ADVERTISEMENT

ಘಟಿಕೋತ್ಸವ: ಜನ್ನಿ ಸೇರಿ ಮೂವರಿಗೆ ಸಂಗೀತ ವಿವಿ ಗೌರವ ಡಾಕ್ಟರೇಟ್

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 8:10 IST
Last Updated 7 ನವೆಂಬರ್ 2025, 8:10 IST
ಎಚ್‌. ಜನಾರ್ಧನ್‌
ಎಚ್‌. ಜನಾರ್ಧನ್‌   

ಮೈಸೂರು: ರಂಗಕರ್ಮಿ ಎಚ್‌. ಜನಾರ್ಧನ್ (ಜನ್ನಿ) ಸೇರಿ ಮೂವರು ಸಾಧಕರನ್ನು ಇಲ್ಲಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.

ಸಂಗೀತ ಕ್ಷೇತ್ರದಿಂದ ಪ್ರೊ.ಬಿ.ಆರ್. ಶೇಷಾದ್ರಿ ಅಯ್ಯಂಗಾರ್ ಮತ್ತು ಜಾನಪದ ಸಂಗೀತ ಕ್ಷೇತ್ರದಿಂದ ಜಿ.ಎಂ. ಶಿವಪ್ರಸಾದ್ (ಗೊಲ್ಲಹಳ್ಳಿ ಶಿವಪ್ರಸಾದ್) ಅವರನ್ನು ಆಯ್ಕೆ ಮಾಡಲಾಗಿದೆ. ನಗರದ ಲಕ್ಷ್ಮೀಪುರಂನಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ನ.8ರಂದು ಬೆಳಿಗ್ಗೆ 11.30ಕ್ಕೆ ನಡೆಯುವ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು.

2024–25ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಡಿ.ಲಿಟ್ ಪದವಿ ಪ್ರದಾನ ನಡೆಯಲಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಪಾಲ್ಗೊಳ್ಳುವರು. ಕೇರಳದ ಕಲಾಮಂಡಲಂ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ. ಅನಂತಕೃಷ್ಣನ್ ಮುಖ್ಯ ಅತಿಥಿಯಾಗಿರಲಿದ್ದಾರೆ.

ADVERTISEMENT

7 ಮಂದಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಗುವುದು. ಸ್ನಾತಕೋತ್ತರ ಪದವಿ (ಎಂಪಿಎ) ಯಲ್ಲಿ ಶ್ರವ್ಯಾ ಎ. ಭರತನಾಟ್ಯ ವಿಭಾಗದಲ್ಲಿ 6 ಚಿನ್ನದ ಪದಕ ಗಳಿಸಿದ್ದಾರೆ. ಲತಾ ವಿ. (ಕರ್ನಾಟಕ ಸಂಗೀತ ಗಾಯನ ವಿಭಾಗ) 5, ಡಿ.ಎನ್. ಇಂದ್ರಕುಮಾರ್ (ಹಿಂದೂಸ್ತಾನಿ ಸಂಗೀತ ಗಾಯನ ವಿಭಾಗ) 3, ಶ್ರೀಕಾಂತ್ ಎಸ್. ಹಾಗೂ ಸಿ.ನಂಜುಂಡಸ್ವಾಮಿ (ನಾಟಕ ವಿಭಾಗ) ತಲಾ ಒಂದು ಚಿನ್ನದ ಪದಕ ಪಡೆದಿದ್ದಾರೆ.

ಸ್ನಾತಕ ಪದವಿಯಲ್ಲಿ (ಬಿಪಿಎ) ಪಿ. ಪುನೀತಾ (ಕರ್ನಾಟಕ ಸಂಗೀತ ಗಾಯನ ವಿಭಾಗ) 4, ಸಂಜಯ್‌ ಎಂ. (ಹಿಂದೂಸ್ತಾನಿ ಸಂಗೀತ ಗಾಯನ ವಿಭಾಗ) 2 ಹಾಗೂ ಸುಜನಾ ಎಂ.ಬಿ. (ಭರತನಾಟ್ಯ ವಿಭಾಗ) ಒಂದು ಚಿನ್ನದ ಪದಕ ಗಳಿಸಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.