ಬೆಟ್ಟದಪುರ: ಗುರು, ಹಿರಿಯರಿಗೆ ಗೌರವ ಕೊಡುವ ಸಂಸ್ಕಾರವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಕನ್ನಡ ಮಠದಲ್ಲಿ ಪ್ರತಿ ವರ್ಷ ಮಹೋತ್ಸವ ಆಚರಿಸಿ ಉತ್ತಮ ವಿಚಾರಗಳನ್ನು ತಿಳಿಸಲಾಗುತ್ತಿದೆ ಎಂದು ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಗ್ರಾಮದ ಹೊರವಲಯದ ವಿರಕ್ತಮಠ ಮತ್ತು ಕನ್ನಡ ಮಠದಲ್ಲಿ ಗುರುವಾರ ಆಯೋಜಿಸಿದ್ದ ಚಿಕ್ಕವೀರ ದೇಶಿಕೇಂದ್ರ ಸ್ವಾಮೀಜಿಯ 97ನೇ ಗಣಾರಾಧನೆ, ಚನ್ನವೀರ ದೇಶಿಕೇಂದ್ರ ಸ್ವಾಮೀಜಿಯ 44ನೇ ಗಣಾರಾಧನೆ, ಕನ್ನಡ ಮಠದ ಸ್ಥಾಪನಾ ವರ್ಷಾಚರಣೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಕೃಷಿ ಪದ್ಧತಿಯಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಮಠ ಸಾವಯವ ಕೃಷಿಯನ್ನು ಅನುಸರಿಸಿದೆ. ಜೀವನ ಶೈಲಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಅದಕ್ಕಾಗಿ ಆಹಾರ ಮತ್ತು ಕೃಷಿ ಪದ್ಧತಿಗಳ ಬದಲಾವಣೆ ಪ್ರಮುಖವಾಗಿದೆ ಎಂದರು.
ಹೊಳೆನರಸೀಪುರ ತಾಲ್ಲೂಕಿನ ಮುಕುಂದೂರು ಮಠದ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಬಾಲ್ಯದಿಂದ ಕಲಿತ ಸಂಸ್ಕಾರ ಮತ್ತು ಗೌರವಗಳು ನಮ್ಮ ಜೀವನದ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಅವಕಾಶವಾಗುತ್ತದೆ ಎಂದರು. ಪ್ರಸಾದ ವಿನಿಯೋಗ ನಡೆಯಿತು.
ಪ್ರತಿಭಾ ಪುರಸ್ಕಾರ: ಸಾಧಕ ವಿದ್ಯಾರ್ಥಿಗಳ್ನು ಸನ್ಮಾನಿಸಲಾಯಿತು. ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಿಸಲಾಯಿತು. ದಿಂಡಗಾಡು ಮಠದ ಅಪ್ಪಾಜಿ ಸ್ವಾಮೀಜಿ, ಹಾಸನದ ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಮಠದ ಮಹಾಂತ ಶ್ರೀ ಯೋಗಿ ಸ್ವಾಮೀಜಿ, ಕಲ್ಯಾಣಪುರ ಮಠದ ಶರಣ ಮಾತೆ ಚಿನ್ಮಯಿ ನಂದೆ, ಲಾಲನಹಳ್ಳಿ ಮಠದ ಜಯದೇವಿ ಮಾತೆ, ಸರಗೂರು ಮಠದ ಮೃತ್ಯುಂಜಯ ಸ್ವಾಮೀಜಿ ವಿದ್ಯಾರ್ಥಿಗಳು ಮತ್ತು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.