ADVERTISEMENT

ನಗರದಲ್ಲಿ 4 ಕಡೆ ಬೆಂಕಿ ಅವಘಡ

ಡಿಆರ್‌ಡಿಒ ಆವರಣದಲ್ಲಿ 5, ಸರ್ಕಾರಿ ಅತಿಥಿ ಗೃಹದಲ್ಲಿ 2 ಎಕರೆ ಬೆಂಕಿಗಾಹುತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 9:29 IST
Last Updated 4 ಫೆಬ್ರುವರಿ 2020, 9:29 IST
ಮೈಸೂರಿನ ಹೃದಯಭಾಗವಾದ ಗ್ರಾಮಾಂತರ ಬಸ್‌ನಿಲ್ದಾಣದ ಸಮೀಪ ಇರುವ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಸೋಮವಾರ ಕಾಣಿಸಿಕೊಂಡ ಬೆಂಕಿಗೆ ಸುಮಾರು 2 ಎಕರೆಯಷ್ಟು ಪ್ರದೇಶದ ಉದ್ಯಾನ ಭಸ್ಮವಾಯಿತು. 3 ಅಗ್ನಿಶಾಮಕ ವಾಹನಗಳಲ್ಲಿ ಬಂದ ಅಗ್ನಿಶಾಮಕ ಪಡೆ ಬೆಂಕಿಯು ಅಕ್ಕಪಕ್ಕದ ಕಟ್ಟಡಗಳಿಗೆ ವ್ಯಾಪಿಸುವುದನ್ನು ತಡೆದರು. ಚಿತ್ರಗಳು– ಬಿ.ಆರ್.ಸವಿತಾ
ಮೈಸೂರಿನ ಹೃದಯಭಾಗವಾದ ಗ್ರಾಮಾಂತರ ಬಸ್‌ನಿಲ್ದಾಣದ ಸಮೀಪ ಇರುವ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಸೋಮವಾರ ಕಾಣಿಸಿಕೊಂಡ ಬೆಂಕಿಗೆ ಸುಮಾರು 2 ಎಕರೆಯಷ್ಟು ಪ್ರದೇಶದ ಉದ್ಯಾನ ಭಸ್ಮವಾಯಿತು. 3 ಅಗ್ನಿಶಾಮಕ ವಾಹನಗಳಲ್ಲಿ ಬಂದ ಅಗ್ನಿಶಾಮಕ ಪಡೆ ಬೆಂಕಿಯು ಅಕ್ಕಪಕ್ಕದ ಕಟ್ಟಡಗಳಿಗೆ ವ್ಯಾಪಿಸುವುದನ್ನು ತಡೆದರು. ಚಿತ್ರಗಳು– ಬಿ.ಆರ್.ಸವಿತಾ   

ಮೈಸೂರು: ನಗರದಲ್ಲಿ ಸೋಮವಾರ ಸಂಭವಿಸಿದ ಪ್ರತ್ಯೇಕ ಬೆಂಕಿ ಅವಘಡಗಳಲ್ಲಿ 7 ಎಕರೆಯಷ್ಟು ಪ್ರದೇಶ ಉರಿದು ಭಸ್ಮವಾಗಿದೆ. ಎಲ್ಲೆಡೆ ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ಪಡೆ ಸಂಭವಿಸಬಹುದಾದ್ದ ದುರಂತವನ್ನು ತಪ್ಪಿಸಿದೆ.

ಸರ್ಕಾರಿ ಅತಿಥಿಗೃಹದ ಆವರಣದಲ್ಲಿ ಕಿಡಿಗೇಡಿಯೊಬ್ಬ ಎಸೆದ ಸಿಗರೇಟ್‌ನಿಂದ ಹೊತ್ತಿದ ಬೆಂಕಿ ಬರೋಬ್ಬರಿ 2 ಎಕರೆಯಷ್ಟು ಪ್ರದೇಶದ ಒಣಹುಲ್ಲನ್ನು ಆಪೋಶನ ತೆಗೆದುಕೊಂಡಿತು. ಒಣಹುಲ್ಲು ನೋಡ ನೋಡುತ್ತಿದ್ದಂತೆ ಧಗಧಗಿಸಿತು.‌

ಮಧ್ಯಾಹ್ನ 2.15ಕ್ಕೆ ಬಂದ ಕರೆಗೆ ತ್ವರಿತವಾಗಿ ಸ್ಪಂದಿಸಿದ ಬನ್ನಿಮಂಟಪದ ಅಗ್ನಿಶಾಮಕಪಡೆ 2.23ಕ್ಕೆ ಸ್ಥಳ ತಲುಪಿ, ಬೆಂಕಿ ನಂದಿಸಲು ತೊಡಗಿತು. 3 ವಾಹನಗಳಲ್ಲಿ ನೀರು ಹಾಕಿ ಕೆಲವರು ನಂದಿಸಿದರೆ, ಮತ್ತೆ ಕೆಲವರು ಹಸಿರುಸೊಪ್ಪು ಹಾಕಿ ಬೆಂಕಿ ಹರಡುವುದನ್ನು ತಪ್ಪಿಸಿದರು.‌

ADVERTISEMENT

ಒಂದು ವೇಳೆ ಸಕಾಲಕ್ಕೆ ಅಗ್ನಿಶಾಮಕ ಪಡೆ ಬಾರದಿದ್ದಲ್ಲಿ ಬೆಂಕಿಯು ಅಕ್ಕಪಕ್ಕದ ಕಟ್ಟಡಗಳಿಗೆ ಹರಡುವ ಸಾಧ್ಯತೆ ಇತ್ತು. ಬೆಂಕಿಯಿಂದ ನೂರಾರು ಪಕ್ಷಿಗಳ ಗೂಡುಗಳು ಸುಟ್ಟು ಹೋಗಿವೆ. ದಿಕ್ಕು ಕಾಣದಂತಾದ ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತಿದ್ದವು.

ಅಗ್ನಿಶಾಮಕ ಅಧಿಕಾರಿ ಭರತ್‌ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಶಿವಸ್ವಾಮಿ, ಸಿಬ್ಬಂದಿಯಾದ ಧನಂಜಯ, ಶಿವಲಿಂಗಯ್ಯ, ಮಹದೇವ, ರವಿ, ಮಂಜುನಾಥ್, ಸುರೇಶ ಪೂಜಾರಿ, ನತಾಫ, ಪ್ರಮೋದ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಹೆಬ್ಬಾಳದಲ್ಲಿ 2 ಕಡೆ ಬೆಂಕಿ‌

ಹೆಬ್ಬಾಳದ ಡಿಆರ್‌ಡಿಒ ಆವರಣದಲ್ಲಿ ಒಣ ಹುಲ್ಲಿಗೆ ತಗುಲಿದ ಬೆಂಕಿಯು ನೋಡನೋಡುತ್ತಿದ್ದಂತೆ 5 ಎಕರೆಯಷ್ಟು ಪ್ರದೇಶವನ್ನು ಭಸ್ಮಗೊಳಿಸಿತು. ಇಲ್ಲಿಗೆ ಬಂದ ಹೆಬ್ಬಾಳ ಅಗ್ನಿಶಾಮಕ ಪಡೆ ಬೆಂಕಿ ಉಂಟಾಗಿದ್ದ ಸ್ಥಳ ತಲುಪಲು ಸಾಧ್ಯವಾಗದೇ ಪರದಾಡಿದರು. ದೊಡ್ಡದಾದ ಗೇಟ್‌ ಅನ್ನು ದಾಟಿ ಕೊನೆಗೂ ಬೆಂಕಿ ನಂದಿಸಿ, ಇತರೆಡೆ ಹರಡದಂತೆ ತಡೆದರು. ‌

ಅಗ್ನಿಶಾಮಕ ಠಾಣೆಯ ಸಹಾಯಕ ಅಧಿಕಾರಿ ತಮ್ಮಯ್ಯ, ಸಿಬ್ಬಂದಿಯಾದ ರಮೇಶ್, ಪರಮೇಶ್, ನಾಗರಾಜ ಪಾಂಡುಶೆಟ್ಟಿ, ವಿನೋದ ಹುಲಗೋಳ ಕಾರ್ಯಾಚರಣೆ ತಂಡದಲ್ಲಿದ್ದರು.

ಹೆಬ್ಬಾಳದಲ್ಲಿ ಶಾಲಾ ವಾಹನವೊಂದಕ್ಕೆ ಹೊತ್ತಿದ್ದ ಬೆಂಕಿಯನ್ನು ಅಗ್ನಿಶಾಮಕಪಡೆ ನಂದಿಸಿತು. ಗೋಕುಲಂನ 3ನೇ ಹಂತದಲ್ಲೂ ಒಣಹುಲ್ಲಿಗೆ ಬೆಂಕಿ ತಗುಲಿತ್ತು. ಇಲ್ಲಿ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.