
ಮೈಸೂರಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ಮಂಗಳವಾರ ಆಯೋಜಿಸಿದ್ದ ಚುಟುಕು ಕವಿ ಎಂ.ಅಕಬರ ಅಲಿ ಅವರ 101ನೇ ದಿನಾಚರಣೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ
ಮೈಸೂರು: ‘ಗ್ರಹಣದ ಬಗ್ಗೆ ಕನ್ನಡ ಸಾಹಿತ್ಯ ಲೋಕ ದೊಡ್ಡ ಪ್ರತಿರೋಧ ತೋರಿದೆ. ಕನ್ನಡದ ಪರಂಪರೆಗೆ ತಕ್ಕಂತೆ ಕನ್ನಡಿಗರು ಬದುಕಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ಹೇಳಿದರು.
ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ಮಂಗಳವಾರ ಆಯೋಜಿಸಿದ್ದ ಚುಟುಕು ಕವಿ ಎಂ.ಅಕಬರ ಅಲಿ ಅವರ 101ನೇ ದಿನಾಚರಣೆಯಲ್ಲಿ ಮಾತನಾಡಿದರು.
‘ಗ್ರಹಣ ನಿಸರ್ಗದ ಸಾಮಾನ್ಯ ಕ್ರಿಯೆ. ಅದು ಜರುಗುತ್ತಲೇ ಇರುತ್ತದೆ. ಅದು ಮನುಷ್ಯನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬಸವಾದಿ ಶರಣರು ರಾಹುಕಾಲ, ಗುಳಿಕಕಾಲ ಸೇರಿದಂತೆ ಪಂಚಾಂಗಗಳನ್ನು ತಿರಸ್ಕರಿಸಿದ್ದರು. ಪಂಪನಿಂದ ಕುವೆಂಪುವರೆಗೂ ಮೌಢ್ಯವನ್ನು ಕನ್ನಡ ಸಾಹಿತ್ಯ ಪರಂಪರೆ ವಿರೋಧಿಸಿದೆ. ವೈಚಾರಿಕತೆಯನ್ನು ಅಪ್ಪಿಕೊಂಡಿದೆ’ ಎಂದರು.
‘ವಿಜ್ಞಾನದಿಂದಲೇ ಎಲ್ಲವನ್ನೂ ಪಡೆದಿದ್ದೇವೆ. ಖಾರ ಅರೆಯುವುದು, ಅಕ್ಕಿ ರುಬ್ಬುವುದು ಸೇರಿದಂತೆ ಎಲ್ಲ ಕೆಲಸವನ್ನು ಹಿಂದಿನವರು ಕಲ್ಲಿನಲ್ಲಿ ಮಾಡುತ್ತಿದ್ದರು. ಈಗ ಯಂತ್ರ ಮಾಡುತ್ತಿದೆ. ವಿಜ್ಞಾನವನ್ನು ಮರೆತು ಅಜ್ಞಾನವನ್ನು ಮೈಮೇಲೆ ಎಳೆದುಕೊಂಡರೆ ಮತ್ತೆ ಶಿಲಾಯುಗಕ್ಕೆ ಹೋಗಬೇಕಾಗುತ್ತದೆ’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಕೋಟೆ ಎಂ.ಶಿವಣ್ಣ, ಶ್ರೀನಿವಾಸ ಬಹದ್ದೂರ್, ಎಂಜಿಆರ್ ಅರಸ್, ಬಿ.ಆರ್.ನಟರಾಜ ಜೋಯಿಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.