ADVERTISEMENT

ತಜ್ಞರ ಸಮಿತಿ ಪುನರ್‌ ರಚನೆಗೆ ಒತ್ತಾಯ

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 8:44 IST
Last Updated 20 ಸೆಪ್ಟೆಂಬರ್ 2024, 8:44 IST
ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ನಡೆದ ಸಭೆಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿದರು
ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ನಡೆದ ಸಭೆಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿದರು   

ಮೈಸೂರು: ‘ದೆಹಲಿಯಲ್ಲಿ ಹೋರಾಟ ನಡೆಸಿದ ರೈತರ ಸಮಸ್ಯೆ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ ರಚಿಸಿರುವ ಐವರು ಪರಿಣತರ ಸಮಿತಿಯನ್ನು ಇಡೀ ದೇಶಕ್ಕೆ ಅನ್ವಯ ಆಗುವಂತೆ ಮರು ಆದೇಶಿಸಬೇಕು. ದಕ್ಷಿಣದ ರಾಜ್ಯಗಳ ಪ್ರತಿನಿಧಿಗಳಿಗೂ ಅದರಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

ನಗರದಲ್ಲಿ ರೈತ ಮುಖಂಡರ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ನ್ಯಾಯಾಲಯವು ದೆಹಲಿ ಹೋರಾಟವನ್ನು ಕೇವಲ ಪಂಜಾಬ್, ಹರಿಯಾಣ ರೈತರು ಎಂದು ಪರಿಗಣಿಸಿದಂತಿದೆ. ಆದರೆ, ಅದು ಇಡೀ ದೇಶಕ್ಕೆ ಅನ್ವಯವಾಗುವ ಹೋರಾಟ. ನಾವೆಲ್ಲ ಬೆಂಬಲ ನೀಡಿದ್ದೇವೆ. ಹೀಗಾಗಿ ಸಮಿತಿಯನ್ನು ಪುನರ್ ರಚಿಸಬೇಕು’ ಎಂದು ಕೋರಿದರು.

‘ಕುಲಾಂತರಿ ತಳಿ ಬೀಜಗಳ ಬಳಕೆ ಪರಿಶೀಲನೆಗೆ ನ್ಯಾಯಾಲಯವು ಸಮಿತಿ‌ ರಚಿಸಿದ್ದು, ಸಮಿತಿಯ ಎರಡನೇ ಸಭೆ ಸೆ.29ರಂದು ನಡೆಯಲಿದೆ. ಕುಲಾಂತರಿ ಬೀಜವನ್ನು ಬಹಿಷ್ಕರಿಸಬೇಕು’ ಎಂದರು.

ADVERTISEMENT

ರಾಜ್ಯ ರೈತ ಸಂಘದ ಮುಖಂಡ ಮಂಜೇಶ ಗೌಡ ಮಾತನಾಡಿ, ‘ರಾಜ್ಯದ ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳಿಂದ ₹600 ಕೋಟಿ ಬಾಕಿ ಬರಬೇಕಿದೆ ’ ಎಂದರು. ರೈತ ಮುಖಂಡ ರವಿಕುಮಾರ್ ಮಾತನಾಡಿ, ‘ರಾಜ್ಯದಲ್ಲಿ ಭತ್ತದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಮೂರು ತಿಂಗಳಿಗೆ ಮುಂಚೆಯೇ ಖರೀದಿ ಕೇಂದ್ರ ತೆರೆಯಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಅಜಯ್‌ಕುಮಾರ್, ಧರ್ಮರಾಜ, ಅಯೂಬ್ ಖಾನ್, ನೆಲಮಂಗಲ ಜಗದೀಶ, ರವೀಶ, ಕೊಟ್ರೇಶ ಚೌಧರಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಹತ್ತಳ್ಳಿ ದೇವರಾಜು, ಬರಡನಪುರ ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.