
ಪ್ರೊ. ಹಾ.ತಿ. ಕೃಷ್ಣೇಗೌಡ
ಮೈಸೂರು: ‘ಹಾವೇರಿಯಲ್ಲಿರುವ ಕರ್ನಾಟಕ ಜಾನಪದ ವಿವಿಯು ಆಫ್ರಿಕನ್ ಜಾನಪದ ಕೃತಿ ಪ್ರಕಟಿಸಿ, ಮಾರಾಟಕ್ಕೆ ಬಿಡುಗಡೆ ಮಾಡಿದ್ದರೂ ಅದರ ರಚನೆಗಾಗಿ ಕೆಲಸ ಮಾಡಿದವರಿಗೆ ಗೌರವಧನ ನೀಡಿಲ್ಲ’ ಎಂದು ಕೃತಿಯ ಸಂಪಾದಕ, ಸಾಹಿತಿ ಹಾ.ತಿ. ಕೃಷ್ಣೇಗೌಡ ಆರೋಪಿಸಿದರು.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರಪಂಚದ ಜಾನಪದ ವಿಚಾರಗಳನ್ನು ಕನ್ನಡಿಗರಿಗೆ ಸಿಗುವಂತೆ ಮಾಡುವ ಹಾಗೂ ಜಾನಪದದ ಅರಿವನ್ನು ವಿಸ್ತರಿಸಬೇಕೆಂಬ ಆಶಯದಲ್ಲಿ ವಿಶ್ವವಿದ್ಯಾಲಯ ಕನ್ನಡ ಜಾನಪದ ವಿಶ್ವಕೋಶ ಯೋಜನೆಗೆ ₹7 ಲಕ್ಷದ ಕ್ರಿಯಾಯೋಜನೆ ರಚಿಸಲಾಗಿತ್ತು’ ಎಂದರು.
‘ಆಫ್ರಿಕನ್ ಜಾನಪದ ಕೃತಿಯು 10 ಸಂಪುಟಗಳದ್ದಾಗಿದ್ದು, ನನ್ನ ನೇತೃತ್ವದಲ್ಲಿ ನಾಲ್ವರು ಸಂಪಾದಕರು, 30 ಮಂದಿ ಲೇಖಕರು ಕಾರ್ಯನಿರ್ವಹಿಸಿದ್ದಾರೆ. 2015ರಲ್ಲಿ ಕೃತಿಯು ಒಂದು ಸಾವಿರ ಮುದ್ರಣ ಕಂಡು (₹ 550 ಮಾರುಕಟ್ಟೆ ಬೆಲೆ) ಬಿಡುಗಡೆ ಆಗಿತ್ತು. ಕೆಲಸ ಮಾಡಿದವರಿಗೆಗ ಗೌರವಧನ ಕೊಡದೇ ಕಾಯಿಸಲಾಗುತ್ತಿದೆ’ ಎಂದು ದೂರಿದರು.
‘ಈ ಕೃತಿಗಾಗಿ ಶ್ರಮಿಸಿದ ಕೆಲವರು ಹಾಸಿಗೆ ಹಿಡಿದಿದ್ದಾರೆ. ಅವರ ಗೌರವಧನ ನೀಡಿದರೆ ಉಪಯೋಗ ಆಗುತ್ತದೆ ಎಂದು ಹಲವು ಬಾರಿ ಮನವಿ ಮಾಡಿದರೂ ಈಗಿನ ಕುಲಪತಿ ಸ್ಪಂದಿಸುತ್ತಿಲ್ಲ. ಇನ್ನಾದರೂ ಸ್ಪಂದಿಸದಿದ್ದಲ್ಲಿ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಹಾಗೂ ರಾಜ್ಯಪಾಲರ ಮೊರೆ ಹೋಗುತ್ತೇವೆ’ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಮೋಹನ್‌ಕುಮಾರ್, ಚಂದ್ರಶೇಖರ್ ಗೊರವರ್, ಪ್ರೊ.ಶೋಭಾ, ಪಿ. ಗಿರೀಶ್, ಭಾರತಿ ಮರವಂತೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.