ಧಾನ್ಯಗಳಿಂದ ಪಂಚ ಗ್ಯಾರಂಟಿ ಯೋಜನೆ ಬಿಂಬಿಸಿರುವುದು (ಸಾಂಕೇತಿಕ ಚಿತ್ರ)
ಮೈಸೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಪಂಚ ಗ್ಯಾರಂಟಿ’ ಯೋಜನೆಗಳಿಂದ ಜನರ ಜೀವನದ ಮೇಲೆ ಉಂಟಾಗಿರುವ ಸಕಾರಾತ್ಮಕ ಬದಲಾವಣೆ ಮೇಲೆ ಬೆಳಕು ಚೆಲ್ಲುವ ನಾಟಕವನ್ನು ‘ಮಹಿಳಾ ದಸರಾ’ ವೇದಿಕೆಯಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆದಿದೆ.
ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಹೇಗೆ ನೆರವಾಗಿವೆ ಎಂಬುದನ್ನು ಬಿಂಬಿಸಲು ತೀರ್ಮಾನಿಸಲಾಗಿದೆ. 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ‘ಗೃಹಜ್ಯೋತಿ’, ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ‘ಶಕ್ತಿ’, 10 ಕೆ.ಜಿ. ಅಕ್ಕಿ ದೊರೆಯುವ ‘ಅನ್ನಭಾಗ್ಯ’, ಮನೆಯ ಯಜಮಾನಿಗೆ ತಿಂಗಳಿಗೆ ₹ 2 ಲಕ್ಷ ಸಿಗುವ ‘ಗೃಹಲಕ್ಷ್ಮಿ’, ಪದವೀಧರರಿಗೆ ಇಂತಿಷ್ಟು ಆರ್ಥಿಕ ನೆರವು ನೀಡುವ ‘ಯುವನಿಧಿ’ ಯೋಜನೆಗಳ ಕುರಿತು ಕಟ್ಟಿಕೊಡುವ ಪ್ರಯತ್ನ ಮಾಡಲಾಗುತ್ತಿದೆ.
ಜೆ.ಕೆ. ಮೈದಾನದಲ್ಲಿರುವ ಎಂಎಂಸಿಆರ್‌ಐ ಸಭಾಂಗಣದಲ್ಲಿ ಮೈಸೂರು ರಂಗಾಯಣ ತಂಡದವರು ಸೆ.23ರಂದು ‘ಬದಲಾದ ಬದುಕು’ ಶೀರ್ಷಿಕೆಯ ನಾಟಕವನ್ನು ಪ್ರದರ್ಶಿಸಲಿದ್ದಾರೆ. ನಿತ್ಯವೂ ಸಂಜೆ ಮಹಿಳಾ ತಂಡಗಳಿಂದಲೇ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮೀಳೆಯರ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಒದಗಿಸಲಾಗುತ್ತಿದೆ.
ಏನೇನು ಕಾರ್ಯಕ್ರಮಗಳು?: ಈ ಬಾರಿ 5 ದಿನಗಳ ಬದಲಿಗೆ 4 ದಿನ ಮಾತ್ರ ಮಹಿಳಾ ದಸರಾ ನಡೆಯಲಿದೆ. 23ರಂದು ಬೆಳಿಗ್ಗೆ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 11ಕ್ಕೆ ಜೆ.ಕೆ. ಮೈದಾನದ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸುವರು. ಸಂಜೆ ಮೈಸೂರು ನಗರ, ಮೈಸೂರು ತಾಲ್ಲೂಕು ನಗರ ಹಾಗೂ ಹುಣಸೂರು ತಾಲ್ಲೂಕು ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆ.24ರಂದು ಲೇಖಕಿ ಕುಸುಮಾ ಆಯರಹಳ್ಳಿ ‘ನವಮಾಧ್ಯಮಗಳು ಮತ್ತು ಮಹಿಳೆಯರು’ ವಿಷಯ ಮಂಡಿಸುವರು. ರುಕ್ಮಿಣಿ ತಂಡದವರು ಶಾಸ್ತ್ರೀಯ ಸಂಗೀತ, ಸಮೂಹ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಟಿಬೆಟಿಯನ್ ಮಹಿಳೆಯರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಮೆಮೋರಿ ಟೆಸ್ಟ್, ಲಗೋರಿ, ಹಬ್ಬಜಗ್ಗಾಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ‘ಸಾಮಾಜಿಕ ಜಾಲತಾಣ, ಸೈಬರ್ ಅಪರಾಧ’ ವಿಷಯ ಕುರಿತು ‘ಜಿ–ಸ್ಕ್ವಾಡ್’ ತಂಡದಿಂದ ನಾಟಕ ಪ್ರದರ್ಶನವಿದೆ. ಬುಡಕಟ್ಟು ಮಹಿಳೆಯರಿಂದ ನೃತ್ಯ, ನಂಜನಗೂಡು ತಾಲ್ಲೂಕು ಮಹಿಳೆಯರಿಂದ ಸಮೂಹ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಕಣ್ತುಂಬಿಕೊಳ್ಳಬಹುದಾಗಿದೆ.
ಐದಲ್ಲ ನಾಲ್ಕು ದಿನಗಳವರೆಗೆ ಕಾರ್ಯಕ್ರಮ
ಪ್ರತಿಭಾವಂತ ಮಹಿಳೆಯರಿಗೆ ಅವಕಾಶ
ಉತ್ಪನ್ನ ಮಾರಾಟಕ್ಕೆ 60 ಮಳಿಗೆ
ಸವಿತಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.