ಮೈಸೂರು: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ಮೈಸೂರು ಅಥ್ಲೆಟಿಕ್ಸ್ ಕ್ಲಬ್ ವತಿಯಿಂದ ಪ್ರೌಢಶಾಲಾ, ಪಿಯು, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಭಾನುವಾರ ಆಯೋಜಿಸಿದ್ದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಓಟ–2022’ದ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ವಿವಿಧ ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ಮೂಲಕ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕೊಡುವ ಜೊತೆಗೆ ಪ್ರೋತ್ಸಾಹ ನೀಡಲಾಯಿತು.
ಮೂರು ವಿಭಾಗಗಳಲ್ಲಿ (ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ–ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ) ಓಟದ ಸ್ಪರ್ಧೆ ನಡೆಸಲಾಯಿತು.
ಬಾಲಕಿಯರಿಗೆ 3 ಕಿ.ಮೀ., ಬಾಲಕರಿಗೆ 5 ಕಿ.ಮೀ. ಓಟ ನಿಗದಿಪಡಿಸಲಾಗಿತ್ತು. ಮೂರೂ ವಿಭಾಗಗಳಲ್ಲೂ ಮೊದಲ ಬಹುಮಾನ ₹ 1,000, ದ್ವಿತೀಯ ಬಹುಮಾನ ₹ 750, ತೃತೀಯ ಬಹುಮಾನ ₹ 500 ಮತ್ತು 4, 5 ಹಾಗೂ 6ನೇ ಸ್ಥಾನ ಗಳಿಸಿದವರಿಗೆ ಕ್ರಮವಾಗಿ ತಲಾ ₹ 200 ಜೊತೆಗೆ ಪದಕ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು. ಓಟ ಪೂರ್ಣಗೊಳಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಉಚಿತ ಪ್ರವೇಶ ನೀಡಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿ ಸಮೀಪದ ರಸ್ತೆಯಲ್ಲಿ ಆರಂಭವಾದ ಓಟಕ್ಕೆ ಡಿಸಿಪಿ ಪ್ರದೀಪ್ ಗುಂಟಿ ಹಸಿರು ನಿಶಾನೆ ತೋರಿಸಿದರು.
ಆರೋಗ್ಯಕ್ಕೆ ಕ್ರೀಡೆ ಸಹಕಾರಿ
ಬಳಿಕ ಮಾತನಾಡಿದ ಪ್ರದೀಪ್, ‘ದೇಶದ ಆರೋಗ್ಯ ಕಾಪಾಡಲು ಆರೋಗ್ಯವಂತ ಯುವಜನರ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕ್ರೀಡೆಯು ಸಹಕಾರಿಯಾಗಿದೆ. ಸ್ಪರ್ಧೆ ಆಯೋಜಿಸುವ ಮೂಲಕ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಮೈಸೂರು ಅಥ್ಲೆಟಿಕ್ಸ್ ಕ್ಲಬ್, ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಕಾರ್ಯ ಶ್ಲಾಘನೀಯವಾದುದು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಅಥ್ಲೆಟಿಕ್ಸ್ ಕ್ಲಬ್ ಅಧ್ಯಕ್ಷ ವಾಸು ಮಾತನಾಡಿ, ‘ಅಥ್ಲೆಟಿಕ್ಸ್ ಕ್ಲಬ್‌ನಲ್ಲಿ ಇರುವವರು ಕ್ರೀಡಾ ಕೂಟದಲ್ಲಿ ವಿವಿಧ ಕೆಲಸಕ್ಕೆ ಆಯ್ಕೆಯಾದವರೇ ಆಗಿದ್ದಾರೆ. ಕೆಲಸಕ್ಕೆ ಸೇರಿದ ಬಳಿಕವೂ ಅವರು ಪ್ರವೃತ್ತಿ ಬಿಟ್ಟಿಲ್ಲ. ರಾಜಕಾರಣದಲ್ಲಿ ಏನೇ ಮಾಡಿದರೂ ಇನ್ನೂ ಬಾಕಿ ಇದೆ ಎಂದೇ ಎನಿಸುತ್ತದೆ. ಮೈಸೂರಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ನನ್ನ ಗುರಿ ಇಂದಿಗೂ ಈಡೇರಿಲ್ಲ’ ಎಂದು ಹೇಳಿದರು.
‘ಪ್ರಸ್ತುತ ಯುವಜನರ ಫ್ಯಾಷನ್ ಬೇರೆ ಕಡೆ ಹೋಗುತ್ತಿದೆ. ಕ್ರೀಡೆಯತ್ತ ಅವರನ್ನು ಸೆಳೆದು ಪ್ರೋತ್ಸಾಹ ಕೊಡಬೇಕು’ ಎಂದು ಸಲಹೆ ನೀಡಿದರು.
ಶ್ರೀನಾಥ್, ಬಿ.ಜಿ.ಸತ್ಯನಾರಾಯಣ, ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ ಸಂಸ್ಥೆ ಮುಖ್ಯ ಸಂಯೋಜಕ ಸಿ.ಕೆ.ಮುರಳೀಧರ್ ಒಳಗೊಂಡ ತಂಡದವರು ಸ್ಪರ್ಧೆಯನ್ನು ನಿರ್ವಹಿಸಿದರು.
ಬಹುಮಾನ ವಿತರಣೆ
ಓವಲ್ ಮೈದಾನ ಆವರಣದ ಲಯನ್ಸ್ ಸಭಾಂಗಣದಲ್ಲಿ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ದಿ ಎಸ್ಟೇಟ್ ಹಾಗೂ ಯಂಗ್ ಐಲ್ಯಾಂಡ್ ಅಂಡ್ ರೆಸಾರ್ಟ್ ಮಾಲೀಕ ಮಹೇಶ್ ಶೆಣೈ, ‘ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಕ್ರೀಡೆ ಅಗತ್ಯವಾಗಿದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳು ಮೆಚ್ಚುವಂಥದ್ದು’ ಎಂದರು.
ಅಂತರರಾಷ್ಟ್ರೀಯ ಕ್ರೀಡಾಪಟು ಆರ್ಯನ್ ಪ್ರಜ್ವಲ್ ಕಶ್ಯಪ್ ಅವರನ್ನು ಸತ್ಕರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕೋಚ್ ಪ್ರಭಾಕರ್ ಮಾತನಾಡಿದರು.
‘ಡೆಕ್ಕನ್ ಹೆರಾಲ್ಡ್’ ವಿಶೇಷ ವರದಿಗಾರ ಟಿ.ಆರ್.ಸತೀಶ್‌ಕುಮಾರ್ ಸ್ವಾಗತಿಸಿದರು. ‘ಪ್ರಜಾವಾಣಿ’ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಸುಬ್ರಹ್ಮಣ್ಯ ನಿರೂಪಿಸಿದರು. ಮೈಸೂರು ಅಥ್ಲೆಟಿಕ್ಸ್ ಕ್ಲಬ್ ಕಾರ್ಯದರ್ಶಿ ಎಂ.ಯೋಗೇಂದ್ರ ವಂದಿಸಿದರು.
ಫಲಿತಾಂಶ ಇಂತಿದೆ
ವಿವಿಧ ವಿಭಾಗಗಳಲ್ಲಿ ಕ್ರಮವಾಗಿ ಮೊದಲ ಆರು ಬಹುಮಾನ ಗಳಿಸಿದವರು.
ಬಾಲಕರ ವಿಭಾಗ
* ಪ್ರೌಢಶಾಲೆ (3.ಕಿ.ಮೀ.): ಸೇಂಟ್ ಥಾಮಸ್ ಪ್ರೌಢಶಾಲೆಯ ಶಾರ್ವಿಕ್ ಎಸ್.ಆರ್., ಡಿಎಂಎಸ್ಎಚ್‌ಎಸ್‌ನ ಆರ್.ಕಿಶನ್, ಮರಿಮಲ್ಲಪ್ಪ ಪ್ರೌಢಶಾಲೆಯ ಅಮೋಘ್ ಬಿ., ಸಿ.ಕೆ.ಪುಟ್ಟಸ್ವಾಮಿ ಪ್ರೌಢಶಾಲೆಯ ಮನು ಆರ್., ಕರ್ನಾಟಕ ಪಬ್ಲಿಕ್ ಶಾಲೆಯ ಪುನೀತ್ ಎಂ.ಎಸ್., ಟಿ.ಸ್ವಾಮಿ ಪ್ರೌಢಶಾಲೆಯ ನಿಂಗರಾಜು ಕೆ.
* ಪಿಯು ಕಾಲೇಜು (5 ಕಿ.ಮೀ.): ವಿದ್ಯಾಶ್ರಮ ಪಿಯು ಕಾಲೇಜಿನ ಟಿ.ಕೆ.ಬೋಪಣ್ಣ, ಮರಿಮಲ್ಲಪ್ಪ ಪಿಯು ಕಾಲೇಜಿನ ವರುಣ್, ವಿವೇಕಾನಂದ ಪಿಯು ಕಾಲೇಜಿನ ಹಿತೇಶ್‌ಕುಮಾರ್, ಪಿಆರ್‌ಎಂ ಪಿಯು ಕಾಲೇಜಿನ ದೊರೆಸ್ವಾಮಿ ಎನ್., ಎಂಐಸಿಎ ಪಿಯು ಕಾಲೇಜಿನ ಶಶಾಂಕ್‌ಗೌಡ, ವಿದ್ಯೋದಯ ಪಿಯು ಕಾಲೇಜಿನ ವಿಶ್ವ ಎಂ.
* ಪದವಿ ಕಾಲೇಜು (5 ಕಿ.ಮೀ.): ಸೋಮಾನಿ ಕಾಲೇಜಿನ ಮಣಿಕಂಠ, ರಾಹುಲ್, ಮಹಾರಾಜ ಕಾಲೇಜಿನ ಪುರುಷೋತ್ತಮ, ಸೋಮಾನಿ ಕಾಲೇಜಿನ ಮಹದೇವಸ್ವಾಮಿ ಬಿ., ಪಿ.ಜಿ. ಕಾಲೇಜಿನ ಲಕ್ಷ್ಮಣ ಎಚ್.ಡಿ ಹಾಗೂ ಎಲ್.ಎ.ಡಿಸೋಜಾ.
ಬಾಲಕಿಯರ ವಿಭಾಗ
* ಪ್ರೌಢಶಾಲೆ (3.ಕಿ.ಮೀ.): ಕುರುಬೂರಿನ ಎಸ್‌ಎನ್‌ಎಸ್‌ಆರ್‌ಎಚ್ಎಸ್‌ನ ಮಾನಸಾ ಎನ್., ಅಂಕಿತಾ, ಸ್ಮಿತಾ, ಕುಂಬಾರಕೊಪ್ಪಲು ಕೆ.ಪುಟ್ಟಸ್ವಾಮಿ ಪ್ರೌಢಶಾಲೆಯ ವೈಷ್ಣವಿ ಎನ್., ಕುರುಬೂರಿನ ಎಸ್‌ಎನ್‌ಎಸ್‌ಆರ್‌ಎಚ್ಎಸ್‌ನ ಎಂ.ಅನನ್ಯಾ ಮತ್ತು ಕಾಂಚನಾ ಡಿ.
* ಪಿಯು ಕಾಲೇಜು (3 ಕಿ.ಮೀ.): ವಿದ್ಯೋದಯ ಪಿಯು ಕಾಲೇಜು ನಿಸರ್ಗಾ ಕೆ.ಎಂ., ಪೂಜಾ ಕೆ.ಪಿ., ಕೀರ್ತನಾ ಎಸ್., ವಿವೇಕಾನಂದ ಪಿಯು ಕಾಲೇಜಿನ ನಮ್ರತಾ ಆರ್., ವಿದ್ಯೋದಯ ಪಿಯು ಕಾಲೇಜಿನ ಭಾನುಪ್ರಿಯಾ ಎಸ್. ಹಾಗೂ ಐಶ್ವರ್ಯಾ ವಿ.
* ಪದವಿ ಕಾಲೇಜು (3 ಕಿ.ಮೀ.): ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿನ ತೇಜಶ್ವಿನಿ ಕೆ.ಆರ್., ಚೈತ್ರಾ ಬಿ., ಅರ್ಪಿತಾ ಆರ್., ತುಳಸಿ ಪಿ., ಮೋನಿಕಾ ಎಲ್. ಹಾಗೂ ಮೇಘನಾ ಎಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.