ಜಯಪುರ: ಅಯೋಧ್ಯೆ ಬಾಲರಾಮನ ವಿಗ್ರಹದ ಕೃಷ್ಣಶಿಲೆ ಸಿಕ್ಕ ಸ್ಥಳ, ತಾಲ್ಲೂಕಿನ ಹಾರೋಹಳ್ಳಿಗೆ ಸೋಮವಾರ ಪೂಜೆಗೆ ಆಗಮಿಸಿದ ಸಂಸದ ಪ್ರತಾಪ ಸಿಂಹ ಅವರಿಗೆ ದಲಿತ ಮುಖಂಡರು ಘೇರಾವ್ ಹಾಕಿದರು.
ಶಿಲೆ ಸಿಕ್ಕಿರುವ ದಲಿತ ಸಮುದಾಯದ ರಾಮದಾಸ್ ಎಂಬುವರ ಜಮೀನಿನಲ್ಲಿ ರಾಮ ಮಂದಿರ ಸ್ಥಾಪನೆಗೆ ಬೆಳಿಗ್ಗೆ 7ರ ವೇಳೆ ಪೂಜೆ ನಡೆದಿತ್ತು. ಈ ವೇಳೆ ಪ್ರತಾಪ ಸಿಂಹ ಆಗಮಿಸಿದಾಗ, 'ದಲಿತ ವಿರೋಧಿ ಹೇಳಿಕೆಗಳನ್ನು ನೀಡುವ ನೀವೇಕೆ ಇಲ್ಲಿಗೆ ಬಂದಿದ್ದೀರಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಧನಗಳ್ಳಿ ಸ್ವಾಮಿ, ಕಾಂಗ್ರೆಸ್ ಮುಖಂಡ ಸುರೇಶ್ ಕುಮಾರ್ ಸೇರಿದಂತೆ ಹಲವರು, 'ದಲಿತ ವಿರೋಧಿ ಸಂಸದರೇ ದಲಿತರ ಜಮೀನಿನಲ್ಲಿ ನಡೆಯುವ ಪೂಜೆಗೆ ಬರಬಾರದು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಮಹಿಷ ದಸರಾ ಕಾರ್ಯಕ್ರಮ ಆಯೋಜನೆ ಸಂದರ್ಭದಲ್ಲಿ ದಲಿತರ ಬಗ್ಗೆ ನಿಂದಿಸಿದ್ದೀರಿ.
ಸಮಾಜದ ಸಾಮರಸ್ಯವನ್ನು ಹಾಳುಮಾಡುವ ನೀವು ದಲಿತರ ಜಮೀನಿನಲ್ಲಿ ಆಯೋಜಿಸಿರುವ ರಾಮನ ಪೂಜೆಯಲ್ಲಿ ಭಾಗವಹಿಸಬೇಡಿ' ಎಂದು ತಾಕೀತು ಮಾಡಿದರು.
'ಹಾರೋಹಳ್ಳಿ ಗ್ರಾಮದಲ್ಲಿ ಎಲ್ಲಾ ಜಾತಿ ಜನಾಂಗದವರು ಸಾಮರಸ್ಯದಿಂದ ಇದ್ದೇವೆ. ಅದನ್ನು ಕದಡುವ ಕೆಲಸ ಮಾಡಬೇಡಿ' ಎಂದು ಹೇಳಿದರು.
ಶಾಸಕರಾದ ಜಿ.ಟಿ ದೇವೇಗೌಡ, ಟಿ.ಎಸ್
ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮುಖಂಡ ಸಾ.ರಾ ಮಹೇಶ್, ದಲಿತ ಮುಖಂಡರನ್ನು ಮನವೊಲಿಸಲು ಮುಂದಾದರು. ಬಹು ಸಂಖ್ಯೆಯಲ್ಲಿ ನೆರೆದಿದ್ದ ದಲಿತ ಮುಖಂಡರು ಪ್ರತಾಪ್ ಸಿಂಹ ಅವರಿಗೆ ಧಿಕ್ಕಾರ ಕೂಗಿದರು. ಘೇರಾವ್ ಹಾಕಿದರು. ಪೂಜಾ ಕಾರ್ಯಕ್ರಮಕ್ಕೆ ಬರದಂತೆ ಅಡ್ಡಗಟ್ಟಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮರು ಮಾತನಾಡದ ಸಂಸದ ಪ್ರತಾಪಸಿಂಹ ಸ್ಥಳದಿಂದ ಕಾರಿನಲ್ಲಿ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.