ADVERTISEMENT

ಅರಣ್ಯ ಇಲಾಖೆ ಸಿಬ್ಬಂದಿ ಆದಿವಾಸಿಗಳ ಮಧ್ಯೆ ಸಂಘರ್ಷ

ಎಚ್.ಡಿ.ಕೋಟೆ: ತಾರಕ ಹಿನ್ನೀರಿನಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 2:16 IST
Last Updated 9 ಜೂನ್ 2021, 2:16 IST
ಸಿ.ಬಿ.ರಿಷ್ಯಂತ್
ಸಿ.ಬಿ.ರಿಷ್ಯಂತ್   

ಎಚ್.ಡಿ.ಕೋಟೆ: ತಾಲ್ಲೂಕಿನ ತಾರಕ ಹಿನ್ನೀರಿನಲ್ಲಿ ಮೀನು ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಆದಿವಾಸಿಗಳು ಹಾಗೂ ಅರಣ್ಯ ಇಲಾಖೆ ಮಧ್ಯೆ ಸಂಘರ್ಷ ನಡೆದಿದೆ. ಕೆಲವು ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿಯ ಶಿಬಿರವನ್ನು ಧ್ವಂಸಗೊಳಿಸಿ, ಇಬ್ಬರು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ದೂರು ದಾಖಲಾಗಿದೆ.

ಜೀಯರ ಹಾಡಿಯ ಜನರು ತಾರಕ ಹಿನ್ನೀರಿನಲ್ಲಿ ಮೀನು ಹಿಡಿದು, ಸಮೀಪದ ಕೊತ್ತನಹಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದರು. ಇದನ್ನು ಖರೀದಿಸಲು ಸುತ್ತಮುತ್ತಲ ಗ್ರಾಮಗಳಿಂದ ಜನರು ಬರುತ್ತಿದ್ದರು. ಇದರಿಂದ ಕೋವಿಡ್ ಹರಡಬಹುದು ಎಂದು ದೂರಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

ಇವರ ಮನವಿ ಮೇರೆಗೆ ತಾರಕ ಹಿನ್ನೀರಿನ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಕಾರ್ಯ ಹೆಚ್ಚಿಸಿದರು. ಮೀನು ಹಿಡಿಯುವ ಬಲೆಗಳನ್ನು ಸುಟ್ಟು ಹಾಕತೊಡಗಿದರು. ಮಂಗಳವಾರ ಮೀನು ಹಿಡಿಯುತ್ತಿದ್ದ ನಾಲ್ವರು ಆದಿವಾಸಿಗಳನ್ನು ಇವರು ಹಿಡಿದು, ಶಿಬಿರಕ್ಕೆ ಕರೆದೊಯ್ಯುವಾಗ ಇಬ್ಬರು ತಪ್ಪಿಸಿಕೊಂಡು ಇನ್ನಷ್ಟು ಜನರೊಂದಿಗೆ ಶಿಬಿರದ ಮೇಲೆ ದಾಳಿ ನಡೆಸಿದರು. ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲ, ಬಂದೂಕು ಹಾಗೂ ದಾಖಲಾತಿಗಳನ್ನು ತೆಗೆದುಕೊಂಡು ಹೋದರು ಎಂದು ವಲಯ ಅರಣ್ಯಾಧಿಕಾರಿ ಸಂತೋಷ್ ತಿಳಿಸಿದ್ದಾರೆ.

ADVERTISEMENT

ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಬಂದೂಕು ಮತ್ತು ದಾಖಲಾತಿಗಳನ್ನು ಹಾಡಿ ಜನರು ವಾಪಸ್ ಕೊಟ್ಟಿದ್ದಾರೆ. ವಿನಾ ಕಾರಣ ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಜೀಯರ ಹಾಡಿಯ ಜನರೂ ದೂರು ನೀಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜಿಲ್ಲಾ ‍ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರನ್ನು ಸಂಪರ್ಕಿಸಿದಾಗ ‘ಗಲಾಟೆಯಾಗಿದೆ. ದೂರು ನೀಡಿದ ಆಧಾರದಲ್ಲಿ ತನಿಖೆ ನಡೆದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.