ADVERTISEMENT

₹79.29 ಕೋಟಿ ನಷ್ಟ: ಭೂನ್ಯಾಯ ಮಂಡಳಿ ಅಧ್ಯಕ್ಷ, ತಹಶೀಲ್ದಾರ್‌ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 10:45 IST
Last Updated 29 ಡಿಸೆಂಬರ್ 2022, 10:45 IST

ನಂಜನಗೂಡು/ ಮೈಸೂರು: 2011ರಲ್ಲಿ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದ ಸರ್ವೆ ನಂ.390ರಿಂದ 422, 424ರ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ₹79.29 ಕೋಟಿ ಪರಿಹಾರ ವಿತರಿಸಿದ ಆರೋಪದ ಮೇಲೆ ಆಗಿನ ಭೂನ್ಯಾಯ ಮಂಡಳಿ ಅಧ್ಯಕ್ಷ, ತಹಶೀಲ್ದಾರ್‌, ಶಿರಸ್ತೇದಾರ್‌, ಗ್ರಾಮ ಲೆಕ್ಕಿಗ ಸೇರಿದಂತೆ 16 ಮಂದಿ ವಿರುದ್ಧ ನಂಜನಗೂಡು ಟೌನ್‌ ಠಾಣೆಯಲ್ಲಿ 2022ರ ಡಿ.26ರಂದು ಎಫ್‌ಐಆರ್‌ ದಾಖಲಾಗಿದೆ.

ನಂಜನಗೂಡು ತಹಶೀಲ್ದಾರ್ ಎಂ.ಶಿವಮೂರ್ತಿ ನೀಡಿದ ದೂರಿನಂತೆ ದಂಡ ಸಂಹಿತೆ 406, 409, 420, 465, 468, 471, 120 ಬಿ, 149, ಕರ್ನಾಟಕ ಲ್ಯಾಂಡ್, ರೆವಿನ್ಯೂ ಆಕ್ಟ್ 1964 ರ ಸೆಕ್ಷನ್ 192ರ ಅಡಿಯಲ್ಲಿ ನಂಜನಗೂಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ.

ಈ ಕುರಿತಂತೆ ಮಾಹಿತಿ ಹಕ್ಕು ಕಾರ್ಯಕರ್ತ ಬಿ.ಎನ್‌.ನಾಗೇಂದ್ರ ಸಲ್ಲಿಸಿದ ದೂರಿಗೆ ಸ್ಪಂದಿಸಿ, ದಾಖಲೆಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಂಡಿದೆ.

ADVERTISEMENT

ಎಫ್‌ಐಆರ್‌: ಭೂ ನ್ಯಾಯಮಂಡಳಿ ಅಧ್ಯಕ್ಷ ಕೃಷ್ಣಮೂರ್ತಿ, ತಹಶೀಲ್ದಾರ್‌ ನವೀನ್‌ ಜೋಸೆಫ್‌, ಶಿರಸ್ತೇದಾರ್‌ ರಮೇಶ್‌ಬಾಬು, ಆರ್‌ಐ ಶಿವರಾಜು, ಗ್ರಾಮ ಲೆಕ್ಕಿಕ ವೆಂಕಟೇಶ್‌ ಹಾಗೂ ಪರಿಹಾರ ಪಡೆದ 11 ಮಂದಿ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಪ್ರಕರಣವೇನು?
ಹಿಮ್ಮಾವು ಗ್ರಾಮದ ಸರ್ವೆ ನಂ.390 ರಿಂದ 424 ರವರೆಗಿನ 891 ಎಕ್ರೆ ಒಂದು ಗುಂಟೆ ಜಮೀನು ಮೈಸೂರಿನ ತ್ರಿಪುರ ಭೈರವಿ ಮಠದ ಸ್ವಾಮೀಜಿ ಶ್ರೀ ಮಹಂತ ಕೃಷ್ಣಾನಂದಗಿರಿ ಗೋಸ್ವಾಮಿ ಹೆಸರಿನಲ್ಲಿತ್ತು. 1989 ರಲ್ಲಿ ಶ್ರೀ ಮಹಂತ ಕೃಷ್ಣಾನಂದಗಿರಿ ಗೋಸ್ವಾಮಿ ಕೊನೆಯುಸಿರೆಳೆದರು.

ನಂತರ ಶ್ರೀ ಮಹಂತ ಕೃಷ್ಣ ಮೋಹನಾನಂದ ಗಿರಿ ಗೋಸ್ವಾಮಿ ಅವರು ಪಟ್ಟಾಭಿಷೇಕ ಮಾಡಿಕೊಂಡು ಪೀಠಾಧಿಪತಿಯಾದರು. ಮಹಂತ ಕೃಷ್ಣಾನಂದಗಿರಿ ಗೋಸ್ವಾಮಿ ಅವರ ಸಹೋದರ ಭೀಷ್ಮಪಿತಾಮಹ ಹಾಗೂ ಹಾಲಿ ಸ್ವಾಮೀಜಿ ಶ್ರೀ ಮಹಂತ ಕೃಷ್ಣಮಹಾನಂದಗಿರಿ ಗೋಸ್ವಾಮಿ ಅವರ ನಡುವೆ ಆಸ್ತಿವಿವಾದ ಶುರುವಾಯ್ತು. ಈ ಜಮೀನಿಗೆ ಸಂಬಂಧಿಸಿದಂತೆ ಭೂ ನ್ಯಾಯ ಮಂಡಳಿಯಲ್ಲಿ ಪ್ರಕರಣ ಬಾಕಿ ಇತ್ತು.

ಇತ್ಯರ್ಥವಾಗದ ಪ್ರಕರಣವನ್ನ ಏಕಾಏಕಿ ಕೈಗೆತ್ತಿಕೊಂಡ ಆಗಿನ ಭೂ ನ್ಯಾಯ ಮಂಡಳಿಯ ಅಧ್ಯಕ್ಷ ಎಚ್.ಕೆ.ಕೃಷ್ಣಮೂರ್ತಿ 2011ರ ಸೆ.14 ರಂದು 891 ಎಕ್ರೆ ಜಮೀನು ಪೈಕಿ ಮೃತರಾದ ಶ್ರೀ ಕೃಷ್ಣಾನಂದ ಗಿರಿಗೋಸ್ವಾಮಿಗೆ 10 ಯೂನಿಟ್(54 ಎಕ್ರೆ),ಶ್ರೀ ಕೃಷ್ಣಾನಂದಗಿರಿ ಗೋಸ್ವಾಮಿಯ ಸಹೋದರಿ ಸತ್ಯಭಾಮ ಅವರಿಗೆ 10 ಯೂನಿಟ್ (54 ಎಕ್ರೆ), ಭೀಷ್ಮಪಿತಾಮಹ, ಇವರ ಮಗ ಕುಲದೀಪ್ ಪ್ರಕಾಶ್ ಎಂಬುವರಿಗೆ 20 ಯೂನಿಟ್(108 ಎಕ್ರೆ) ನೀಡುವಂತೆ ಆದೇಶಿಸಿದ್ದರು.

ಈಗಾಗಲೇ ಮೃತಪಟ್ಟಿದ್ದ ಸತ್ಯಭಾಮ ಭಾಗಕ್ಕೆ ಬಂದ 54 ಎಕ್ರೆ ಜಮೀನು ಅನ್ನು ದಾಖಲೆಗಳನ್ನು ಪರಿಶೀಲನೆ ನಡೆಸದೇ ಹರ್ಷಕುಮಾರ್ ಎಂಬ ವ್ಯಕ್ತಿಗೆ ಅಕ್ರಮವಾಗಿ ಖಾತೆ ಮಾಡಲಾಗಿತ್ತು. ಕೃಷ್ಣಾನಂದ ಗಿರಿಗೋಸ್ವಾಮಿ ಅವರ ಭಾಗಕ್ಕೆ ಬಂದ 54 ಎಕ್ರೆ ಜಮೀನು ಅನ್ನು ಯಾವುದೇ ದಾಖಲೆ ಪಡೆಯದೆ ಸೋನು.ಬಿನ್.ಸುಧೀರ್, ಪ್ರದೀಪ್.ಬಿನ್.ಸುಧೀರ್ ಎಂಬುವರಿಗೆ ಅಕ್ರಮವಾಗಿ ಖಾತೆ ಮಾಡಿದ್ದರು.

ಇದಾದ ಬಳಿಕ, ಭೀಷ್ಮ ಪಿತಾಮಹ ಅವರ ಐವರು ಹೆಣ್ಣು ಮಕ್ಕಳಾದ ಶೋಭಾದೇವಿ ಎಂಬುವರಿಗೆ 10 ಯೂನಿಟ್ (54 ಎಕ್ರೆ), ಹೇಮಲತಾ ಎಂಬುವರಿಗೆ 10 ಯೂನಿಟ್ (54 ಎಕ್ರೆ), ನಿಶಾ ಶರ್ಮ ಎಂಬುವರಿಗೆ 10 ಯೂನಿಟ್ (54 ಎಕ್ರೆ), ಅಂಜನಾಶರ್ಮ ಎಂಬುವರಿಗೆ 10 ಯೂನಿಟ್ (54 ಎಕ್ರೆ) ಹಾಗೂ ವಿಜಯಲಕ್ಷ್ಮಿ ಎಂಬುವರಿಗೆ 10 ಯೂನಿಟ್ (54 ಎಕ್ರೆ) ಹಂಚಿ, ಜಮೀನಿನ ಖಾತೆ ಮಾಡಿಕೊಡಲಾಗಿತ್ತು.

ಭೂನ್ಯಾಯ ಮಂಡಳಿ ಅಧ್ಯಕ್ಷ ಹುದ್ದೆ ಜೊತೆಗೆ ಕೆ.ಐ.ಎ.ಡಿ.ಬಿ.ಭೂಸ್ವಾಧೀನ ಅಧಿಕಾರಿಯಾಗಿದ್ದ ಕೃಷ್ಣಮೂರ್ತಿ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಖಾತೆ ಮಾಡಿದ್ದರು. ಈ ಜಮೀನುಗಳನ್ನು ಕೆ.ಐ.ಎ.ಡಿ.ಬಿ ಅವರು ಭೂಸ್ವಾಧೀನಪಡಿಸಿಕೊಂಡು 2013ರಲ್ಲಿ 79.29 ಕೋಟಿ ಪರಿಹಾರ ವಿತರಿಸಿತ್ತು ದಾಖಲೆಗಳಲ್ಲಿ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.