ADVERTISEMENT

₹3 ಸಾವಿರ ದಾಟಿದ ಹಸಿಶುಂಠಿ ದರ: ಅವಧಿಪೂರ್ವ ಕೊಯ್ಲಿಗೆ ಮುಂದಾದ ರೈತರು

ಆರ್.ಜಿತೇಂದ್ರ
Published 12 ಅಕ್ಟೋಬರ್ 2025, 1:12 IST
Last Updated 12 ಅಕ್ಟೋಬರ್ 2025, 1:12 IST
<div class="paragraphs"><p>ಮೈಸೂರು ತಾಲ್ಲೂಕಿನ ಕೊಮ್ಮೇಗೌಡನಕೊಪ್ಪಲು ಗ್ರಾಮದ ಹೊಲದಲ್ಲಿ ಶುಂಠಿ ಕೊಯ್ಲಿನಲ್ಲಿ ನಿರತರಾದ ಕಾರ್ಮಿಕ ಮಹಿಳೆಯರು </p></div>

ಮೈಸೂರು ತಾಲ್ಲೂಕಿನ ಕೊಮ್ಮೇಗೌಡನಕೊಪ್ಪಲು ಗ್ರಾಮದ ಹೊಲದಲ್ಲಿ ಶುಂಠಿ ಕೊಯ್ಲಿನಲ್ಲಿ ನಿರತರಾದ ಕಾರ್ಮಿಕ ಮಹಿಳೆಯರು

   

– ಪ್ರಜಾವಾಣಿ ಚಿತ್ರ

ಮೈಸೂರು: ಹಸಿಶುಂಠಿ ಧಾರಣೆಯು ಈ ಹಂಗಾಮಿನಲ್ಲಿ ಮೊದಲ ಬಾರಿಗೆ ₹3 ಸಾವಿರದ ಗಡಿ ದಾಟಿದ್ದು, ರೈತರು ಅವಧಿ ಪೂರ್ವ ಕೊಯ್ಲಿಗೆ ಮುಂದಾಗಿದ್ದಾರೆ.

ADVERTISEMENT

ಕಳೆದ ತಿಂಗಳಷ್ಟೇ ಹಸಿಶುಂಠಿ ದರ ಪ್ರತಿ ಚೀಲಕ್ಕೆ (60 ಕೆ.ಜಿ.) ₹1500-1800 ಇತ್ತು. ಶನಿವಾರ ಚೀಲಕ್ಕೆ ₹3,000-3,200ರಂತೆ ಖರೀದಿ ನಡೆಯಿತು. ಒಂದೆರಡು ವಾರದಲ್ಲೇ ಪ್ರತಿ ಚೀಲಕ್ಕೆ ಸರಾಸರಿ ₹1,000–1,500ರಷ್ಟು ಬೆಲೆ ಹೆಚ್ಚಾಗಿದೆ.

ಸಾಮಾನ್ಯವಾಗಿ ಜನವರಿ–ಫೆಬ್ರುವರಿಯಲ್ಲಿ ಶುಂಠಿ ಕೊಯ್ಲು ನಡೆಯುತ್ತದೆ. ಆದರೆ ಈ ವರ್ಷ ರೋಗಬಾಧೆಯಿಂದ ಬೆಳೆ ಒಣಗಿರುವ ಕಡೆ ಕೊಳೆಯಲು ಶುರುವಾಗಿದೆ. ಅಂತಹ ಜಮೀನುಗಳಲ್ಲಿ ಅವಧಿಪೂರ್ವ ಕೊಯ್ಲು ನಡೆದಿದೆ.

ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಈಚಿನ ವರ್ಷಗಳಲ್ಲಿ ಶುಂಠಿಯನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಮೈಸೂರು ಜಿಲ್ಲೆ ಒಂದರಲ್ಲಿಯೇ 8 ಸಾವಿರ ಹೆಕ್ಟೇರ್‌ಗೂ ಅಧಿಕ ಜಮೀನಿನಲ್ಲಿ ಶುಂಠಿ ಬಿತ್ತನೆಯಾಗಿದೆ.

ಆದರೆ ತೀವ್ರ ರೋಗಬಾಧೆಯ ಕಾರಣಕ್ಕೆ ಅರ್ಧದಷ್ಟು ಫಸಲು ರೈತರ ಕೈ ಸೇರಿಲ್ಲ. ಬೆಳೆಯನ್ನು ಉಳಿಸಿಕೊಳ್ಳುವುದೋ, ಸಿಕ್ಕಷ್ಟು ದರಕ್ಕೆ ಮಾರುವುದೋ ಎನ್ನುವ ಚಿಂತೆಯಲ್ಲಿದ್ದವರಿಗೆ ದರ ಏರಿಕೆಯು ಸಮಾಧಾನ ತಂದಿದೆ.

ಕೆಲವು ವರ್ಷಗಳ ಹಿಂದೆ ಶುಂಠಿಗೆ ಪ್ರತಿ ಚೀಲಕ್ಕೆ ₹5–6 ಸಾವಿರದವರೆಗೂ ದಾಖಲೆಯ ಬೆಲೆ ಸಿಕ್ಕಿತ್ತು. ರೈತರು ಇದೇ ಹುರುಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಆದರೆ ಇದೇ ವರ್ಷ ಜನವರಿ–ಫೆಬ್ರುವರಿಯಲ್ಲಿ ₹1,000–1,200ಕ್ಕೆ ಧಾರಣೆ ಕುಸಿದಿತ್ತು. ಮೇನಲ್ಲಿ ಕೇಂದ್ರ ಸರ್ಕಾರವು ರೈತರಿಂದ ಪ್ರತಿ ಕ್ವಿಂಟಲ್‌ಗೆ ₹2,445ರ ದರದಲ್ಲಿ ರೈತರಿಂದ ಉತ್ಪನ್ನ ಖರೀದಿಸಿತ್ತು.

ಶುಂಠಿ ಬೆಳೆಯಲು ಎಕರೆಗೆ ₹5–6 ಲಕ್ಷ ಬೇಕು. ರೋಗಬಾಧೆಯಿಂದ ಖರ್ಚು ದುಪ್ಪಟ್ಟಾಗಿದ್ದು ಅರ್ಧದಷ್ಟು ಬೆಳೆ ನಾಶವಾಗಿದೆ
ಉಮೇಶ್‌, ರೈತ ಕೊಮ್ಮೇಗೌಡನಕೊಪ್ಪಲು ಮೈಸೂರು ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.