ADVERTISEMENT

ಹಳಕಟ್ಟಿ ಕೊಡುಗೆ: ಹೆಚ್ಚಿನ ಪ್ರಚಾರ ಸಿಗಲಿ

ಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 10:38 IST
Last Updated 2 ಜುಲೈ 2022, 10:38 IST
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ಯಲ್ಲಿ ಡಾ.ಫ.ಗು. ಹಳಕಟ್ಟಿ ಫೋಟೊಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ವಿಜಯಕುಮಾರಿ ಕರಿಕಲ್ ಪುಷ್ಪನಮನ ಸಲ್ಲಿಸಿದರು. ಮಂಜುನಾಥಸ್ವಾಮಿ, ಡಾ.ಎಸ್.ಡಿ. ಶಶಿಕಲಾ ಹಾಗೂ ಡಾ.ಎಂ.ಡಿ. ಸುದರ್ಶನ್ ಇದ್ದಾರೆ/ ಪ್ರಜಾವಾಣಿ ಚಿತ್ರ
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ಯಲ್ಲಿ ಡಾ.ಫ.ಗು. ಹಳಕಟ್ಟಿ ಫೋಟೊಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ವಿಜಯಕುಮಾರಿ ಕರಿಕಲ್ ಪುಷ್ಪನಮನ ಸಲ್ಲಿಸಿದರು. ಮಂಜುನಾಥಸ್ವಾಮಿ, ಡಾ.ಎಸ್.ಡಿ. ಶಶಿಕಲಾ ಹಾಗೂ ಡಾ.ಎಂ.ಡಿ. ಸುದರ್ಶನ್ ಇದ್ದಾರೆ/ ಪ್ರಜಾವಾಣಿ ಚಿತ್ರ   

ಮೈಸೂರು: ‘ಫ.ಗು. ಹಳಕಟ್ಟಿ ಅವರು ಮನೆ–ಆಸ್ತಿಯನ್ನು ಮಾರಿ ವಚನ ಸಾಹಿತ್ಯದ ಸಂರಕ್ಷಣೆ ತೊಡಗಿಸಿಕೊಂಡಿದ್ದರು. ಅವರ ಪರಿಶ್ರಮ ಮತ್ತು ಕೊಡುಗೆಯನ್ನು ಜಗತ್ತಿಗೆ ಮುಟ್ಟಿಸುವ ಕೆಲಸ ನಡೆಯಬೇಕು’ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ವಿಜಯಕುಮಾರಿ ಎಸ್. ಕರಿಕಲ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ (ಡಾ.ಫ.ಗು. ಹಳಕಟ್ಟಿ ಜನ್ಮದಿನ)ಯಲ್ಲಿ ಅವರು ಮಾತನಾಡಿದರು.

‘ವಚನ ಸಾಹಿತ್ಯ ಸಂರಕ್ಷಣೆಗೆ ಹಳಕಟ್ಟಿ ಅವರ ಕೊಡುಗೆ ದೊಡ್ಡದು. ಅವರು ಹಾಗೂ ವಚನ ಸಾಹಿತ್ಯ ಕುರಿತು ದೊಡ್ಡ ಮಟ್ಟದಲ್ಲಿ ಪ್ರಚಾರ ಸಿಗಬೇಕು. ಇದಕ್ಕೆ ಅಗತ್ಯವಿರುವ ಕ್ರಮವನ್ನು ಮತ್ತು ಅನುದಾನವನ್ನು ಸರ್ಕಾರ ಒದಗಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಇದೇ ಮೊದಲ ಬಾರಿಗೆ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ’ ಎಂದರು.

ADVERTISEMENT

‘ನಮ್ಮ ಭಾಗದಲ್ಲಿ ಬೈಬಲ್ ರೀತಿ ಏನು ಇಲ್ಲವೇ ಎಂದು ಚಿಂತಿಸಿ, ವಚನ ಸಾಹಿತ್ಯ ಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ವಚನ ಸಾಹಿತ್ಯ ಕುರಿತು ಸಾಕಷ್ಟು ಸಂಶೋಧನೆ ನಡೆದಿದೆ. ಹಳಕಟ್ಟಿ ಅವರು ವಚನಕಾರರ ಅನೇಕ ಹಸ್ತಪ್ರತಿ ಸಂಗ್ರಹಿಸಿದರು. ಹಳ್ಳಿ ಹಳ್ಳಿಗೆ ಹೋಗಿ ಹಸ್ತಪ್ರತಿ ಸಂಗ್ರಹಿಸುತ್ತಾ, ಹಲವು ವಚನಕಾರರ ವಚನಗಳ ಪ್ರಕಟಣೆ ಕ್ರಮ ಕೈಗೊಂಡರು. ಮನೆ ಮಾರಿ, ಪ್ರಕಟಣೆಗೆ ಬೇಕಾದ ಸಲಕರಣೆಗಳನ್ನು ಖರೀದಿಸಿದ್ದರು. ವಚನಕಾರರ ವಚನಗಳ 46 ಕೃತಿಗಳನ್ನು ಪ್ರಕಟಿಸಿದ್ದಾರೆ’ ಎಂದು ತಿಳಿಸಿದರು.

‘ಹಳಕಟ್ಟಿ ಅವರು ಕನ್ನಡ ಸಾಹಿತ್ಯಕ್ಕೆ ಸೀಮಿತವಾಗಿರಲಿಲ್ಲ. ಗ್ರೀಕ್ ಸಾಹಿತ್ಯ ಓದಿದ್ದರು. ಶಾಲೆಗಳನ್ನು ದತ್ತು ತೆಗೆದುಕೊಂಡು ಓದಿಗೆ ಅವಕಾಶ ಮಾಡಿಕೊಟ್ಟಿದ್ದರು. ಕನ್ನಡ ಕಟ್ಟುವ ಕೆಲಸದಲ್ಲೂ ತೊಡಗಿದ್ದರು’ ಎಂದು ಸ್ಮರಿಸಿದರು.

‘ಹಳಕಟ್ಟಿ ಅವರ ವಿಚಾರಗಳು ಮುಂದಿನ ತಲೆಮಾರಿಗೂ ತಲುಪಬೇಕು’ ಎಂದು ಸಂಸ್ಥೆಯ ಸಹ ಪ್ರಾಧ್ಯಾಪಕಿ ಡಾ.ಎಸ್.ಡಿ. ಶಶಿಕಲಾ ಆಶಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಆಹ್ವಾನಪತ್ರಿಕೆಯಲ್ಲಿ ಹಲವು ಜನಪ್ರತಿಧಿಗಳ ಹೆಸರು ಮುದ್ರಿಸಲಾಗಿತ್ತು. ಆದರೆ, ಯಾರೊಬ್ಬರೂ ಹಾಜರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.