ADVERTISEMENT

‘ಫಿಟ್ ಮೈಸೂರು’ ನಡಿಗೆಗೆ ಜತೆಯಾದ ಸಾವಿರಾರು ಹೆಜ್ಜೆಗಳು

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 8:03 IST
Last Updated 11 ಜನವರಿ 2026, 8:03 IST
   

ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ‘ಫಿಟ್ ಮೈಸೂರು’ ನಿರ್ಮಾಣದ ಆಶಯದೊಂದಿಗೆ ಭಾನುವಾರ ಆಯೋಜಿಸಿದ್ದ ನಡಿಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾವಿರಾರು ಮಂದಿ ಪಾಲ್ಗೊಂಡು ಉತ್ತಮ ಆರೋಗ್ಯದ ಮಹತ್ವವನ್ನು ಸಾರಿದರು.

ಮೈಸೂರನ್ನು ಆರೋಗ್ಯ ನಗರಿಯನ್ನಾಗಿ ರೂಪಿಸುವ ಸಂದೇಶ ಸಾರಲೆಂದು ನಡೆದ ‘ಫಿಟ್‌ ಮೈಸೂರು– ಸಾಮೂಹಿಕ ಆರೋಗ್ಯ ಹಾಗೂ ಜಾಗೃತಿ ನಡಿಗೆ’ಗೆ ಮಹಾನಗರ ಪಾಲಿಕೆ, ಮೈಸೂರು ಜಿಮ್ ಅಸೋಸಿಯೇಷನ್, ಜಿಎಸ್ಎಸ್ ಸಮೂಹ ಸಂಸ್ಥೆ ಮೊದಲಾದವು ಸಹಯೋಗ ನೀಡಿದವು.

ಮಾನಸಗಂಗೋತ್ರಿ ಬಯಲು ರಂಗಮಂದಿರ ಆವರಣದಲ್ಲಿ ನಡಿಗೆಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ 5.30ರಿಂದ 6ರವರೆಗೆ ನೋಂದಣಿ, 6ರಿಂದ 6.15ರವರೆಗೆ ವ್ಯಾಯಾಮ, 6.15ರಿಂದ 6.30ರವರೆಗೆ ನಾಡಗೀತೆ ಮತ್ತು ವಂದೇಮಾತರಂ ಗೀತೆಗಳನ್ನು ಹಾಡಲಾಯಿತು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಡಾ.ಉಷಾ ಹೆಗಡೆ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌ ಚಾಲನೆ ನೀಡಿದರು. ಸಂಸದ ಸುನೀಲ್‌ ಭೋಸ್, ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನಪರಿಷತ್‌ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ವಿ.ವಿ. ಕುಲಸಚಿವರಾದ ಎಂ.ಕೆ. ಸವಿತಾ, ಪ್ರೊ.ನಾಗರಾಜ್‌, ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್, ಜಿಎಸ್‌ಎಸ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್, ‘ಚಿರಾಗ್‌ ಆಡ್ಸ್‌’ನ ವಿವೇಕ್‌ ಮೊದಲಾದವರು ಹೆಜ್ಜೆ ಹಾಕಿದರು. ನಿತ್ಯವೂ ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ವಾಯುವಿಹಾರ ಮಾಡುವವರು ಕೂಡ ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಕುಕ್ಕರಹಳ್ಳಿ ಕೆರೆಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಗಂಗೋತ್ರಿ ಸುತ್ತಮುತ್ತ 5 ಕಿ.ಮೀ. ಸಂಚರಿಸಿ ಸೆನೆಟ್‌ ಭವನದ ಆವರಣದಲ್ಲಿ ಮುಕ್ತಾಯಗೊಂಡಿತು. ಪಾಲ್ಗೊಂಡಿದ್ದವರಿಗೆ ಕ್ಯಾಪ್‌, ಉಪಹಾರ ನೀಡಲಾಯಿತು. ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

‘ನಮ್ಮ ನಡಿಗೆ ಆರೋಗ್ಯದ ಕಡೆಗೆ’, ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’, ‘ನಮ್ಮ ನಿಮ್ಮೆಲ್ಲರ ನಡಿಗೆ ಸ್ವಚ್ಛ ಪರಿವಾರದ ಕಡೆಗೆ’, ‘ಕಾಡಿನ ಹಸಿರು ನಮ್ಮೆಲ್ಲರ ಉಸಿರು’, ‘ಕಾಡು ಬೆಳೆಸಿ ಮಳೆ ತರಿಸಿ’, ‘ಕಾಡಿದ್ದರೆ ನಾವಿಲ್ಲಿ ಕಾಡಿಲ್ಲದೆ ನಾವೆಲ್ಲಿ?’ ಮೊದಲಾದ ಸಂದೇಶಗಳುಳ್ಳ ಭಿತ್ತಿ‍ಪತ್ರಗಳೊಂದಿಗೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಗಮನಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.