ಕೆ.ಆರ್.ನಗರ: ‘ಗೌರಿ–ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಆಯೋಜಕರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು’ ಎಂದು ಸಬ್ ಇನ್‌ಸ್ಪೆಕ್ಟರ್ ಸಿ.ಎಂ.ಲಿಂಗರಾಜು ತಿಳಿಸಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಗೌರಿ–ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಮಾಡುವ ಆಯೋಜಕರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು, ಅಗ್ನಿಶಾಮಕ, ಸೆಸ್ಕ್, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯಬೇಕು’ ಎಂದರು.
‘ಪ್ರತಿಷ್ಠಾಪನೆಯ ಸ್ಥಳ ಖಾಸಗಿ ಜಾಗವಾಗಿದ್ದರೆ ಸ್ಥಳದ ಮಾಲೀಕರಿಂದ ಅನುಮತಿ ಪಡೆಯಬೇಕು, ಡಿ.ಜೆ ಬಳಸುವುದನ್ನು ಸರ್ಕಾರ ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆ ವರೆಗೆ ಧ್ವನಿವರ್ಧಕ ಬಳಸುವಂತಿಲ್ಲ, ಬಳಸುವುದಾದರೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು’ ಎಂದು ತಿಳಿಸಿದರು.
‘ಸಾರ್ವಜನಿಕ ಸುರಕ್ಷತೆಗೆ ಹೆಚ್ಚು ಒತ್ತು ಕೊಡಬೇಕು. ಪರಿಸರ ಮಾಲಿನ್ಯ ಉಂಟಾಗದಂತೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಪ್ರತಿಷ್ಠಾಪನೆ ಸ್ಥಳದಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಬೇಕು, ರಾತ್ರಿ ಮತ್ತು ಹಗಲು ವೇಳೆಯಲ್ಲಿ ಕಾವಲಿಗಾಗಿ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು’ ಎಂದರು.
‘ಮೂರ್ತಿಗಳನ್ನು ಸುರಕ್ಷಿತ, ನಿಯೋಜಿಸಿದ ಕಡೆ ವಿಸರ್ಜನೆ ಮಾಡಬೇಕು. ಇದರ ಸಂಪೂರ್ಣ ಜವಾಬ್ದಾರಿ ಆಯೋಜಕರದ್ದಾಗಿದೆ. ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗದಂತೆ ಕಾರ್ಯಕ್ರಮ ಆಯೋಜಿಸಬೇಕು, ಮುಂಚಿತವಾಗಿ ಮಾಹಿತಿ ನೀಡಬೇಕು’ ಎಂದರು.
‘ಆಯೋಜಕರು ಎಲ್ಲಾ ಷರತ್ತುಗಳಿಗೆ ಬದ್ಧರಾಗಿದ್ದಲ್ಲಿ ಮಾತ್ರ ಗೌರಿ–ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಅನುಮತಿ ನೀಡಲಾಗುವುದು. ಸರ್ಕಾರ ಆಗಿಂದಾಗ್ಗೆ ಹೊರಡಿಸುವ ಆದೇಶಗಳಿಗೆ ಅನುಗುಣವಾಗಿ ಯಾವುದೇ ಸಮಯದಲ್ಲಾದರೂ ಪೂರ್ವ ಮಾಹಿತಿ ನೀಡದೆ ಅನುಮತಿಯನ್ನು ರದ್ದು ಗೊಳಿಸಬಹುದಾಗಿದೆ’ ಎಂದು ಹೇಳಿದರು.
ಸಹಾಯಕ ಸಬ್ ಇನ್‌ಸ್ಪೆಕ್ಟರ್ ಶ್ರೀನಿವಾಸ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಪರಶುರಾಮೇಗೌಡ, ಅನಿಲ್ ಕುಮಾರ್, ಸಂಜಯ್, ಕಾನ್‌ಸ್ಟೆಬಲ್‌ಗಳಾದ ನಂಜುಂಡಸ್ವಾಮಿ, ವಿಜಯ್, ಗಿರೀಶ್, ಗುರು ಮತ್ತು ವಿನಯಶ್ರೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.