ADVERTISEMENT

ಜಲಮೂಲ ಸಂರಕ್ಷಣೆಗೆ ‘ಗಾಂಧಿಗಿರಿ’

ಕುಕ್ಕರಹಳ್ಳಿ ಕೆರೆ, ‘ಕಲರ್‌ ಆಶ್ರಮ’ದಲ್ಲಿ ಪರಿಸರ ಕಾಳಜಿಯ ಹತ್ತಾರು ಕಾರ್ಯಕ್ರಮ ಇಂದು

ಸಿ.ಮೋಹನ್‌ ಕುಮಾರ್‌
Published 22 ಮಾರ್ಚ್ 2025, 5:40 IST
Last Updated 22 ಮಾರ್ಚ್ 2025, 5:40 IST
ಕುಕ್ಕರಹಳ್ಳಿ ಕೆರೆ
ಕುಕ್ಕರಹಳ್ಳಿ ಕೆರೆ   

ಮೈಸೂರು: ನಗರದ ಜಲನಿಧಿಗಳಾದ ಕುಕ್ಕರಹಳ್ಳಿ ಕೆರೆ, ಲಿಂಗಾಂಬುಧಿ ಕೆರೆ, ಕಾರಂಜಿ ಕೆರೆ ಉಳಿವಿಗೆ 70ರ ದಶಕದಿಂದಲೂ ಹೋರಾಟ, ಅರಿವು, ಜಾಗೃತಿ ಭಿನ್ನ ಮಾದರಿಯಲ್ಲಿ ನಡೆದಿದೆ. ಇದೀಗ ಹಿರಿಯ ಜೀವಗಳು ಕಿರಿಯರಿಗೆ ‘ಸುಸ್ಥಿರ ದಾರಿ’ಯನ್ನು ‘ವಿಶ್ವ ಜಲ ದಿನ’ದಂದು ತೋರುತ್ತಿದ್ದಾರೆ.

‘ವಾಟರ್ ಫೋರಂ ಮೈಸೂರು’ ಶನಿವಾರ (ಇಂದು) ಕುಕ್ಕರಹಳ್ಳಿ ಕೆರೆಯ ರೈಲ್ವೆ ಗೇಟ್‌ ಸಮೀಪದ ಮುಖ್ಯದ್ವಾರದಲ್ಲಿ ಕೆರೆ ಸಂರಕ್ಷಣೆ, ಪರಿಸರ ಕಾಳಜಿ ಕುರಿತು ಹತ್ತಾರು ಕಾರ್ಯಕ್ರಮಗಳನ್ನು ಚಿಣ್ಣರು, ಯುವಕರು ಹಾಗೂ ನಾಗರಿಕರಿಗೆ ಆಯೋಜಿಸಿದೆ. ಅದು ಸಂಜೆ ಹೆಬ್ಬಾಳದ ‘ಕಲರ್ ಆಶ್ರಮ’ದಲ್ಲಿ ಮುಂದುವರಿಯಲಿದೆ.

ವಿಶ್ವ ಜಲ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ‘ಮೈಸೂರು ಸ್ಟೋರಿಟೆಲ್ಲರ್ಸ್ ನೆಟ್‌ವರ್ಕ್’, ‘ಕಲರ್ ಆಶ್ರಮ್’, ‘ಮೈಸೂರು ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್’, ‘ಅರಣ್ಯ ಔಟ್‌ರೀಚ್ ಟ್ರಸ್ಟ್’ ಹಾಗೂ ‘ಮೈಸೂರು ಇಕೋ ಪ್ರಿಂಟ್ಸ್’ ಸಂಸ್ಥೆಗಳು ಕೈ ಜೋಡಿಸಿವೆ. 

ADVERTISEMENT

ಕುಕ್ಕರಹಳ್ಳಿ ಕೆರೆಯಲ್ಲಿ ಬೆಳಿಗ್ಗೆ 6.45ಕ್ಕೆ ಪಕ್ಷಿ ವೀಕ್ಷಣಾ ನಡಿಗೆ, ಮರ ವೀಕ್ಷಣಾ ನಡಿಗೆ, ಪ್ರಕೃತಿ ನಡಿಗೆಗಳು ನಡೆಯಲಿದ್ದು, ಆಸಕ್ತರು ಇಷ್ಟದ ನಡಿಗೆಯಲ್ಲಿ ಪಾಲ್ಗೊಂಡು ಪರಿಸರ ಕಾಳಜಿಯ ‘ಗಾಂಧಿಗಿರಿ’ ಸಾರಬಹುದು. ಯು.ಎನ್.ರವಿಕುಮಾರ್, ಕೆ.ಮನು ಸೇರಿದಂತೆ ಹತ್ತಾರು ಪರಿಸರ ತಜ್ಞರು ‘ಕೆರೆ ಸಂಸ್ಕೃತಿ’ ಕುರಿತು ಮಾತನಾಡಲಿದ್ದಾರೆ. ‘ಜೀವ ವೈವಿಧ್ಯ’ದ ಗುಟ್ಟು ರಟ್ಟು ಮಾಡಲಿದ್ದಾರೆ. 

ಇದೇ ವೇಳೆ ಚಿತ್ರಕಲೆಯ ಪ್ರಸ್ತುತಿಯೂ ಇರಲಿದೆ. ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯ 10 ವಿದ್ಯಾರ್ಥಿಗಳೊಂದಿಗೆ ಚಿಣ್ಣರು ಹನಿ ನೀರು, ಜಲಮೂಲಗಳ ಮಹತ್ವವನ್ನು ಚಿತ್ರಗಳಲ್ಲಿ ಕಟ್ಟಿಕೊಡಲಿದ್ದಾರೆ. ಬೆಳಿಗ್ಗೆ 9ಕ್ಕೆ ಕೆರೆ ಸಂರಕ್ಷಣೆ ಕುರಿತು ‘ಚರ್ಚೆ ಮತ್ತು ಪ್ರಸ್ತುತಿ’ ಇರಲಿದ್ದು, ಪರಿಸರ ತಜ್ಞರು ಮಾತನಾಡುವರು.

ಸುಸ್ಥಿರ ಬದುಕಿನ ಚರ್ಚೆ: ಹೆಬ್ಬಾಳ ಕೈಗಾರಿಕಾ ಪ್ರದೇಶದ ಪ್ಲಾಟ್‌ 277ರಲ್ಲಿರುವ ‘ಕಲರ್ ಆಶ್ರಮ’ದಲ್ಲಿ ಸಂಜೆ 5ಕ್ಕೆ ಚರ್ಚೆ ಹಾಗೂ ಸಂವಾದ ಇರಲಿದ್ದು, ಫ್ಯಾಷನ್‌ ಹಾಗೂ ನೀರಿನ ನಡುವಿನ ಸಂಬಂಧ ಹಾಗೂ ನೈಸರ್ಗಿಕ ಬಣ್ಣಗಳ ಕುರಿತು ನಮ್ರತಾ ಬುತೋರಿಯಾ ಮಾತನಾಡುವರು.

ಬಟ್ಟೆಗಳಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಿ ಉಡುಪು ಸಿದ್ಧಪಡಿಸುವ ಹಾಗೂ ವಿನ್ಯಾಸ ಮಾಡುವ ಸುಸ್ಥಿರ ದಾರಿಯನ್ನು ಅವರು ತೋರಲಿದ್ದಾರೆ. ನಂತರ ನೀರು ಮತ್ತು ಸುಸ್ಥಿರ ಅಭ್ಯಾಸಗಳ ಕುರಿತು ಸಂವಾದವಿದ್ದು,  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕುಕ್ಕರಹಳ್ಳಿ ಕೆರೆಯಲ್ಲಿ ‘ವಾಟರ್ ಫೋರಂ ಮೈಸೂರು’ ಸದಸ್ಯರು
.

Cut-off box - ‘ಜಲ ಸಂಸ್ಕೃತಿ ಉಳಿವು ಅಗತ್ಯ’  ‘2025ರ ವಿಶ್ವ ಜಲ ದಿನದ ಧ್ಯೇಯ ವಾಕ್ಯ ‘ಹಿಮನದಿಗಳ ಸಂರಕ್ಷಣೆ’. ಭಾರತದ ದಕ್ಷಿಣ ಪ್ರಸ್ಥಭೂಮಿಯಲ್ಲಿ ಕೆರೆ ನದಿ ಸೇರಿದಂತೆ ಜಲಮೂಲಗಳು. ಅವುಗಳ ಸಂರಕ್ಷಣೆ ಮಾಡುವುದು ಅಗತ್ಯ. ಜಲ ಸಂಸ್ಕೃತಿ ಉಳಿವಿಗೆ ಪರಿಸರ ಕಾಳಜಿ ಮೂಡಿಸಲು ಬೆಳಿಗ್ಗೆ ಹಾಗೂ ಸಂಜೆ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಪರಿಸರ ತಜ್ಞ ಯು.ಎನ್‌.ರವಿಕುಮಾರ್ ‍‘ಪ್ರಜಾವಾಣಿ’ಗೆ ತಿಳಿಸಿದರು. 

Cut-off box - ನೀರಿನ ಒಡಲು 73  ಮೈಸೂರು ನಗರ ಹಾಗೂ ಸುತ್ತಮುತ್ತ 28 ಕೆರೆ 31 ಕಟ್ಟೆ 14 ಕುಂಟೆಗಳಿವೆ. ಈ 73 ಜಲಮೂಲಗಳಲ್ಲಿ 35 ನೀರಿನ ಒಡಲುಗಳು ವರ್ಷ ಪೂರ್ತಿ ತುಂಬಿದ್ದರೆ ಉಳಿದವು ಮಳೆಗಾಲದಲ್ಲಿ ತುಂಬಿರುತ್ತವೆ. 70ರ ದಶಕದಲ್ಲಿ ಡಾ.ಮೇವಾ ಸಿಂಗ್ ಉಲ್ಲಾಸ್‌ ಕಾರಂತ್ ಡಾ.ಮಂಜ್ರೇಕರ್‌ ಅವರ ಹೋರಾಟದಿಂದ ಕುಕ್ಕರಹಳ್ಳಿ ಲಿಂಗಾಂಬುಧಿ ಕಾರಂಜಿ ಉಳಿದಿವೆ. ಇನ್ನುಳಿದ ಕೆರೆಗಳು ಅವಸಾನದತ್ತ ಮುಖ ಮಾಡಿವೆ. ಕೆರೆಗಳ ಜೊತೆಗೆ 3 ಎಕರೆ ವಿಸ್ತೀರ್ಣದ ಕಟ್ಟೆಗಳು 1 ಎಕರೆ ವಿಸ್ತೀರ್ಣದ ಕುಂಟೆಗಳು ತೀವ್ರ ಅಪಾಯದಲ್ಲಿವೆ. ಕುಕ್ಕರಹಳ್ಳಿ ಕೆರೆಯ ಮೂಲವಾದ ಮಹಾರಾಜ ಕಾಲುವೆ ‘ಪೂರ್ಣಯ್ಯ ನಾಲೆ’ ಚಾಮುಂಡಿ ಬೆಟ್ಟದ ಸುತ್ತಲಿನ ಜಲಮೂಲಗಳು ರಿಂಗ್‌ ರಸ್ತೆಯ ಹೊಂದಿಕೊಂಡಂತಿದ್ದ ಹಳ್ಳ ಜೌಗುಗಳಲ್ಲಿ ಕಟ್ಟಡ ತ್ಯಾಜ್ಯ ತುಂಬುತ್ತಿದೆ. ಐವತ್ತು ವರ್ಷದ ಹಿಂದೆ ಮೈಸೂರಿನ ಪ್ರತಿ ಮನೆಯಲ್ಲೂ 3 ಅಡಿ 4 ಅಡಿ ಅಗಲದ ಬಾವಿಗಳಿದ್ದವು. ಅಂತರ್ಜಲ ಮಟ್ಟ ಚೆನ್ನಾಗಿತ್ತು. ಅದಕ್ಕೆ ಕಾರಣ ಕೆರೆಗಳು. ದೊಡ್ಡಕೆರೆ ಸುಬ್ಬರಾಯನಕೆರೆ ಜೀವರಾಯನಕಟ್ಟೆ ಮಡಿವಾಳ ಕೆರೆ ಸೇರಿದಂತೆ ನಗರದ 18 ಕೆರೆಗಳು ಅಳಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.