ADVERTISEMENT

‘ಕಾಡುಪ್ರಾಣಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ’

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:25 IST
Last Updated 1 ನವೆಂಬರ್ 2025, 4:25 IST
ಸರಗೂರು ತಾಲ್ಲೂಕಿನ ಹಳೇ ಹೆಗ್ಗುಡಿಲು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಚಂದನ್‌ಗೌಡ ರೈತರೊಂದಿಗೆ ಚರ್ಚಿಸಿದರು
ಸರಗೂರು ತಾಲ್ಲೂಕಿನ ಹಳೇ ಹೆಗ್ಗುಡಿಲು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಚಂದನ್‌ಗೌಡ ರೈತರೊಂದಿಗೆ ಚರ್ಚಿಸಿದರು   

ಸರಗೂರು: ಕಾಡಂಚಿನ ಗ್ರಾಮಗಳಲ್ಲಿ ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ರೈತರು ಒತ್ತಾಯಿಸಿದರು.

ತಾಲ್ಲೂಕಿನ ಹಳೇ ಹೆಗ್ಗುಡಿಲು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಚಂದನ್‌ಗೌಡ ಅವರೊಂದಿಗೆ ಕಾಡಾನೆ ಹೊರ ಬರುವ ಮೊಳೆಯೂರು ವಲಯ ಅರಣ್ಯ ವ್ಯಾಪ್ತಿಯ ತಲೆಬುರುಡೆ ಹಳ್ಳದ ಜಾಗವನ್ನು ವೀಕ್ಷಿಸಿ ಮಾತನಾಡಿದರು.

‘ಕಾಡಂಚಿನ ಗ್ರಾಮಗಳ ರೈತರು ತಾವು ಬೆಳೆದ ಬೆಳೆಯನ್ನು ಮನೆಗೆ ತರಲು ಕಷ್ಟಪಡಬೇಕಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. ಆನೆಗಳು ಕಾಡಿನಿಂದ ಹೊರಬರುವ ಜಾಗವೇ ತಲೆ ಬುರುಡೆ ಹಳ್ಳ. ಪ್ರಾಣಿಗಳು ಊರೊಳಗೆ ಬರದಂತೆ ‌ಕಡಿವಾಣ ಹಾಕಲು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ನಂತರ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಸಿ.ಚಂದನ್‌ಗೌಡ, ‘ಕಾಡುಪ್ರಾಣಿಗಳ ಹಾವಳಿ ಹೆಚ್ಚಿದೆ. ಹದಿನೈದು ದಿನಗಳಲ್ಲಿ ಮೂವರು ರೈತರು ಮೃತಪಟ್ಟಿದ್ದಾರೆ. ಕಾಡುಪ್ರಾಣಿಗಳಿಂದ ರೈತರ ರಕ್ಷಣೆ ಇಲ್ಲದಾಗಿದೆ. ಇಲಾಖೆ ಸರ್ಕಾರದ ನಿಯಮನುಸಾರವಾಗಿ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು. ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಫ್ ಪ್ರಭಾಕರನ್, ‘ಮೊಳೆಯೂರು, ಸರಗೂರು ವಲಯ ವ್ಯಾಪ್ತಿಯಲ್ಲಿ ಐದು ಕಿ.ಮೀ.ವರೆಗೆ ರೈಲ್ವೆ ಬ್ಯಾರಿಕೇಡ್‌ ಅಳವಡಿಕೆಗೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಮಂಜೂರಾತಿ ಆದೇಶ ಬಂದ ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಆ ಮೂಲಕ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಲಾಗುವುದು. ಕಾಡುಪ್ರಾಣಿಗಳ ಹಾವಳಿಯಲ್ಲಿ ಎಲ್ಲಿ ಹೆಚ್ಚಿದೆ, ಅಲ್ಲಿ ರೈಲ್ವೆ ಕಂಬಿ ಅಳವಡಿಸಲಾಗುವುದು. ಆನೆಗಳು ನುಗ್ಗಿ ಬರುವ ಜಾಗದಲ್ಲಿ ರೈಲ್ವೆ ಕಂಬಿಗೆ ಅಡ್ಡಲಾಗಿ ಕಂಬಿ ಅಳವಡಿಸಿ, ಆನೆಗಳು ಬರದಂತೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿ‌ದರು.

ಕಾಡುಪ್ರಾಣಿಗಳ ಹಾವಳಿ ತಡೆಗೆ ಹೆಚ್ಚಿನ ಸಿಬ್ಬಂದಿ ನೇಮಕ, ಅಗತ್ಯ ಸಲಕರಣೆ ವಿತರಿಸಲಾಗುವುದು. ಅಧಿಕಾರಿಗಳು ಕಟ್ಟುನಿಟ್ಟಿನ ಕೆಲಸ ಮಾಡಲು ಆದೇಶ ನೀಡಲಾಗುವುದು. ಬೇಜವಾಬ್ದಾರಿ ವಹಿಸುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದರು.

ಸಭೆಯಲ್ಲಿ ಮೈಸೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್, ಹೆಡಿಯಾಳ ಎಸಿಎಫ್ ಡಿ.ಪರಮೇಶ್, ಆರ್‌ಎಫ್‌ಒ ಅಕ್ಷಯ್‌ಕುಮಾರ್, ಅಮೃತಾ ಹಾಗೂ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.