ಎಚ್.ಡಿ.ಕೋಟೆ: ಕೇರಳದ ಪುಪ್ಪಳ್ಳಿಯ ಶಾಲೆಯ ಬಳಿ ಇತ್ತೀಚೆಗೆ ಕಾಣಿಸಿಕೊಂಡಿದ್ದ 6 ತಿಂಗಳ ಮರಿ ಆನೆಯು ತಾಲ್ಲೂಕಿನ ವಡಕನಮಾಳದ ದೇವೇಗೌಡ ಎಂಬುವರ ತೋಟದ ಬಳಿ ಪತ್ತೆಯಾಗಿದ್ದು, ಅದನ್ನು ತಾಯಿಯ ಬಳಿ ಸೇರಿಸಲು ಅಲ್ಲಿನ ಅರಣ್ಯಾಧಿಕಾರಿಗಳು ವಿಫಲವಾಗಿ ನದಿಯ ಆಚೆ ದಡದಿಂದ ನಾಗರಹೊಳೆಗೆ ತಂದುಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸದ್ಯ ಸ್ಥಳೀಯರು ಅದನ್ನು ಆರೈಕೆ ಮಾಡಿ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ. ‘ಕೇರಳದಿಂದ ಕರ್ನಾಟಕದ ಅರಣ್ಯ ಪ್ರದೇಶಕ್ಕೆ ಮರಿ ಬಂದಿದ್ದು ಹೇಗೆ’ ಎಂದು ಸ್ಥಳೀಯರಾದ ಗುಂಡತ್ತೂರು ರವಿ ಪ್ರಶ್ನಿಸಿದ್ದಾರೆ.
‘ಕೇರಳ ರಾಜ್ಯದ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ನಡೆದಿದ್ದು, ಜಂಟಿ ಕಾರ್ಯಾಚರಣೆ ನಡೆಸಿ ಮರಿಯಾನೆಯನ್ನು ತಾಯಿಯ ಬಳಿ ಸೇರಿಸಲು ಕ್ರಮ ವಹಿಸುತ್ತೇವೆ’ ಎಂದು ಎಸಿಎಫ್ ಮಧು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಸುಲ್ತಾನ್ ಬತ್ತೇರಿ ಭಾಗದ ಪುಲ್ಪಳ್ಳಿಗೂ ಕರ್ನಾಟಕದ ಡಿ.ಬಿ.ಕುಪ್ಪೆಗೂ ನಡುವೆ ಕಪಿಲಾ ನದಿಯಿದ್ದು, ವಯನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನದಿ ತುಂಬಿ ರಭಸವಾಗಿ ಹರಿಯುತ್ತಿದೆ. ಈ ಸಮಯದಲ್ಲಿ ಮರಿಯು ನದಿಯನ್ನು ದಾಟಿ ಬರಲು ಸಾಧ್ಯವಿಲ್ಲ. ಕೇರಳದವರೇ ಅದನ್ನು ಇಲ್ಲಿಗೆ ತಂದು ಬಿಟ್ಟಿದ್ದಾರೆ ’ ಎಂದು ಡಿ.ಬಿ.ಕುಪ್ಪೆ ಗ್ರಾಮದ ಮುಖಂಡ ಸುಂದರ ಆರೋಪಿಸಿದ್ದಾರೆ.
6 ತಿಂಗಳ ಆನೆ ಮರಿ ಕಾಣಿಸಿಕೊಂಡಿದ್ದು ಆರೈಕೆ ಮಾಡುತ್ತಿದ್ದೇವೆ. ತಾಯಿಯ ಮಡಿಲು ಸೇರಿಸುವ ಪ್ರಯತ್ನದಲ್ಲಿದ್ದೇವೆ.ಹನುಮಂತರಾಜು ಡಿ.ಬಿ.ಕುಪ್ಪೆ ಆರ್‌ಎಫ್‌ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.