ಮೈಸೂರಿನ ಕೃಷಿ ಅಧ್ಯಯನ ಮಾರುಕಟ್ಟೆ ಸಂಸ್ಥೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು.
ಮೈಸೂರು: ‘ವಿಷಮುಕ್ತ ಆಹಾರ ನೀಡುವುದು ರೈತರ ಜವಾಬ್ದಾರಿಯಾಗಿದ್ದು, ಕೃಷಿ ಉಳಿವಿಗೆ ಆಂದೋಲನದ ಅಗತ್ಯವಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ನಗರದ ಹುಣಸೂರು ರಸ್ತೆಯಲ್ಲಿರುವ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ನಡೆದ ಮೈಸೂರು ತಾಲ್ಲೂಕಿನ ರೈತ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಹಳ್ಳಿಗರ ಜೀವನಶೈಲಿ ಬದಲಾಗಿದೆ. ಉದ್ಯೋಗ ಅರಸಿ ನಗರಕ್ಕೆ ವಲಸೆ ಹೆಚ್ಚಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಕೃಷಿಯಲ್ಲೇ ಉಳಿಯುವಂತೆ ಮಾಡುವ ಕೆಲಸ ಆಗಬೇಕಿದೆ. ರೈತ ಚಳವಳಿಯನ್ನು ಬಲಗೊಳಿಸುವ ನಿಟ್ಟಿನಲ್ಲಿ ‘ಪ್ರತಿ ರೈತರ ಕುಟುಂಬಕ್ಕೊಬ್ಬ ಸದಸ್ಯ, ಊರಿಗೊಬ್ಬ ಕಾರ್ಯಕರ್ತ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅ.26ರಂದು ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಸಭೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.
‘ಸರ್ಕಾರವು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು. ತಾಲ್ಲೂಕಿನ ರೈತರಿಗೆ ಬಗರ್‌ಹುಕಂ ಸಾಗುವಳಿ ಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ‘ಮೈಸೂರು ತಾಲ್ಲೂಕಿನಲ್ಲಿ ಶೇ 25ರಷ್ಟು ಫಲವತ್ತಾದ ಭೂಮಿಯನ್ನು ರೈತರು ಕಳೆದುಕೊಂಡಿದ್ದು, ವಲಸೆ ಹೆಚ್ಚಾಗಿದೆ. ಗ್ರಾಮೀಣ ಯುವಕರು ಕೇವಲ ತಂದೆ- ತಾಯಿ ಒತ್ತಾಯಕ್ಕೆ ಕೆಲಸ ಮಾಡುತ್ತಿದ್ದಾರೆ. ಹೀಗೆ ಮುಂದುವರಿದಲ್ಲಿ ಆಹಾರ ಉತ್ಪಾದನೆ ಕುಸಿಯಲಿದೆ. ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ’ ಎಂದರು.
‘ಬೆಂಬಲ ಬೆಲೆಯಲ್ಲಿ ಉತ್ಪನ್ನ ಖರೀದಿ ಕೇಂದ್ರಗಳಿಂದ ರೈತರಿಗೆ ಅನುಕೂಲ ಆಗಿದೆ. ವ್ಯವಸಾಯದ ಋತುವಿನ ಆರಂಭದಲ್ಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಬೇಕು’ ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್ ಪ್ರಭು, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ನಾಗನಹಳ್ಳಿ ವಿಜೇಂದ್ರ, ಅಧ್ಯಕ್ಷ ಆನಂದೂರು ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ಮುಖಂಡರಾದ ನಂಜುಂಡಸ್ವಾಮಿ, ಮಹೇಶ್, ಹೊಸಕೋಟೆ ಬಸವರಾಜು, ನಂಜುಂಡಸ್ವಾಮಿ, ಮರಂಕಯ್ಯ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.