ADVERTISEMENT

ಹುಸಿ ಬಾಂಬ್‌ ಬೆದರಿಕೆ: ಆತಂಕ

ಇ–ಮೇಲ್‌ ಮೂಲಕ ಸಂದೇಶ, ಆರೋಪಿ ಪತ್ತೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 4:48 IST
Last Updated 7 ಜನವರಿ 2026, 4:48 IST
ಮೈಸೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಪೊಲೀಸ್ ಇಲಾಖೆಯ ಶ್ವಾನದಳದ ತಂಡದ ಸಿಬ್ಬಂದಿ ತಪಾಸಣೆ‌ ನಡೆಸಿದರು ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಮೈಸೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಪೊಲೀಸ್ ಇಲಾಖೆಯ ಶ್ವಾನದಳದ ತಂಡದ ಸಿಬ್ಬಂದಿ ತಪಾಸಣೆ‌ ನಡೆಸಿದರು ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.   

ಮೈಸೂರು: ಚಾಮರಾಜಪುರಂ ಮತ್ತು ಕೆ.ಜಿ ಕೊಪ್ಪಲಿನಲ್ಲಿರುವ ನ್ಯಾಯಾಲಯಗಳಲ್ಲಿ ಬಾಂಬ್‌ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯು ಜಿಲ್ಲಾ ಮುಖ್ಯ ನ್ಯಾಯಾಧೀಶರಿಗೆ ಇ– ಮೇಲ್‌ ಮೂಲಕ ಬೆದರಿಕೆ ಹಾಕಿದ್ದು, ನಗರದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ತಡರಾತ್ರಿ 1.50ಕ್ಕೆ ಬಂದಿದ್ದ ಇ– ಮೇಲ್‌ನ್ನು ನ್ಯಾಯಾಧೀಶರು ಬೆಳಿಗ್ಗೆ 9.45ಕ್ಕೆ ಗಮನಿಸಿದ್ದು, ‘ನಿಮ್ಮ ನ್ಯಾಯಾಲಯದ ಆವರಣದಲ್ಲಿ ಮೂರು ಆರ್‌ಡಿಎಕ್ಸ್‌ಐಇಡಿ ಬಳಸಿ ಬಾಂಬ್‌ ಇಡಲಾಗಿದ್ದು, ರಿಮೋಟ್ ಕಂಟ್ರೋಲ್ ಮೂಲಕ ಸ್ಫೋಟಿಸಲಾಗುವುದು. ಅದು ಸ್ಫೋಟಗೊಳ್ಳದಿದ್ದರೆ ಆತ್ಮಾಹುತಿ ಬಾಂಬ್‌ ಅಳವಡಿಸಿಕೊಂಡ ವ್ಯಕ್ತಿ ಒಳ ನುಗ್ಗಲಿದ್ದಾನೆ. ಮಧ್ಯಾಹ್ನ 1.55ರೊಳಗೆ ನ್ಯಾಯಾಧೀಶರನ್ನು ಸ್ಥಳಾಂತರಿಸಿ’ ಎಂದು ಸಂದೇಶ ಬಂದಿತ್ತು. 

ಮಾಹಿತಿ ತಿಳಿದ ‍ಪೊಲೀಸರು ಸ್ಥಳಕ್ಕಾಗಮಿಸಿ, ವಕೀಲರು ಹಾಗೂ ಸಿಬ್ಬಂದಿಯನ್ನು ಹೊರ ಕಳಿಸಿ ನ್ಯಾಯಾಲಯದ ಆವರಣವನ್ನು ಖಾಲಿ ಮಾಡಿದರು. ಬಾಂಬ್‌ ನಿಷ್ಕ್ರಿಯದಳ ಹಾಗೂ ಶ್ವಾನದಳದ ತಂಡ ಪರಿಶೀಲನೆ ನಡೆಸಿತು.

ADVERTISEMENT

ಪರಿಶೀಲನೆ ಬಳಿಕ ಹುಸಿ ಬಾಂಬ್‌ ಬೆದರಿಕೆ ಎಂದು ನಿರ್ಧರಿಸಿ, ಮಧ್ಯಾಹ್ನ 2ರ ಬಳಿಕ ಎಲ್ಲರನ್ನೂ ಪರಿಶೀಲಿಸಿ ಒಳ ಬಿಟ್ಟರು. ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಕೀಲರು, ಸಿಬ್ಬಂದಿ ಹೊರಬಂದಿದ್ದರಿಂದ ಹಳೆ ನ್ಯಾಯಾಲಯದ ಮುಂಭಾಗ ಹಾದು ಹೋಗುವ ಕೃಷ್ಣರಾಜ ಬುಲೇವಾಡ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಪೊಲೀಸರು ಗಾಂಧಿ ಪ್ರತಿಮೆ ಬಳಿ ಬ್ಯಾರಿಕೇಡ್‌ ಅಳವಡಿಸಿ, ವಾಹನಗಳು ಸರಾಗವಾಗಿ ಸಾಗುವಂತೆ ಮಾಡಿದರು. ಕಲಾಪ ಬಿಟ್ಟು ಹೊರಬಂದ ನ್ಯಾಯಾಲಯದ ಸಿಬ್ಬಂದಿ ಅಲ್ಲಲ್ಲಿ ಗುಂಪಾಗಿ ಕುಳಿತಿದ್ದರು.

ಈಚೆಗೆ ಕಮಿಷನರ್‌ ಕಚೇರಿ ಹಾಗೂ ಬನ್ನೂರು ರಸ್ತೆಯಲ್ಲಿರುವ ಜ್ಞಾನಸರೋವರ ವಸತಿ ಶಾಲೆಗೆ ಬಾಂಬ್‌ ಇಟ್ಟಿರುವುದಾಗಿ ಇ– ಮೇಲ್‌ ಬಂದಿತ್ತು, ಅದೇ ಮಾದರಿಯಲ್ಲಿ ಈ ಘಟನೆಯೂ ನಡೆದಿದೆ. 2016ರಲ್ಲಿ ನ್ಯಾಯಾಲಯದ ಶೌಚಾಲಯದಲ್ಲಿ ಸ್ಫೋಟ ನಡೆದಿದ್ದ ಕಾರಣ, ಈ ಬಾರಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿತ್ತು.

‘ನ್ಯಾಯಾಲಯದಲ್ಲಿ ಪರಿಶೀಲನೆ ಬಳಿಕ ಬಾಂಬ್‌ ಬೆದರಿಕೆ ಹುಸಿ ಎಂದು ಗೊತ್ತಾಗಿದ್ದು, ಐಪಿ ಅಡ್ರೆಸ್‌ ಬಳಸಿ ಇ– ಮೇಲ್‌ ಕಳಿಸಿದ ವ್ಯಕ್ತಿಯ ಪತ್ತೆಗೆ ಕ್ರಮವಹಿಸಲಾಗಿದೆ’ ಎಂದು ಡಿಸಿಪಿ ಕೆ.ಎಸ್‌.ಸುಂದರ್‌ರಾಜ್‌ ತಿಳಿಸಿದರು.

ತಪಾಸಣೆ ಹೆಚ್ಚಲಿ:

ಚಾಮರಾಜಪುರಂ ಜಿಲ್ಲಾ ನ್ಯಾಯಾಲಯದ ಪ್ರವೇಶ ದ್ವಾರದಲ್ಲಿರುವ ಪೊಲೀಸ್‌ ಚೌಕಿಯ ಒಳಗೆ ಪೊಲೀಸ್‌ ಸಿಬ್ಬಂದಿ ಇರುತ್ತಾರೆ. ಅವರು ಹೊರಬಂದು ಎಲ್ಲರನ್ನೂ ತಪಾಸಣೆ ಮಾಡಿ ಒಳಗೆ ಬಿಡಬೇಕು. ಅದರಿಂದ ಸಂಭಾವ್ಯ ಅಪಾಯ ತಪ್ಪಿಸಬಹುದು’ ಎಂದು ವಕೀಲ ಪಿ.ಜೆ.ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.