ಮೈಸೂರು: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಜೊತೆ ನೇರ ಸಂವಾದ ನಡೆಸಲು ಇಲ್ಲಿನ ಎಕ್ಸೆಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಶುಕ್ರವಾರ ಮಧ್ಯಾಹ್ನ 3.47ಕ್ಕೆ ಸರಿಯಾಗಿ ಇಂಥದ್ದೊಂದು ಅಪರೂಪದ ಕ್ಷಣಕ್ಕೆ ಬೆಂಗಳೂರಿನ ಯು.ಆರ್. ರಾವ್ ಬಾಹ್ಯಾಕಾಶ ಕೇಂದ್ರವು ಸಾಕ್ಷಿಯಾಗಲಿದೆ. ಅಲ್ಲಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹವ್ಯಾಸಿ ರೇಡಿಯೊ (ಎಆರ್‌ಐಎಸ್‌ಎಸ್) ಮೂಲಕ ಸಂವಾದ ಆಯೋಜಿಸಲಾಗಿದೆ. ಎಕ್ಸೆಲ್ ಶಾಲೆಯ ವಿದ್ಯಾರ್ಥಿಗಳೂ ಸೇರಿದಂತೆ ದೇಶದ ಆಯ್ದ ಕೆಲವೇ ಸಂಸ್ಥೆಗಳ ಪ್ರತಿನಿಧಿಗಳು ವಿಶೇಷ ಸಂವಹನ ಸಾಧನಗಳ ಮೂಲಕ ಹವ್ಯಾಸಿ ರೇಡಿಯೊ ತರಂಗಗಳನ್ನು ಬಳಸಿ ಶುಕ್ಲಾ ಜೊತೆ ಸಂವಾದ ನಡೆಸಲಿದ್ದಾರೆ.
ಖಾಸಗಿ ಬಾಹ್ಯಾಕಾಶ ಕಂಪನಿ ಏಕ್ಸಿಯೊಮ್ ಸ್ಪೇಸ್ ಕಂಪನಿಯ ಏಕ್ಸಿಯೊಮ್ ಮಿಷನ್ 4 ಅಂಗವಾಗಿ ಶುಭಾಂಶು ಶುಕ್ಲಾ ಸದ್ಯ ಬಾಹ್ಯಾಕಾಶದಲ್ಲಿದ್ದಾರೆ. ಅಲ್ಲಿಂದಲೇ ವಿಜ್ಞಾನದ ಕೌತುಕಗಳ ಕುರಿತು ವಿವರಿಸಲಿದ್ದಾರೆ.
ಹಲವು ತಿಂಗಳ ಶ್ರಮ: ಎಕ್ಸೆಲ್ ಪಬ್ಲಿಕ್ ಶಾಲೆಯಲ್ಲಿ ರೇಡಿಯೊ ಕ್ಲಬ್ ಇದೆ. ಇಲ್ಲಿ ರೇಡಿಯೊ ಸಂವಹನ, ಉಪಗ್ರಹಗಳೊಡನೆ ಸಂಪರ್ಕ ಹಾಗೂ ಆಂಟೆನಾಗಳ ಬಳಕೆ ಕುರಿತು ಆಯ್ದ ವಿದ್ಯಾರ್ಥಿಗಳು ನಿರಂತರ ಅಭ್ಯಾಸ ನಡೆಸಿದ್ದು, ಹ್ಯಾಮ್ ರೇಡಿಯೊ ಲೈಸೆನ್ಸ್ (ಎಚ್‌ಎಎಂ) ಸಹ ಹೊಂದಿದ್ದಾರೆ. ದೇಶದಲ್ಲಿ ಇಂತಹ ಕ್ಲಬ್ ಹೊಂದಿರುವ ಕೆಲವೇ ಶಾಲೆಗಳಿವೆ. ನಿರಂತರ ಶ್ರಮದ ಫಲವಾಗಿ ವಿದ್ಯಾರ್ಥಿಗಳಿಗೆ ಈ ಅವಕಾಶ ಒದಗಿದೆ.
‘400 ಕಿ.ಮೀ. ಎತ್ತರದಲ್ಲಿರುವ, ಗಂಟೆಗೆ 27,600 ಕಿ.ಮೀ. ವೇಗದಲ್ಲಿ ಓಡುವ ಉಪಗ್ರಹದಲ್ಲಿ ಇರುವ ಗಗನಯಾನಿಗಳ ಜೊತೆ ಸಂವಾದ ನಡೆಸುವುದೇ ರೋಮಾಂಚನದ ಸಂಗತಿ. ಮಕ್ಕಳಿಗೆ ರೇಡಿಯೊ ಕ್ಲಬ್‌ನಲ್ಲಿ ಪಾಠ ಮಾಡುವಾಗಲೆಲ್ಲ, ‘ನೀವು ಒಂದಲ್ಲ ಒಂದು ದಿನ ಗಗನಯಾತ್ರಿಗಳ ಜೊತೆಗೂ ಮಾತನಾಡಬಹುದು’ ಎನ್ನುತ್ತಿದ್ದೆವು. ಈ ರೀತಿಯಲ್ಲಿ ಅವಕಾಶ ಸಿಕ್ಕಿದ್ದು ಅಚ್ಚರಿ ತಂದಿದೆ’ ಎಂದು ಶಾಲೆಯ ರೇಡಿಯೊ ಕ್ಲಬ್‌ನ ಸಂಚಾಲಕ ಎಂ.ಬಿ. ಮಹೇಶ್ ಹೇಳುತ್ತಾರೆ.
ಎಕ್ಸೆಲ್ ಶಾಲೆಯ ವಿದ್ಯಾರ್ಥಿಗಳಾದ ಪಿ.ಎಂ. ಭುವನ್, ಎ. ನಮಸ್ಯು, ಎಂ.ಎಸ್. ತನಿಶ್ ತೇಜಸ್ವಿ, ಸಿ.ಎನ್. ಪ್ರಣವ್, ಆರ್. ವಿಶೃತ್, ಜಿ. ಸನತ್‌ರಾಜ್ ಹಾಗೂ ಇವರ ಮಾರ್ಗದರ್ಶಕರಾದ ಎಂ.ಬಿ. ಮಹೇಶ್ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.