ADVERTISEMENT

ಮೈಸೂರಿನಲ್ಲಿ ಗಾಂಜಾ ಮಾರಾಟ; ಇಬ್ಬರ ಬಂಧನ

ಮಂಡಿ ಮತ್ತು ಉದಯಗಿರಿ ಠಾಣೆಯ ಪೊಲಿಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 10:31 IST
Last Updated 25 ಅಕ್ಟೋಬರ್ 2018, 10:31 IST

ಮೈಸೂರು: ನಗರದಲ್ಲಿ ಪತ್ತೆಯಾದ ಪ್ರತ್ಯೇಕ ಗಾಂಜಾ ಮಾರಾಟ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಒಟ್ಟು 630 ಗ್ರಾಂನಷ್ಟು ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ. ಮಂಡಿ ಮೊಹಲ್ಲಾದ ರೆಹಮತ್‌ ಉಲ್ಲಾ (30) ಹಾಗೂ ಗೌಸಿಯಾನಗರದ ನಿವಾಸಿ ಕಲೀಂ ಪಾಷ ಬಂಧಿತರು.

ಪ್ರಕರಣಗಳ ವಿವರ:ಮಂಡಿಮೊಹಲ್ಲಾದ ಸುನ್ನಿಚೌಕದ ಬಳಿಯ ಎಂಕೆಟಿಕೆ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ರೆಹಮತ್ ಉಲ್ಲಾ ಎಂಬಾತನನ್ನು ಮಂಡಿ ಠಾಣೆ ಪೊಲೀಸರು ಬುಧವಾರ ಬಂಧಿಸಿ, ಆತನಿಂದ 230 ಗ್ರಾಂ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ.

ಸಾತಗಳ್ಳಿ ಬಸ್‌ ಡಿಪೂ ಹಿಂಭಾಗದಲ್ಲಿರುವ ರಿಂಗ್‌ ರಸ್ತೆಯ ಸರ್ವೀಸ್‌ ರಸ್ತೆಯಲ್ಲಿ ಉದಯಗಿರಿ ಠಾಣೆಯ ಎಎಸ್‌‌ಐ ಬೀರಪ್ಪ ಅವರು ಗಸ್ತು ಕಾರ್ಯ ನಡೆಸುತ್ತಿದ್ದಾಗ ಕಲೀಂ ಪಾಷ ಎಂಬಾತ ವ್ಯಕ್ತಿಯೊಬ್ಬನ ಜತೆ ಜಗಳವಾಡುತ್ತಿದ್ದ. ಜಗಳ ಬಿಡಿಸಲು ಬಂದ ಬೀರಪ್ಪ ಕಲೀಂಪಾಷ ಬಳಿ ಇದ್ದ ಪ್ಲಾಸ್ಟಿಕ್ ಕವರ್‌ನ್ನು ಪರಿಶೀಲಿಸಿದಾಗ 9 ಚಿಕ್ಕ ಪ್ಯಾಕೇಟ್‌ನಲ್ಲಿ 300-400 ಗ್ರಾಂನಷ್ಟು ಗಾಂಜಾ ಸೊಪ್ಪು ಇತ್ತು. ವಿಚಾರಣೆ ನಡೆಸಿದಾಗ ಈ ಸೊಪ್ಪನ್ನು ಆತ ನಗರ ಗ್ರಾಮಾಂತರ ಬಸ್‌‌ ನಿಲ್ದಾಣದ ಬಳಿ ಆಗಾಗ್ಗೆ ಕಾಣ ಸಿಗುವ ಒಬ್ಬ ವ್ಯಕ್ತಿಯಿಂದ ಈ ಗಾಂಜಾ ಸೊಪ್ಪನ್ನು ಖರೀದಿಸಿ ತಂದಿದ್ದಾಗಿ ತಿಳಿಸಿದ್ದಾನೆ. ಅಷ್ಟರಲ್ಲಿ ಜಗಳವಾಡುತ್ತಿದ್ದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಈ ಕುರಿತು ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.