ADVERTISEMENT

ಮೈಸೂರು | ಪಿಚ್ಚಳ್ಳಿ ಗಾಯನ; ಭೀಮಾನುಸಂಧಾನ

ಮೋಹನ್ ಕುಮಾರ ಸಿ.
Published 18 ಜನವರಿ 2026, 4:00 IST
Last Updated 18 ಜನವರಿ 2026, 4:00 IST
ಕಿಂದರಿಜೋಗಿ ಆವರಣದಲ್ಲಿ ಪಿಚ್ಚಳ್ಳಿ ಶ್ರೀನಿವಾಸ್‌ ಮತ್ತು ತಂಡದವರು ಪ್ರಸ್ತುತ ಪಡಿಸಿದ ‘ಬಾಬಾಸಾಹೇಬ್ ಸಂಗೀತ ಸ್ಮೃತಿ’ 
ಕಿಂದರಿಜೋಗಿ ಆವರಣದಲ್ಲಿ ಪಿಚ್ಚಳ್ಳಿ ಶ್ರೀನಿವಾಸ್‌ ಮತ್ತು ತಂಡದವರು ಪ್ರಸ್ತುತ ಪಡಿಸಿದ ‘ಬಾಬಾಸಾಹೇಬ್ ಸಂಗೀತ ಸ್ಮೃತಿ’    

ಮೈಸೂರು: ತಮಟೆ ಹಿಡಿದು, ಕಾಲಿಗೆ ಗೆಜ್ಜೆಗಳ ಕಟ್ಟಿ ಜಾನಪದವಷ್ಟೇ ಅಲ್ಲ, ಹೋರಾಟದ ಹಾಡುಗಳಿಗೂ ಉಸಿರು ನೀಡಿದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಅವರ ಗಾಯನ ಕೇಳಲು, ಕಿಂದರಿಜೋಗಿ ಆವರಣದಲ್ಲಿ ಶನಿವಾರ ಜನರು ಕಿಕ್ಕಿರಿದು ತುಂಬಿದ್ದರು. ಎಂದೋ ಕೇಳಿದ್ದ ದಲಿತ ಚಳವಳಿಯ ಹಾಡುಗಳನ್ನು ಮತ್ತೊಮ್ಮೆ ಗುನುಗಿಕೊಂಡರು. 

ರಂಗಾಯಣದಲ್ಲಿ ನಡೆಯುತ್ತಿರುವ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವದ 7ನೇ ದಿನದ ‘ಜನಪದ ಉತ್ಸವ’ದಲ್ಲಿ ಪಿಚ್ಚಳ್ಳಿ ತಂಡದವರು ಹಾಡುತ್ತಲೇ ಬಾಬಾಸಾಹೇಬರ ಹೋರಾಟವನ್ನು ನೆನಪಿಸಿದರು.

ಸಿದ್ದಲಿಂಗಯ್ಯ ಕವಿತೆಗಳನ್ನು ಹಾಡಿ ಕಿಚ್ಚೆಬ್ಬಿಸಿದ ಅವರು, ಅಂಬೇಡ್ಕರ್ ಪಟ್ಟ ಕಷ್ಟವನ್ನು ಹೇಳಿ ಭಾವುಕಗೊಳಿಸಿದರು. ನಾಟಕಗಳಲ್ಲಿ ರಸಸ್ವಾದ ಅನುಭವಿಸುತ್ತಿದ್ದ ಸಹೃದಯರೂ, ಕಾವ್ಯ ‘ಭೀಮಾನುಸಂಧಾನ’ಕ್ಕೆ ವಶರಾದರು. 

ADVERTISEMENT

‘ಸಂವಿಧಾನ ಪ್ರಸ್ತಾವನೆ’ಯೇ ನಾಂದಿಗೀತೆಯಾಗಿತ್ತು. ನಂತರ ‘ಕತ್ತಲ ಜಗತ್ತಿಗೆ ಬೆಳಕನು ನೀಡಿದ ಅರಿವೇ ಅಂಬೇಡ್ಕರ.. ಗುರುವೇ ಅಂಬೇಡ್ಕರ’ ಹಾಡಿ ಎಲ್ಲರನ್ನೂ ತನ್ಮಯಗೊಳಿಸಿದರು.

ದಲಿತ ಕವಿ ಸಿದ್ದಲಿಂಗಯ್ಯ ಅವರ ‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ.. ಆಕಾಶದ ಅಗಲಕ್ಕೂ ನಿಂತ ಆಲವೇ’ ಹೇಳಿದ ಅವರು, ತಾವು ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾಗ, ಐದನೇ ತರಗತಿ ಓದುತ್ತಿದ್ದ ಬಾಲಕಿ ರತ್ನಮ್ಮ ಎಂಬುವರು ಹಾಡಿದ್ದ ಕ್ಷಣವನ್ನು ನೆನೆಪಿಸಿಕೊಂಡರು. ಈ ಗೀತೆಯನ್ನು ಸಹಗಾಯಕ ಮಾರುತಿ ಪ್ರಸಾದ್‌ ಭಾವದುಂಬಿ ಹಾಡಿದರು. ‘ಮಹಾರಾಷ್ಟ್ರದ ಮಹಾನದಿ’, ‘ಶತಮಾನದ ಸೇಡಿನ ಕಿಡಿ.. ಜಗದೊಡಲ ಜ್ಯೋತಿಯೇ’ ಗೀತೆಗಳು ಮೆಚ್ಚುಗೆ ಗಳಿಸಿದವು. 

ಆಕರ್ಷಿಸಿದ ಪುಲಿವೇಷಾಲು:

ಆಂಧ್ರಪ್ರದೇಶದ ವಿಜಯವಾಡದ ಅದ್ದೂರು ಗೋಪಿ ಮತ್ತು ತಂಡದವರು ‘ಬುಟ್ಟಬೊಮ್ಮುಲು’ ಹಾಗೂ ‘ಪುಲಿವೇಷಾಲು’ ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು. ಕರಾವಳಿಯಲ್ಲಿ ಬಣ್ಣ ಬಳಿದುಕೊಳ್ಳುವ ಹುಲಿವೇಷದ ಕಲಾವಿದರಂತೆ ಈ ನೃತ್ಯಗಳು ಇರಲಿಲ್ಲ. ಹುಲಿ ಮುಖವಾಡ ಮತ್ತು ಬಟ್ಟೆಯನ್ನು ಧರಿಸಿದ್ದ ಕಲಾವಿದರು, ಹುಲಿಮರಿಗಳಂತೆ ಕಂಡರು. ಡೋಲು, ತಮಟೆ ಮೊದಲಾದ ವಾದ್ಯಮೇಳಕ್ಕೆ ಹೆಜ್ಜೆ ಹಾಕಿದರು. ‘ಬುಟ್ಟಬೊಮ್ಮುಲು’ ನೃತ್ಯವು ರಾಜ್ಯದ ಗಾರುಡಿಗೊಂಬೆಯನ್ನು ನೆನಪಿಸಿತು. 

ಕಿರುರಂಗಮಂದಿರದಲ್ಲಿ ನಡೆದ ವಿಚಾರಸಂಕಿರಣದ ಬಿಡುವಿನಲ್ಲಿ ಮಹಾರಾಷ್ಟ್ರದ ಗಾಯಕ ಅನಿರುದ್ಧ ವಂಕರ್ ಮತ್ತು ತಂಡದವರು ‘ಸಂಗೀತ ಸ್ಮೃತಿ’ ಕಾರ್ಯಕ್ರಮ ಪ್ರಸ್ತುತಪಡಿಸಿದರು. 

ಜನಪದ ಉತ್ಸವದಲ್ಲಿ ಆಂಧ್ರಪ್ರದೇಶ ರಾಜ್ಯದ ವಿಜಯವಾಡದ ಶ್ರೀಅದ್ದೂರಿ ಗೋಪಿ ಮತ್ತು ತಂಡದವರು ‘‍ಪುಲಿವೇಷಾಲು’ ನೃತ್ಯ ಪ್ರಸ್ತುತಪಡಿಸಿದರು 
ವನರಂಗ ವೇದಿಕೆಯಲ್ಲಿ ಚಿತ್ರದುರ್ಗದ ಕುಮಾರೇಶ್ವರ ನಾಟಕ ಸಂಘದ ಕಲಾವಿದರು ಬಿ.ಕುಮಾರಸ್ವಾಮಿ ನಿರ್ದೇಶನದಲ್ಲಿ ಅಭಿನಯಿಸಿದ ‘ಕಿವುಡ ಮಾಡಿದ ಕಿತಾಪತಿ’ ನಾಟಕದ ದೃಶ್ಯ 
ಭೂಮಿಗೀತದಲ್ಲಿ ಬೆಂಗಳೂರಿನ ಪಯಣ ರಂಗ ತಂಡದವರು ಎನ್.ಮಂಗಳಾ ನಿರ್ದೇಶನದಲ್ಲಿ ‘ಕಳೆದುಹೋದ ಹಾಡು’ ನಾಟಕ ಅಭಿನಯಿಸಿದರು 

ಸಂವಿಧಾನ ಪ್ರಸ್ತಾವನೆ’ಯೇ ನಾಂದಿಗೀತೆ ಕವಿ ಸಿದ್ದಲಿಂಗಯ್ಯ ಕಾವ್ಯದ ಮೆಲುಕು  ಆಕರ್ಷಿಸಿದ ಪುಲಿವೇಷಾಲು, ಬುಟ್ಟಬೊಮ್ಮುಲು

ಕಿತಾಪತಿಗೆ ನಕ್ಕು ನಲಿದರು!  ವನರಂಗದಲ್ಲಿ ಚಿತ್ರದುರ್ಗದ ಕುಮಾರೇಶ್ವರ ನಾಟಕ ಸಂಘದ ಕಲಾವಿದರು ಬಿ.ಕುಮಾರಸ್ವಾಮಿ ನಿರ್ದೇಶನದಲ್ಲಿ ಅಭಿನಯಿಸಿದ ‘ಕಿವುಡ ಮಾಡಿದ ಕಿತಾಪತಿ’ ನಾಟಕವು ಪ್ರೇಕ್ಷಕರನ್ನು ನಕ್ಕು ನಲಿಸಿತು. ಸಭಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು.‌ ಸ್ಥಳಾವಕಾಶ ದೊರಕದೆ ನೂರಾರು ಮಂದಿ ನೆಲದಲ್ಲಿ ಕುಳಿತು ನಿಂತುಕೊಂಡೇ ನಾಟಕ ವೀಕ್ಷಿಸಿದರು. ಕಲಾಮಂದಿರದಲ್ಲಿ ಕೊಯಮತ್ತೂರಿನ ಆಲಂ ಥಿಯೇಟರ್ ಗ್ರೂಪ್‌ ತಂಡದವರು ‘ಕಿಷ್ಕಿಂಧ’ ಭೂಮಿಗೀತದಲ್ಲಿ ಬೆಂಗಳೂರಿನ ಪಯಣ ರಂಗ ತಂಡದವರು ಎನ್.ಮಂಗಳಾ ನಿರ್ದೇಶನದಲ್ಲಿ ‘ಕಳೆದುಹೋದ ಹಾಡು’ ನಾಟಕ ಅಭಿನಯಿಸಿದರು.  ಚಲನಚಿತ್ರೋತ್ಸವ ಎಂದಿನಂತೆ ಆಕರ್ಷಿಸಿತು. ಹೀರೊ (ಇಂಗ್ಲಿಷ್‌) ಘುಟ್ಲೀ ಲಡೂ (ಹಿಂದಿ) ಹಾಗೂ ಕನ್ನಡದ ಹೆಬ್ಬುಲಿ ಕಟ್‌ ಚಿತ್ರಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ‘ಹೆಬ್ಬುಲಿ ಕಟ್’ ಸಿನಿಮಾವು ಅಸ್ಪೃಶ್ಯತೆ ಆಚರಣೆ ಕುರಿತು ಬಿಸಿ ಚರ್ಚೆ ಹುಟ್ಟುಹಾಕಿತು.  ವಾರಾಂತ್ಯವಾದ್ದರಿಂದ ಜನರು ರಂಗಾಯಣದತ್ತ ಹರಿದುಬಂದರು. ಕುಕ್ಕರಹಳ್ಳಿ ಕೆರೆ ದ್ವಾರದಿಂದ ಕಲಾಮಂದಿರದವರೆಗೂ ಟ್ರಾಫಿಕ್‌ ಜಾಮ್ ಉಂಟಾಗಿತ್ತು. ಕಾರುಗಳನ್ನು ರಾಧಾಕೃಷ್ಣನ್ ಅವೆನ್ಯೂ ರಸ್ತೆ ಹಾಸ್ಟೆಲ್ ರಸ್ತೆ ಕುಕ್ಕರಹಳ್ಳಿ ಕೆರೆ ಪಾರ್ಕಿಂಗ್ ತಾಣದಲ್ಲಿ ನಿಲ್ಲಿಸಲಾಗಿತ್ತು. 

ಬಹುರೂಪಿಯಲ್ಲಿ ಇಂದು  ರಾಷ್ಟ್ರೀಯ ವಿಚಾರಸಂಕಿರಣ ಕಿರುರಂಗಮಂದಿರ: ಗೋಷ್ಠಿ 3; ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಮತ್ತು ಅನುಷ್ಠಾನ– ಲೇಖಕ ಪ್ರೊ.ಕೆ.ಎಸ್‌.ಚಲಂ. ತಳ ಸಮುದಾಯಗಳ ಸಾಂಸ್ಕೃತಿ ಪ್ರತಿರೋಧ– ವಿಮರ್ಶಕ ಪ್ರೊ.ರಾಜೇಂದ್ರ  ಚೆನ್ನಿ. ಅಧ್ಯಕ್ಷತೆ– ಪ್ರೊ.ಟಿ.ಎಸ್‌.ಚಂದ್ರಶೇಖರ. ಬೆಳಿಗ್ಗೆ 10. ತಜ್ಞರ ಅಭಿಮತ. ಅಂಬೇಡ್ಕರ್ ಮತ್ತು ಆಧ್ಯಾತ್ಮಿಕ ವಿಮೋಚನೆ– ಭಂತೇ ತುಪ್ಟನ್ ಕಲ್ಡಾನ್ ವಿಮರ್ಶಕ ನಟರಾಜ ಬೂದಾಳು ಬೆಳಿಗ್ಗೆ 11.45. ಗೋಷ್ಠಿ 4; ಅಂಬೇಡ್ಕರ್ ಅವರ ಪರಿಕಲ್ಪನೆಯ ಕಾರ್ಮಿಕ ಸುಧಾರಣೆಗಳು ಮತ್ತು ಚಳವಳಿಗಳು– ಹೋರಾಟಗಾರ್ತಿ ಆರ್.ಪ್ರತಿಭಾ ಭಾರತದಲ್ಲಿ ಜನಪರ ಚಳವಳಿಗಳ ಪ್ರತಿರೋಧ ಮತ್ತು ಅಭಿವೃದ್ಧಿ– ನಿವೃತ್ತ ಮೇಜರ್‌ ಜನರಲ್ ಸುಧೀರ್ ಜಿ.ಒಂಭತ್ಕೆರೆ ಅಧ್ಯಕ್ಷತೆ– ವಿಮರ್ಶಕ ಪ್ರೊ.ರಹಮತ್ ತರೀಕೆರೆ. ಮಧ್ಯಾಹ್ನ 1.45. ಮಹಿಳಾ ಚಳವಳಿ: ಸವಾಲುಗಳು ಮತ್ತು ವಿದ್ಯಮಾನಗಳು– ಲೇಖಕಿ ಎಸ್‌.ಜಿ.ವಿಜಯಲಕ್ಷ್ಮಿ ಭಾರತ ಸಂವಿಧಾನ: ಆಶಯ ಮತ್ತು ಬಿಕ್ಕಟ್ಟುಗಳು– ಪ್ರೊ.ಎ.ನಾರಾಯಣ ಅಧ್ಯಕ್ಷತೆ– ಎಂ.ಉಮಾಪತಿ. ಮಧ್ಯಾಹ್ನ 3.30. ಸಮಾರೋಪ ಸಮಾರಂಭ. ಭಾಷಣ– ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ. ಸಂಜೆ 5. ಸಂಗೀತ ಸ್ಮೃತಿ– ಪದ್ಮಪಾಣಿ ಲಲಿತಕಲಾ ಅಕಾಡೆಮಿ ನಾರಾಯಣಸ್ವಾಮಿ ಮತ್ತು ತಂಡ ವೀರಪ್ಪ ಚನ್ನಪ್ಪ ಅಂಗಡಿ ಮತ್ತು ತಂಡ.   ಚಲನಚಿತ್ರೋತ್ಸವ ಶ್ರೀರಂಗ: ಗಾಂಧಿ ಜಯಂತಿ (ಕನ್ನಡ) ಭಾರತದ ಪ್ರಜೆಗಳಾದ ನಾವು (ಕನ್ನಡ) ಹೇಮಾವತಿ (ಕ) ಬೆಳಿಗ್ಗೆ 10ರಿಂದ ಸಂಜೆ 4.30  ನಾಟಕೋತ್ಸವ ಭೂಮಿಗೀತ: ಮುಂಬೈನ ಯಲ್ಗಾರ್ ಸಾಂಸ್ಕೃತಿಕ್‌ ಮಂಚ್‌ ಅಭಿನಯಿಸುವ ನಾಟಕ ‘ಕವನ್‌ ಆನ್ ಅಂಬೇಡ್ಕರೈಟ್‌ ಒಪೆರಾ’ (ಹಿಂದಿ). ಸಂಜೆ 6.30  ವನರಂಗ: ತುಮಕೂರಿನ ಜಿಗುರು ಪ್ರದರ್ಶಕ ಕಲೆಗಳ ಕೇಂದ್ರ ಅಭಿನಯಿಸುವ ನಾಟಕ ‘ರುಮು ರುಮು ರುಮು’. ರಾತ್ರಿ 7  ಸಂಗೀತ ಸ್ಮೃತಿ  ಕಲಾಮಂದಿರ: ಬಾಬಾಸಾಹೇಬ್‌ ಸಂಗೀತ ಸ್ಮೃತಿ– ಪಂಜಾಬಿ ಗಾಯಕಿ ಗಿನ್ನಿಮಾಹಿ ಮತ್ತು ತಂಡ. ಅತಿಥಿ– ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ನೆಲ್ಲಕುಂಟೆ ವೆಂಕಟೇಶಯ್ಯ ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್.ಮುಕುಂದರಾಜ್. ರಾತ್ರಿ 7 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.