ಮೈಸೂರು: ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಭಾನುವಾರ ಸಾರ್ವಜನಿಕ ಗಣೇಶ ವಿಸರ್ಜನಾ ಸಮಿತಿ ವತಿಯಿಂದ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಯಿತು.
ವೀರನಗೆರೆ ವೀರಗಣಪತಿ ದೇವಸ್ಥಾನದ ಎದುರಿನಿಂದ ವಿವಿಧ ಕಡೆಗಳಿಂದ ಬಂದ ಮೂರ್ತಿಗಳು ಸಾಲುಗಟ್ಟಿ ನಿಂತವು. ದೇವಾಲಯದ ಅರ್ಚಕ ಪ್ರಹ್ಲಾದ್ ರಾವ್ ದೇವರಿಗೆ ಪಂಚಾಮೃತ ಅಭಿಷೇಕ, 108 ಮೋದಕಗಳ ಹೋಮ, ಪೂಜೆ ಸಲ್ಲಿಸಿದರು.
40ಕ್ಕೂ ಅಧಿಕ ಮೂರ್ತಿಗಳ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ನಡೆಯಿತು. ಕಂಸಾಳೆ, ಚೆಂಡೆ ನಾಸಿಕ್ ಬ್ಯಾಂಡ್‌ಗಳು ಮೆರುಗು ತುಂಬಿದವು. ಕೇಸರಿ ಬಾವುಟಗಳು ರಾರಾಜಿಸಿದವು. ಸಾರ್ವಜನಿಕರು ಮೆರವಣಿಗೆ ಕಣ್ತುಂಬಿಕೊಂಡರು.
ಮೆರವಣಿಗೆಯು ಅಶೋಕ ರಸ್ತೆ, ಕೋಟೆ ಆಂಜನೇಯ ದೇವಸ್ಥಾನ, ದೇವರಾಜು ಅರಸು ರಸ್ತೆಯ ಮೂಲಕ ತೆರಳಿತು. ಭಗತ್‌ಸಿಂಗ್, ಬಾಲಗಂಗಾಂಧರನಾಥ ತಿಲಕ್, ಶಿವಾಜಿ, ಬುದ್ಧ, ಬಸವಣ್ಣ, ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರಗಳು ರಾರಾಜಿಸಿದವು.
20ಕ್ಕೂ ಅಧಿಕ ಮಂಡಳಿಗಳು ಸಂತ ಫಿಲೋಮಿನಾ ಚರ್ಚ್ ವೃತ್ತ, ಆಜಂ ಮಸೀದಿ ವೃತ್ತ, ಮಿಲಾದ್ ಉದ್ಯಾನ, ಅಶೋಕ ರಸ್ತೆ ಮಾರ್ಗವಾಗಿ ದೇವರಾಜ ಅರಸು ರಸ್ತೆಯಲ್ಲಿ ಸಾಗಿ ಜೆಎಲ್‌ಬಿ ರಸ್ತೆಯಲ್ಲಿ ಮೆರವಣಿಗೆ ಕೊನೆಗೊಂಡಿತು. ನಂತರ, ಶ್ರೀರಂಗಪಟ್ಟಣದ ಸಾಯಿಬಾಬಾ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಪೊಲೀಸ್ ಬಂದೋಬಸ್ತ್: ನಗರ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಮೆರವಣಿಗೆ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿದರು. ನಗರ ಸಶಸ್ತ್ರ ಪೊಲೀಸ್, ಮೊಬೈಲ್ ಕಮಾಂಡರ್ ವಾಹನ, ಚಾಮುಂಡಿ ಪಡೆಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿತ್ತು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಶ್ರೀವತ್ಸ, ಕೆ. ಹರೀಶ್ ಗೌಡ, ಮಾಜಿ ಸಂಸದ ಪ್ರತಾಪ ಸಿಂಹ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ಸಮಿತಿ ಪದಾಧಿಕಾರಿಗಳಾದ ಶ್ರೀನಿವಾಸ್, ಸು.ಮುರಳಿ, ಸಂಪತ್ ಭಾಗವಹಿಸಿದ್ದರು.
ಪಟಾಕಿ ಸಿಡಿದು ಗಾಯ
ಮೈಸೂರು: ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಯು ದೇವರಾಜ ಅರಸು ರಸ್ತೆಯಲ್ಲಿ ಸಾಗುವಾಗ ಪಟಾಕಿ ಸಿಡಿಸಿದ್ದು, ಈ ವೇಳೆ ಶ್ರೀರಾಮಸೇನೆ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ್ ಬಲಗಣ್ಣಿಗೆ ಗಾಯವಾಗಿದೆ.
ಮೈಸೂರು ಸಾರ್ವಜನಿಕ ಗಣೇಶ ವಿಸರ್ಜನಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆ ಡಿ.ದೇವರಾಜ ಅರಸು ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಇದೇ ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ ಎದುರು ಪಟಾಕಿ ಸಿಡಿಸುತ್ತಿದ್ದಾಗ, ಬೆಂಕಿಯ ಕಿಡಿ ತಗುಲಿ, ಕಣ್ಣಿಗೆ ಗಾಯವಾಗಿದೆ. ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.