ADVERTISEMENT

ಮೈಸೂರು ಧರ್ಮಪ್ರಾಂತ್ಯ:ಹೊಸ ಧರ್ಮಾಧಿಕಾರಿ ಫ್ರಾನ್ಸಿಸ್‌ ಸೆರಾವೊ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 4:53 IST
Last Updated 8 ಅಕ್ಟೋಬರ್ 2025, 4:53 IST
ಮೈಸೂರಿನ ಅಶೋಕ ರಸ್ತೆಯಲ್ಲಿನ ಸೇಂಟ್‌ ಫಿಲೋಮಿನಾ ಕ್ಯಾಥೋಡ್ರೆಲ್‌ನಲ್ಲಿ ಆಯೋಜಿಸಿದ್ದ ನೂತನ ಧರ್ಮಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಫ್ರಾನ್ಸಿಸ್‌ ಸೆರಾವೊ ಅವರನ್ನು ಪ್ರಧಾನ ಸೇವಾ ಆಸನದಲ್ಲಿ ಕೂರಿಸಿ, ಪ್ರಧಾನ ದೇವಾಲಯಗಳ ಬೀಗದ ಕೀ ಹಸ್ತಾಂತರಿಸಲಾಯಿತು– ಪ್ರಜಾವಾಣಿ ಚಿತ್ರ
ಮೈಸೂರಿನ ಅಶೋಕ ರಸ್ತೆಯಲ್ಲಿನ ಸೇಂಟ್‌ ಫಿಲೋಮಿನಾ ಕ್ಯಾಥೋಡ್ರೆಲ್‌ನಲ್ಲಿ ಆಯೋಜಿಸಿದ್ದ ನೂತನ ಧರ್ಮಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಫ್ರಾನ್ಸಿಸ್‌ ಸೆರಾವೊ ಅವರನ್ನು ಪ್ರಧಾನ ಸೇವಾ ಆಸನದಲ್ಲಿ ಕೂರಿಸಿ, ಪ್ರಧಾನ ದೇವಾಲಯಗಳ ಬೀಗದ ಕೀ ಹಸ್ತಾಂತರಿಸಲಾಯಿತು– ಪ್ರಜಾವಾಣಿ ಚಿತ್ರ   

ಮೈಸೂರು: ಸಾವಿರಾರು ಭಕ್ತರ ಉಪಸ್ಥಿತಿ, ಧರ್ಮಗುರುಗಳ ಪ್ರಾರ್ಥನೆಯ ನಡುವೆ ಸೇಂಟ್‌ ಫಿಲೋಮಿನಾ ಕ್ಯಾಥೋಡ್ರೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫ್ರಾನ್ಸಿಸ್‌ ಸೆರಾವೊ ಅವರು ಮೈಸೂರು ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷ (ಬಿಷಪ್‌)ರಾಗಿ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು.

ಸಂಜೆಯಾಗುತ್ತಿದ್ದಂತೆ ಅಶೋಕ ರಸ್ತೆಯಲ್ಲಿರುವ ಸೇಂಟ್‌ ಫಿಲೋಮಿನಾ ಕ್ಯಾಥೋಡ್ರೆಲ್‌ ಭಕ್ತಿ, ಭಾವಗಳ ಸಂಗಮದೊಂದಿಗೆ ಕಂಗೊಳಿಸಿತು.

ಮೈಸೂರು ಧರ್ಮಪ್ರಾಂತ್ಯ ವ್ಯಾಪ್ತಿಯ ಮೈಸೂರು, ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ನೀಲಗಿರಿ, ಕೊಯಮತ್ತೂರು ಜಿಲ್ಲೆಗಳ ಚರ್ಚ್‌ಗಳ ಫಾದರ್‌ಗಳು, ನನ್‌ಗಳ ಪ್ರಾರ್ಥನೆಯು ಮಾರ್ದನಿಸಿತು.

ADVERTISEMENT

ಕ್ಯಾಥೋಡ್ರೆಲ್‌ನಲ್ಲಿ ಬಲಿಪೂಜೆ ನಡೆದ ಬಳಿಕ ಅತಿಥಿಗಳು ಮುಖ್ಯ ವೇದಿಕೆಗೆ ಆಗಮಿಸಿದರು. ಹಾಡುಗಾರರ ತಂಡವು ‘ಪ್ರಭು ದಯೇ ತೋರಿ, ಕ್ರಿಸ್ತರೇ ದಯೇ ತೋರಿ’ ಹಾಡು ಹಾಡಿ ನಮಿಸಿದರು. ಭಕ್ತರೂ ಅವರೊಂದಿಗೆ ದನಿಗೂಡಿಸಿದರು. ಕ್ರಿಸ್ತನ ಸಂದೇಶಗಳನ್ನು ಓದಿದರು.

ಗುರು ಜೋಸೆಫ್ ಅವರು ಫ್ರಾನ್ಸಿಸ್‌ ಸೆರಾವೊ ಅವರ ಆಯ್ಕೆ ಕುರಿತ ಆದೇಶ ಪತ್ರ ಓದಿದರು. ಬಳಿಕ ಫ್ರಾನ್ಸಿಸ್‌ ವಿಶ್ವಾಸ ಸಂಗ್ರಹ ನಿವೇದನೆ ಮಾಡಿದರು. ಕ್ರಿಸ್ತ ಸಭೆಗೆ, ವಿಶ್ವ ಗುರುವಿಗೆ ನಮಿಸುತ್ತಾ ಪ್ರಮಾಣ ವಚನ ಸ್ವೀಕರಿಸಿದರು.

ಬೆಂಗಳೂರಿನ ಆರ್ಚ್‌ ಬಿಷಪ್‌ ಪೀಟರ್‌ ಮೆಕಾಡೂ ಹಾಗೂ ಭಾರತ ಮತ್ತು ನೇಪಾಳದ ಅಪೋಸ್ಟೋಲಿಕ್ ಬೋಧಕರಾದ ಲಿಯೋಪೋಲ್ಡ್ ಗಿರೆಲ್ಲಿ ಅವರು ಫ್ರಾನ್ಸಿಸ್‌ ಸೆರಾವೊ ಅವರಿಗೆ ಪಾಲನ ದಂಡ ಪ್ರದಾನ ಮಾಡಿದರು.

ಬರ್ನಾಡ್‌ ಮೊರೆಸ್‌ ಅವರು ಪ್ರಧಾನ ದೇವಾಲಯಗಳ ಬೀಗದ ಕೀಗಳನ್ನು ಹಸ್ತಾಂತರಿಸಿದರು. ಬಳಿಕ ಎಲ್ಲಾ ಧರ್ಮಾಧ್ಯಕ್ಷರು, ಗುರುಗಳು ನೂತನ ಧರ್ಮಾಧ್ಯಕ್ಷರನ್ನು ಅಭಿನಂದಿಸಿದರು.

ಮೈಸೂರು ಡಯೋಸಿಸ್‌ನ ಅಪೋಸ್ಟೋಲಿಕ್‌ ಆಡಳಿತಾಧಿಕಾರಿ ಬರ್ನಾಡ್‌ ಮೊರೆಸ್‌ ಮಾತನಾಡಿ, ‘ಮೈಸೂರು ಧರ್ಮಕ್ಷೇತ್ರವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಹೊಸ ಚಿಂತನೆಯೊಂದಿಗೆ ನಡೆಯಿರಿ. ಇಲ್ಲಿನ ಭಕ್ತ ಸಮೂಹವನ್ನು ಉತ್ತಮ ಚಿಂತನೆಗಳೊಂದಿಗೆ ಮುನ್ನಡೆಯುವಂತೆ ಪ್ರೇರೇಪಿಸಿ’ ಎಂದರು.

ಮೈಸೂರಿನ ಅಶೋಕ ರಸ್ತೆಯಲ್ಲಿನ ಸೇಂಟ್‌ ಫಿಲೋಮಿನಾ ಕ್ಯಾಥೋಡ್ರೆಲ್‌ನಲ್ಲಿ ಆಯೋಜಿಸಿದ್ದ ನೂತನ ಧರ್ಮಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ವಿವಿಧ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರು ಭಾಗವಹಿಸಿದರು–  ಪ್ರಜಾವಾಣಿ ಚಿತ್ರ

ಬರ್ನಾಡ್ ಮೊರೆಸ್‌ಗೆ ಬೀಳ್ಕೊಡುಗೆ

ಮೈಸೂರು ಡಯೋಸಿಸ್‌ನ ಅಪೋಸ್ಟೋಲಿಕ್‌ ಆಡಳಿತಾಧಿಕಾರಿಯಾಗಿದ್ದ ಬರ್ನಾಡ್‌ ಮೊರೆಸ್‌ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.  ಮೈಸೂರು ಧರ್ಮಪ್ರಾಂತ್ಯದ ಬಿಷಪ್ ಆಗಿದ್ದ ಕೆ.ಎ.ವಿಲಿಯಂ 2024ರ ಜನವರಿಯಲ್ಲಿ ನೀಡಿದ್ದ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು.

ಬಳಿಕ ಆಡಳಿತಾಧಿಕಾರಿಯಾಗಿ ಬರ್ನಾಡ್‌ ಮೊರಾಸ್ ಕಾರ್ಯನಿರ್ವಹಿಸುತ್ತಿದ್ದರು. 2014ರಿಂದ ಶಿವಮೊಗ್ಗದಲ್ಲಿ ಬಿಷಪ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಫ್ರಾನ್ಸಿಸ್‌ ಸೆರಾವೊ ಅವರನ್ನು ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ನೇಮಿಸಿ 14ನೇ ಪೋಪ್‌ ಲಿಯೋ ಆದೇಶಿಸಿದ್ದರು. ಅವರು 1959ರ ಆ.15ರಂದು ಮೂಡಬಿದಿರೆಯಲ್ಲಿ ಜನಿಸಿದ್ದು 1979ರ ಜ.3ರಂದು ಸೊಸೈಟಿ ಆಫ್ ಜೀಸಸ್ (ಎಸ್‌ಜೆ) ಸೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.