ADVERTISEMENT

ಇಂಗ್ಲಿಷ್ ಮಾಧ್ಯಮದಿಂದ ಮಾತೃಭಾಷೆಗೆ ಕುತ್ತು– ಸಿಐಐಎಲ್‌ ನಿರ್ದೇಶಕ ಡಿ.ಜಿ.ರಾವ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 14:19 IST
Last Updated 16 ಸೆಪ್ಟೆಂಬರ್ 2019, 14:19 IST

ಮೈಸೂರು: ಕರ್ನಾಟಕವೂ ಸೇರಿದಂತೆ ಆಂಧ್ರಪ್ರದೇಶ ರಾಜ್ಯಗಳು ಆರಂಭಿಸಿರುವ ಸರ್ಕಾರಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಂದ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ಕುತ್ತು ಬಂದಿದೆ ಎಂದು ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್‌)ದ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ತೆಲುಗು ಭಾಷೆಯ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರವು ಸೋಮವಾರ ಏರ್ಪಡಿಸಿದ್ದ ಪ್ರಾಚೀನ ತೆಲುಗು ಸಾಹಿತ್ಯ ಅಧ್ಯಯನ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಇದರ ಜತೆಗೆ, ಪೋಷಕರೂ ಇಂಗ್ಲಿಷ್‌ ಮಾಧ್ಯಮದತ್ತ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಖಾಸಗಿ ಶಾಲೆಗಳು ಇವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಭಾರತೀಯ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಕ್ಷೀಣಿಸುವುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಎಲ್ಲ ಪೋಷಕರು ತಮ್ಮ ತಮ್ಮ ಮಕ್ಕಳಿಗೆ ತಮ್ಮ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಕೊಡಿಸಿದರೆ ಖಂಡಿತವಾಗಿಯೂ ಭಾರತದ ಎಲ್ಲ ಭಾಷೆಗಳೂ ಉಳಿಯುತ್ತವೆ. ಇದನ್ನು ಬಿಟ್ಟರೆ ಈ ಸಮಸ್ಯೆಗೆ ಬೇರೆ ಪರಿಹಾರದ ಮಾರ್ಗಗಳು ಸದ್ಯಕ್ಕೆ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ನಂತರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ವತಿಯಿಂದ ನಡೆದ 43ನೇ ಭಾರತೀಯ ಜನಪದ ಸಮ್ಮೇಳನದಲ್ಲಿ ಅವರು ‘ಮತ್ತೆರಡು ಭಾಷೆಗಳ ಶಾಸ್ತ್ರಿಯ ಅತ್ಯುನ್ನತ ಅಧ್ಯಯನ ಕೇಂದ್ರಗಳು ಸಿಐಐಎಲ್‌ಗೆ ಬರುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ಈಗಾಗಲೇ ಕನ್ನಡ ಮತ್ತು ತೆಲುಗು ಭಾಷೆಗಳ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಜತೆಗೆ ಒಡಿಯಾ ಮತ್ತು ಮಲಯಾಳಂ ಭಾಷೆಗಳ ಅಧ್ಯಯನ ಕೇಂದ್ರಗಳೂ ಇಲ್ಲಿಯೇ ಸ್ಥಾಪನೆಯಾಗಲಿವೆ. ಇವುಗಳಲ್ಲಿ ತೆಲುಗು ಭಾಷೆಯ ಅಧ್ಯಯನ ಕೇಂದ್ರ ಸದ್ಯದಲ್ಲೇ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಪ್ರಾರಂಭವಾಗಲಿರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆಗೆ ವರ್ಗಾವಣೆಯಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.