ಮೈಸೂರಿನಲ್ಲಿ ಶನಿವಾರ ಮಾದಕವಸ್ತು ಸೇವನೆ ಪತ್ತೆಗಾಗಿ ತಪಾಸಣೆ ನಡೆಯಿತು.ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹಾಜರಿದ್ದರು
ಮೈಸೂರು: ನಗರದಲ್ಲಿ ಮಾದಕವಸ್ತು ತಯಾರಿಕಾ ಘಟಕ ಪತ್ತೆಯಾದ ಬಳಿಕ ಚುರುಕುಗೊಂಡಿರುವ ಪೊಲೀಸ್ ಇಲಾಖೆಯು ಶನಿವಾರ ಇಲ್ಲಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಗರದ ವಿವಿಧ ಭಾಗಗಳ 259 ಮಂದಿಯನ್ನು ಮಾದಕವಸ್ತು ಸೇವನೆ ಪತ್ತೆಗಾಗಿ ತಪಾಸಣೆ ನಡೆಸಿದ್ದು, 51 ಮಂದಿ ಗಾಂಜಾ ಸೇವಿಸಿರುವುದು ಪತ್ತೆಯಾಗಿದೆ.
‘ನಾಲ್ಕು ದಿನಗಳ ಕಾರ್ಯಾಚರಣೆಯಲ್ಲಿ 541 ಮಂದಿಯ ತಪಾಸಣೆ ನಡೆದಿದ್ದು, 189 ಮಂದಿ ಗಾಂಜಾ ಸೇವಿಸಿರುವುದು ದೃಢಪಟ್ಟಿತ್ತು. ಮಾದಕ ವಸ್ತು ಮಾರಾಟ, ಸಾಗಣೆ ಮಾಡುವ ಪೆಡ್ಲರ್‌ಗಳ ವಿರುದ್ಧ 11 ಪ್ರಕರಣ ದಾಖಲಿಸಲಾಗಿದೆ. ಸೇವನೆ ದೃಢಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ತಿಳಿಸಿದರು.
‘ಮಂಡಿ, ಉದಯಗಿರಿ, ಕೃಷ್ಣರಾಜ, ನಜರ್‌ಬಾದ್ ವ್ಯಾಪ್ತಿಯಲ್ಲಿ ಅಧಿಕ ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಕೆ.ಆರ್.ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಯ ಸಹಕಾರ ಪಡೆಯಲಾಗಿದೆ. ಗಾಂಜಾ ಹೊರತುಪಡಿಸಿ ಇತರ ಮಾದಕ ವಸ್ತುಗಳು ಪತ್ತೆಗಾಗಿಲ್ಲ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.