ADVERTISEMENT

ಆಫ್ಗಾನ್‌ ಮಹಿಳೆಯರಿಗೆ ಇನ್ನು ಸ್ವಾತಂತ್ರ್ಯ ಕನಸು ಮಾತ್ರ: ವಿದ್ಯಾರ್ಥಿನಿ ಹಲೀಮಾ

ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ 

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 16:14 IST
Last Updated 21 ಆಗಸ್ಟ್ 2021, 16:14 IST
– ಹಲೀಮಾ ಅಕ್ಬಾರಿ, ‌ಮೈಸೂರಿನಲ್ಲಿ ಬಿ.ಎ ಓದುತ್ತಿರುವ ಅಫ್ಗಾನಿಸ್ತಾನದ ವಿದ್ಯಾರ್ಥಿನಿ
– ಹಲೀಮಾ ಅಕ್ಬಾರಿ, ‌ಮೈಸೂರಿನಲ್ಲಿ ಬಿ.ಎ ಓದುತ್ತಿರುವ ಅಫ್ಗಾನಿಸ್ತಾನದ ವಿದ್ಯಾರ್ಥಿನಿ   

ಮೈಸೂರು: ‘ಸದ್ಯಕ್ಕೆ ಮೈಸೂರು ಬಿಟ್ಟು ಬರಬೇಡ. ಚೆನ್ನಾಗಿ ಓದಿಕೋ ಎಂದು ಅಮ್ಮ ಒತ್ತಾಯಿಸುತ್ತಿದ್ದಾರೆ. ಆದರೆ, ನಾನಿಲ್ಲಿ ನೆಮ್ಮದಿಯಿಂದ ಇರಲಾರೆ, ನನ್ನ ದೇಶ ಅಫ್ಗಾನಿಸ್ತಾನಕ್ಕೂ ಹೋಗಲಾರೆ’

ನಗರದ ಮಹಾರಾಜ ಕಾಲೇಜಿನ ಬಿ.ಎ ವಿದ್ಯಾರ್ಥಿನಿ ಹಲೀಮಾ ಅಕ್ಬಾರಿ ಹೀಗೆ ಹೇಳಿದಾಗ ಅವರ ಕಣ್ಣಾಲಿಗಳಲ್ಲಿ ನೀರು ಜಿನುಗಿತು.

‘ಮಹಿಳೆಯರು ಶಿಕ್ಷಣ ಪಡೆಯುವುದನ್ನು ತಾಲಿಬಾನಿಗಳು ಇಷ್ಟಪಡುವುದಿಲ್ಲ. ಈಗ ಶಾಲಾ ಕಾಲೇಜು, ಕಚೇರಿ ಮುಚ್ಚಿವೆ. ಒಂದು ಕಡೆ ಭಯ, ಇನ್ನೊಂದು ಕಡೆ ಉದ್ಯೋಗವಿಲ್ಲದೆ ಹಣಕ್ಕೂ ತೊಂದರೆ. ನಮ್ಮ ಜನ ತಪ್ಪು ಮಾಡದಿದ್ದರೂಏಕೆ ಶಿಕ್ಷೆ? ಕುಟುಂಬಸ್ಥರು ಭಯದಲ್ಲಿದ್ದಾರೆ. ನನಗೆ ಅವರ ಚಿಂತೆ, ಅವರಿಗೆ ನನ್ನ ಚಿಂತೆ. ನೆಮ್ಮದಿಯೇ ಇಲ್ಲದ ಬದುಕು. ನಿದ್ದೆ ಬರುತ್ತಿಲ್ಲ, ಊಟ ಸೇರುತ್ತಿಲ್ಲ’ ಎಂದು ಶನಿವಾರ ‘ಪ್ರಜಾವಾಣಿ’ ಜೊತೆ ಮಾತಿಗಿಳಿದರು.

ADVERTISEMENT

2019ರಿಂದ ನಗರದಲ್ಲಿರುವ ಅವರು ಬಾಡಿಗೆ ಮನೆಯಲ್ಲಿ ಸ್ನೇಹಿತೆಯರೊಂದಿಗೆ ನೆಲೆಸಿದ್ದಾರೆ. ಕೊರೊನಾ ಲಾಕ್‌ಡೌನ್‌ ಕೂಡ ಬಾಧಿಸಿದೆ. ಈಗ ತಾಲಿಬಾನ್‌ ಬಂಡುಕೋರರು ಅಫ್ಗಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ತಮ್ಮ ಕುಟುಂಬದ ಪರಿಸ್ಥಿತಿ ಕುರಿತು ಆತಂಕಿತರಾಗಿದ್ದಾರೆ. ಈ ವಿದ್ಯಾರ್ಥಿನಿಯ ಪೋಷಕರು, ಅಣ್ಣ ಹಾಗೂ ತಂಗಿ ಘಸ್ನಿ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ. ತಂದೆ ವ್ಯಾಪಾರಿಯಾಗಿದ್ದು, ಅಣ್ಣ ಕಂಪನಿಯೊಂದರ ಉದ್ಯೋಗಿ. ಈಗ ಮನೆಯಿಂದಾಚೆ ಬರುತ್ತಿಲ್ಲ.

‘ನಾನಿಲ್ಲಿ ಸುರಕ್ಷಿತವಾಗಿರುವೆ. ಆದರೆ, ನನ್ನ ಹೃದಯ ನನ್ನ ದೇಶದ ಜನರಿಗಾಗಿ ತುಡಿಯುತ್ತಿದೆ. ನಮ್ಮವರೆಲ್ಲ ಅಪಾಯದಲ್ಲಿದ್ದಾರೆ. ನಾಳೆ ಏನಾಗುತ್ತದೋ ಗೊತ್ತಿಲ್ಲ. ಮಹಿಳೆಯರು ಮತ್ತೆ ಉದ್ಯೋಗಕ್ಕೆ, ಹೆಣ್ಣು ಮಕ್ಕಳು ಮತ್ತೆ ಶಾಲೆ–ಕಾಲೇಜಿಗೆ ಹೋಗಲು ಸಾಧ್ಯವೇ?’ ಎಂದು ಮೌನವಾದರು.

‘ನಮ್ಮ ಮನೆಯ ಎಲ್ಲರೂ ಮಾನಸಿಕವಾಗಿ ಜರ್ಜರಿತಗೊಂಡಿದ್ದಾರೆ. ಬ್ಯಾಂಕ್‌ ಮುಚ್ಚಿರುವುದರಿಂದ ಹಣಕಾಸಿಗೂ ತೊಂದರೆಯಾಗಬಹುದು. ನಾನು ಶಿಕ್ಷಣ ಮುಂದುವರಿಸಲೂ ಕಷ್ಟವಾಗಬಹುದು’ ಎಂದು ಹಲೀಮಾ ಆತಂಕ ವ್ಯಕ್ತಪಡಿಸಿದರು.

‘ನನ್ನ ದೇಶದ ಜನ ಶ್ರಮಜೀವಿಗಳು. ಹಲವು ಬಾರಿ ದಾಳಿಗಳು ನಡೆದಿದ್ದರೂ ಆತಂಕ್ಕೆ ಒಳಗಾಗಿರಲಿಲ್ಲ. ದೇಶವನ್ನು ಅಭಿವೃದ್ಧಿ ಹಾದಿಯಲ್ಲಿ ಕೊಂಡೊಯ್ಯುತ್ತಿರುವಾಗಲೇ ಮತ್ತೆ ಸಂಕಟ ಎದುರಾಗಿದೆ’ ಎಂದು ಮರುಕಪಟ್ಟರು.

ಭರವಸೆ ಕಳೆದುಕೊಳ್ಳಲಾರೆ. ಕತ್ತಲು ಮುಗಿದು ಬೆಳಕಾಗಲಿದೆ. ದೇಶದ ಜನರಿಗೂ ಇದೇ ಮಾತು ಹೇಳುತ್ತೇನೆ

– ಹಲೀಮಾ ಅಕ್ಬಾರಿ, ‌ಬಿ.ಎ ವಿದ್ಯಾರ್ಥಿನಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.