ADVERTISEMENT

ಸರಗೂರು | ಆನೆ ದಾಳಿ: ರೈತ ಸಾವು; ಅರಣ್ಯ ಇಲಾಖೆಯಿಂದ ₹20 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 7:12 IST
Last Updated 6 ಫೆಬ್ರುವರಿ 2026, 7:12 IST
ಮಾದ
ಮಾದ   

ಸರಗೂರು (ಮೈಸೂರು ಜಿಲ್ಲೆ): ತಾಲ್ಲೂಕಿನ ಬಿ.ಮಟಕೆರೆ ಎಸ್‌.ಟಿ. ಕಾಲೊನಿಯಲ್ಲಿ ಗುರುವಾರ ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ರೈತ ಮಾದ (70) ಅವರು ಕಾಡಾನೆ ದಾಳಿಯಿಂದ ಮೃತಪಟ್ಟರು. ಅವರಿಗೆ ಪತ್ನಿ, ಮೂವರು ಪುತ್ರರು, ಪುತ್ರಿ ಇದ್ದಾರೆ.  

ಮಂಗಳವಾರ ರಾತ್ರಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೊಳೆಯೂರು ಅರಣ್ಯ ವಲಯ ಪ್ರದೇಶದಿಂದ ಮೇವು ಅರಸಿ ಬಂದು, ಹಂಚೀಪುರ ಗ್ರಾಮದ ಕೆರೆಯ ಬಳಿ ಪೊದೆಯಲ್ಲಿದ್ದ ಆನೆಯನ್ನು ಬುಧವಾರ ರಾತ್ರಿ ಅರಣ್ಯ ಸಿಬ್ಬಂದಿ ಕಾಡಿಗೆ ಓಡಿಸಿದ್ದರು. ಗುರುವಾರ ಬೆಳಿಗ್ಗೆ ಮತ್ತೆ ಹೊರಬಂದಿದೆ.

ಸಿಎಫ್ ಎಸ್.ಪ್ರಭಾಕರನ್ ಮೃತರ ಕುಟುಂಬಕ್ಕೆ ₹20 ಲಕ್ಷ ಪರಿಹಾರದ ಚೆಕ್ ವಿತರಿಸಿದರು. ಮೃತರ ಪತ್ನಿಗೆ 5 ವರ್ಷದವರೆಗೆ ಮಾಸಿಕ ₹4ಸಾವಿರ ಹಾಗೂ ಕುಟುಂಬದ ಒಬ್ಬರಿಗೆ ಇಲಾಖೆಯಲ್ಲಿ ಕೆಲಸ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ನೆರವಿನ ಭರವಸೆ: ‘ಕಾಡುಪ್ರಾಣಿ-ಮಾನವ ಸಂಘರ್ಷ ತಡೆಗೆ ಕ್ರಮವಹಿಸಲಾಗುವುದು. ಇಂಥ ಘಟನೆ ಮರುಕಳಿಸಬಾರದು. ಕಾಡಂಚಿನ ಗ್ರಾಮಗಳ ಜನರ ಸಮಸ್ಯೆಗಳನ್ನು ಸಚಿವರೊಂದಿಗೆ ಚರ್ಚಿಸಿದ್ದು, ರೈಲ್ವೆ ಬ್ಯಾರಿಕೇಡ್, ಆನೆ ಕಂದಕಗಳಲ್ಲಿ ಹೂಳು ಎತ್ತಿಸಿ ಆನೆಗಳು ಬಾರದಂತೆ ಕ್ರಮವಹಿಸಲು ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ವಿಧಾನಸಭೆ ಅಧಿವೇಶನ ಬಳಿಕ ಮೃತ ಕುಟುಂಬಸ್ಥರಿಗೆ ನೆರವು ನೀಡಲಾಗುವುದು’ ಎಂದು ಶಾಸಕ ಅನಿಲ್ ಚಿಕ್ಕಮಾದು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.