ ಶಿಬಿರದ ಅರ್ಜುನ (59 ವರ್ಷ), ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು (53), ವರಲಕ್ಷ್ಮಿ (63), ದುಬಾರೆ ಆನೆ ಶಿಬಿರದ ಧನಂಜಯ (36), ಈಶ್ವರ (49), ವಿಜಯ (62) ಬಂದಿದ್ದವು. ಎರಡು ಹೊಸ ಆನೆಗಳು ಸೇರಿದಂತೆ ಒಟ್ಟು 14 ಆನೆಗಳನ್ನು ಕರೆತರುವ ಚಿಂತನೆ ಇತ್ತು. ಕೊನೆಗಳಿಗೆಯಲ್ಲಿ ರೋಹಿತ್‌ ಆನೆಯನ್ನು ಕೈಬಿಡಲಾಯಿತು. ಒಟ್ಟು 13 ಆನೆಗಳು ಈ ಬಾರಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ.

ADVERTISEMENT

ಶಿಬಿರದಲ್ಲಿ ರೋಹಿತ್ ನಡೆಸಿದ ತುಂಟಾಟದಿಂದಲೇ ಇದನ್ನು ಕೈಬಿಡಲಾಯಿತು ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ನಿರಾಕರಿಸಿರುವ ಡಿಸಿಎಫ್ ಅಲೆಕ್ಸಾಂಡರ್‌, ‘12 ಆನೆಗಳು ಬೇಕಾಗಿತ್ತು. ಹೆಚ್ಚುವರಿಯಾಗಿ 2 ಆನೆಗಳನ್ನು ಕರೆತರುವ ಚಿಂತನೆ ಇತ್ತು. ಈಗ ಹೆಚ್ಚುವರಿ ಆನೆಯ ಅಗತ್ಯ ಇಲ್ಲ. ಹಾಗಾಗಿ, 13 ಆನೆಗಳಷ್ಟೇ ಬಂದಿವೆ’ ಎಂದು ಹೇಳಿದರು.

2ನೇ ಹಂತದಲ್ಲಿ ಬಂದ ಆನೆಗಳ ಪರಿಚಯ:ಬಲರಾಮ: ಮೈಸೂರು ದಸರಾ ಮಹೋತ್ಸವದಲ್ಲಿ 23 ವರ್ಷದಿಂದ ಭಾಗಿಯಾಗುತ್ತಿರುವ 61 ವರ್ಷದ ಬಲರಾಮ`ದ್ರೋಣ’ನ ನಂತರ ಸತತವಾಗಿ 14 ವರ್ಷ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದಾನೆ. ಇದರ ಮಾವುತ ತಿಮ್ಮ ಹಾಗೂ ಕವಾಡಿ ಪಾಪು. ಇದನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಿಂದ ಸೆರೆ ಹಿಡಿಯಲಾಗಿತ್ತು.

ಕಾವೇರಿ: 8 ವರ್ಷದಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ 41 ವರ್ಷದ ‘ಕಾವೇರಿ’ ಆನೆಯ ಮಾವುತ ದೋಬಿ, ಕವಾಡಿ ಜೆ.ರಂಜನ್. ಇದನ್ನು 2009ರಲ್ಲಿ ಸೋಮವಾರಪೇಟೆಯ ಆಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು.

ವಿಕ್ರಮ: 15 ವರ್ಷಗಳಿಂದ ಪಾಲ್ಗೊಳ್ಳುತ್ತಿರುವ 46 ವರ್ಷದ ‘ವಿಕ್ರಮ’ನೊಂದಿಗೆ ಮಾವುತ ಪುಟ್ಟ, ಕವಾಡಿ ಹೇಮಂತ ಕುಮಾರ್ ಇದ್ದಾರೆ. ಇದನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. 2015ರಿಂದ ಪಟ್ಟದ ಆನೆಯಾಗಿ ಇದು ಅರಮನೆಯ ಪೂಜಾವಿಧಿಗಳಲ್ಲಿ ಭಾಗವಹಿಸುತ್ತಿದೆ.

ಗೋಪಿ: 9 ವರ್ಷದಿಂದ ದಸರೆಯಲ್ಲಿ ಭಾಗಿಯಾಗುತ್ತಿರುವ 37 ವರ್ಷ ವಯಸ್ಸಿನ ‘ಗೋಪಿ’ಯ ಮಾವುತ ದೊರೆಯಪ್ಪ, ಕವಾಡಿ ಶಿವು. 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಇದು ದುಬಾರೆ ಶಿಬಿರದಲ್ಲಿ ಸಫಾರಿ ಕೆಲಸವನ್ನು ನಿರ್ವಹಿಸುತ್ತಿದೆ.

ದುರ್ಗಪರಮೇಶ್ವರಿ: 7ನೇ ಬಾರಿಗೆ ಪಾಲ್ಗೊಳ್ಳುತ್ತಿರುವ 52 ವರ್ಷ ವಯಸ್ಸಿನ ‘ದುರ್ಗಾಪರಮೇಶ್ವರಿ’ಯೊಂದಿಗೆ ಮಾವುತ ಅಣ್ಣು ಹಾಗೂ ಕವಾಡಿ ಕೃಷ್ಣ ಇದ್ದಾರೆ. 1972ರಲ್ಲಿ ಮಡಿಕೇರಿ ವಿಭಾಗದ ದುಬಾರೆಯಲ್ಲಿ ಸೆರೆ ಹಿಡಿಯಲಾಯಿತು.

ಜಯಪ್ರಕಾಶ್: ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗಿಯಾಗುತ್ತಿರುವ ಬಂಡೀಪುರದ ರಾಂಪುರ ಆನೆ ಶಿಬಿರದಿಂದ ಕರೆತರಲಾಗಿರುವ 57 ವರ್ಷದ ‘ಜಯಪ್ರಕಾಶ್’ ಆನೆಗೆ ಸಯ್ಯದ್ ಮಹಮ್ಮದ್ ಮಾವುತ ಹಾಗೂ ಕಾವಾಡಿ ಬಸವರಾಜು ಇದ್ದಾರೆ. ಈ ಆನೆಯು 8 ವರ್ಷದ ಮರಿಯಾಗಿದ್ದಾಗ ಬೇಗೂರು ಮನೆ ಶಿಬಿರಕ್ಕೆ ಬಂದಿತ್ತು.

ಲಕ್ಷ್ಮೀ: ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿರುವ 17 ವರ್ಷದ ‘ಲಕ್ಷ್ಮೀ’ ಆನೆಗೆ ಚಂದ್ರ ಮಾವುತ, ಕಾವಾಡಿ ಲವ. ಈ ಆನೆಯು 2002ರಲ್ಲಿ ತಾಯಿಯಿಂದ ಬೇರ್ಪಟ್ಟು ಇಲಾಖಾ ಆನೆ ಶಿಬಿರಕ್ಕೆ ಬಂದಿತ್ತು.

ಆ. 26ರಂದು ಬಂದಿರುವ ಗಜಪಡೆಗೆ ಕಳೆದೆರಡು ದಿನಗಳಿಂದ ಕುದುರೆಗಳ ಜತೆ ತಾಲೀಮು ನೀಡಲಾಗುತ್ತಿದೆ. ಕುದುರೆಗಳ ಜತೆ ಹೆಜ್ಜೆ ಹಾಕುವ ತರಬೇತಿ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.